ಪಾಪೆಮಜಲು ಸರಕಾರಿ ಪ್ರೌಢ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

0

ಸಂವಿಧಾನ ಸರ್ವಶ್ರೇಷ್ಠ ಗ್ರಂಥ-ಎಂ.ಬಿ ವಿಶ್ವನಾಥ ರೈ

ಪುತ್ತೂರು: ಪಾಪೆಮಜಲು ಸರಕಾರಿ ಪ್ರೌಢ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು. ಶಾಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.

ಅತಿಥಿಯಾಗಿದ್ದ ವಿಜಯಾ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್ ಎಂ.ಬಿ ವಿಶ್ವನಾಥ ರೈ ಮಾತನಾಡಿ, ಸಂವಿಧಾನವೇ ಸರ್ವ ಶ್ರೇಷ್ಠ ಗ್ರಂಥ. ಎಲ್ಲಾ ಧರ್ಮ ಗ್ರಂಥಗಳ ಆಶಯ ಸಂವಿಧಾನದ ಆಶಯವಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ ಎಂದು ಹೇಳಿದರು.

ಇನ್ನೋರ್ವ ಅತಿಥಿ ಪತ್ರಕರ್ತ ಯೂಸುಫ್ ರೆಂಜಲಾಡಿ ಮಾತನಾಡಿ, ನಮ್ಮ ದೇಶದ ಸಂವಿಧಾನ ವಿಶ್ವಕ್ಕೇ ಮಾದರಿಯೆನಿಸಿದ ಸಂವಿಧಾನವಾಗಿದೆ, ಗಣರಾಜ್ಯೋತ್ಸವವನ್ನು ನಾವು ಒಂದು ದಿನ ಆಚರಿಸುತ್ತೇವೆಯಾದರೂ ಸಂವಿಧಾನ ನಮಗೆ ನೀಡಿದ ಅವಕಾಶಗಳು ನಮ್ಮ ನಿತ್ಯ ಜೀವನದಲ್ಲಿ ಅಳವಡಿಕೆಯಾಗುತ್ತಿದೆ ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಶಾಲಾ ಕಾರ್ಯಾಧ್ಯಕ್ಷ ಇಕ್ಬಾಲ್ ಹುಸೇನ್ ಮಾತನಾಡಿ, ಗಣರಾಜ್ಯೋತ್ಸವವನ್ನು ನಾವೆಲ್ಲರೂ ಸಂಭ್ರಮದಿಂದ ಆಚರಿಸುತ್ತಿದ್ದು ನಮ್ಮ ಶಾಲೆಯಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡಿರುವುದಕ್ಕೆ ಹೆಮ್ಮೆಯಿದೆ. ಪಾಪೆಮಜಲು ಶಾಲೆಯಲ್ಲಿ ಕೊಠಡಿ ವ್ಯವಸ್ಥೆಯಿದ್ದು, ಇಲ್ಲಿ ಪಿಯುಸಿ ಪ್ರಾರಂಭಿಸುವ ಬಗ್ಗೆ ನಾವು ಕಾರ್ಯೋನ್ಮುಖರಾಗಿದ್ದೇವೆ ಎಂದು ಹೇಳಿದರು. ಸ್ವಾಗತಿಸಿದ ಶಾಲಾ ಮುಖ್ಯ ಶಿಕ್ಷಕ ಮೋನಪ್ಪ ಬಿ ಪೂಜಾರಿ ಮಾತನಾಡಿ, ಗಣರಾಜ್ಯೋತ್ಸವ ರಾಷ್ಟ್ರೀಯ ಹಬ್ಬವಾಗಿದ್ದು ಅದನ್ನು ನಮ್ಮ ದೇಶದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ಹೇಳಿದರು.

ವಿವಿಧ ಭಾಷೆಯಲ್ಲಿ ಭಾಷಣ:
ವಿದ್ಯಾರ್ಥಿಗಳಾದ ನಿಶ್ಮಿತಾ ತುಳುಭಾಷೆಯಲ್ಲಿ, ಭವ್ಯಶ್ರೀ ಇಂಗ್ಲೀಷ್‌ನಲ್ಲಿ, ರಕ್ಷಾ ಹಿಂದಿಯಲ್ಲಿ ಹಾಗೂ ಧನ್ವಿತ್ ಕನ್ನಡದಲ್ಲಿ ಭಾಷಣ ಮಾಡಿದರು.

ವೇದಿಕೆಯಲ್ಲಿ ಶಿಕ್ಷಣ ತಜ್ಞ ದಶರಥ ರೈ, ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಭಾಗೀರಥಿ, ಸುಮಯ್ಯ, ಸುಂದರಿ, ರೇವತಿ ಉಪಸ್ಥಿತರಿದ್ದರು. ಶಿಕ್ಷಕಿ ಪ್ರವೀಣಾ ರೈ ವಂದಿಸಿದರು. ಶಿಕ್ಷಕಿ ಸವಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಹರಿಪ್ರಸಾದ್ ಕೆ, ಶಿಕ್ಷಕಿಯರಾದ ಪೂರ್ಣಿಮಾ ಶೆಟ್ಟಿ, ಇಂದಿರಾ ಕೆ, ಶಾಲೆಟ್ ಜೇನ್ ರೆಬೆಲ್ಲೋ, ಹರಿಣಾಕ್ಷಿ ಕೆ ಸಹಕರಿಸಿದರು.

LEAVE A REPLY

Please enter your comment!
Please enter your name here