ಫೆ.3,4ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಳದ ಕುರಿಯದಲ್ಲಿರುವ ಗೋವಿಹಾರ ಧಾಮದಲ್ಲಿ ಗೋಲೋಕೋತ್ಸವ

0

*ಭಜನೆ, ನೃತ್ಯಭಜನೆ, ನೃತ್ಯರೂಪಕ, ಸಂಗೀತ ಸಹಿತ ಹಲವು ಕಾರ್ಯಕ್ರಮ
*ಹೈನುಗಾರರಿಂದ ರಾಸುಗಳ, ಗೋ ಪ್ರೇಮಿಗಳಿಂದ ದೇಸೀ ತಳಿಯ ಗೋವುಗಳ ಪ್ರದರ್ಶನ, ಕುದುವೆ ಸವಾರಿ
*ಭಕ್ತರಿಗೆ ವೈಯುಕ್ತಿಕ ಗೋಪೂಜೆ, ಗೋವಿಗೆ ಆರತಿ, ಗೋಗ್ರಾಸ ನೀಡುವ ಸೇವಾ ಅವಕಾಶ
*ಧಾರ್ಮಿಕ ಶಿಕ್ಷಣದ ಮಕ್ಕಳ ಮತ್ತು ವಿದ್ಯಾರ್ಥಿ ಸಮಾವೇಶ
*ಗೋವಿನ ಉತ್ಪನ್ನಗಳ ಖಾದ್ಯಗಳು, ಗೋಮಯ, ಗೋಮೂತ್ರದಿಂದ ತಯಾರಿಸಲ್ಪಟ್ಟ ಮೂರ್ತಿಗಳು, ಕ್ರಿಮನಾಶಕಗಳು, ಔಷಧಿ ಮಳಿಗೆ
*ಎತ್ತಿನ ಗಾಣದಿಂದ ಕಬ್ಬಿನ ಹಾಲು, ಎಣ್ಣೆಯನ್ನು ತೆಗೆಯುವ ಪ್ರಾತಿಕ್ಷತೆ ಮತ್ತು ಮಾರಾಟ, ಖಾದ್ಯಮೇಳ, ಆಹಾರ ಮೇಳ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಆಶ್ರಯದಲ್ಲಿ ಶ್ರೀ ಮಹಾಲಿಂಗೇಶ್ವರ ಗೋಸೇವಾ ಬಳಗ ಇದರ ನೇತೃತ್ವದಲ್ಲಿ ಮೊಟ್ಟೆತ್ತಡ್ಕದ ರಾಷ್ಟ್ರೀಯ ಗೇರು ಸಂಶೋಧನಾಲಯದ ಬಳಿಯ ಕುರಿಯ ಗ್ರಾಮದಲ್ಲಿ ದೇವಳದ ಗೋವಿಹಾರ ಧಾಮದಲ್ಲಿ ಗೋಲೋಕೋತ್ಸವ ಫೆ.3 ಮತ್ತು 4ರಂದು ಜರುಗಲಿದೆ.
ಫೆ.3ಕ್ಕೆ ಬೆಳಿಗ್ಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ಗಣಪತಿಹೋಮ, ಗೋಸೂಕ್ತ ಹೋಮ, ಗೋಪೂಜೆ ನಡೆಯಲಿದೆ. ಇದೇ ಸಂದರ್ಭ 9 ಗಂಟೆಗೆ ಪಶುಪತಿನಾಥ ಭಜನಾ ಮಂಟಪದಲ್ಲಿ ಶ್ರೀಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಜಿ ಭಜನೆಗೆ ಚಾಲನೆ ನೀಡಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ಮೈಸೂರು ಇದರ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಅವರು ಗೌರವ ಉಪಸ್ಥಿತಿಯಲ್ಲಿರುವರು. ಮಧ್ಯಾಹ್ನ ಭಜನೆ, ಕುಣಿತ ಭಜನೆ ನಡೆಯಲಿದೆ. ಸಂಜೆ ಗಂಟೆ 4ಕ್ಕೆ ಒಡಿಯೂರು ಶ್ರೀ ಗುರುದೇವದತ್ತ ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಕೆರೆಯ ಜೀರ್ಣೋದ್ದಾರಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ ಗಂಟೆ 4.30ಕ್ಕೆ ಮೊಟ್ಟೆತ್ತಡ್ಕ ನೃತ್ಯ ರಂಜಿನಿ ಕಲಾಲಯದಿಂದ ‘ಕಾಳಿಂಗ ಮರ್ದನ – ಗೋಪಿಕೃಷ್ಣ’ ಎಂಬ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ಬಳಿಕ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪುಣ್ಯಕೋಟಿ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ. ಸಂಜೆ ಗಂಟೆ 6ರಿಂದ ಡಾ. ವಿದ್ಯಾಭೂಷಣ ಬೆಂಗಳೂರು ಅವರಿಂದ ಭಕ್ತಿ ಭಾವ ಲಹರಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಫೆ.೪ಕ್ಕೆ ಗೋವು- ನಾವು ವಿಚಾರ ಸಂಕಿರಣ
ಫೆ.4ಕ್ಕೆ ಬೆಳಿಗ್ಗೆ ಉಡುಪಿ ಅಧಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು ಮತ್ತು ಶ್ರೀಸಂಸ್ಥಾನ ಗೋರ್ಕಣ, ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬೆಳಿಗ್ಗೆ ಗಂಟೆ 9ರಿಂದ ಗೋವು – ನಾವು ವಿಚಾರ ಸಂಕಿರಣ ನಡೆಯಲಿದ್ದು, ಧಾರ್ಮಿಕ ಶಿಕ್ಷಣದ ಮಕ್ಕಳ ಮತ್ತು ವಿದ್ಯಾರ್ಥಿ ಸಮಾವೇಶ ನಡೆಯಲಿದೆ. ಗೋಫಲ ಟ್ರಸ್ಟ್‌ನ ಅಧ್ಯಕ್ಷ ಕೋಂಕೊಡಿ ಪದ್ಮನಾಭ ಅವರು ದೀಪಪ್ರಜ್ವಲನೆ ಮಾಡಲಿದ್ದು, ಸೌತಡ್ಕ ಶ್ರೀ ಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್, ಗೋಸಾಡ ಅಮೃತಧಾರ ಗೋಬ್ಯಾಂಕ್ ಅಧ್ಯಕ್ಷ ಮುರಳೀಧರ ಪ್ರಭು, ಬದಿಯಡ್ಕ ನೆಕ್ಕರೆ ಕೆಲೆಯ ಸುಬ್ರಹ್ಮಣ್ಯ ಪ್ರಸಾದ್, ಕರ್ನಾಟಕ ದಕ್ಷಿಣ ಪ್ರಾಂತೀಯ ಗೋಸೇನಾ ಪ್ರಮುಖ ಪ್ರವೀಣ್ ಸರಳಾಯ, ಪಶುವೈದ್ಯ ಡಾ. ಎಂ.ಕೆ.ಕೃಷ್ಣಭಟ್ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಗಂಟೆ 3 ರಿಂದ ಭಕ್ತಿಭಾವ ಸತ್ಸಂಗ, ಸಂಜೆ ಗಂಟೆ 6.30ರಿಂದ ವಿದುಷಿ ನಾಟ್ಯರಂಗ ಪುತ್ತೂರು ಇದರ ಮಂಜುಳ ಸುಬ್ರಹ್ಮಣ್ಯ ಅವರಿಂದ ಧರ್ಮದೇನು ಎಂಬ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ.

ಗೋಲೋಕೋತ್ಸವದ ವಿಶೇಷತೆ:
ಎರಡು ದಿನದ ಗೋಲೋಕೋತ್ಸವದಲ್ಲಿ ಹೈನುಗಾರರಿಂದ ರಾಸುಗಳ ಮತ್ತು ಗೋ ಪ್ರೇಮಿಗಳಿಂದ ದೇಸೀ ತಳಿಯ ಗೋವುಗಳ ಪ್ರದರ್ಶನ, ಕುದುವೆ ಸವಾರಿ ಇದೆ. ಕೆಎಂಎಫ್ ಉತ್ಪನ್ನಗಳು, ಬಾದಾಮ್ ಹಾಲು, ಲಸ್ಸಿ, ಮಜ್ಜಿಗೆ ಹಾಗೂ ಗೋವಿನ ಉತ್ಪನ್ನ ಖಾದ್ಯಗಳು ಇರಲಿದ್ದು, ಗೋಮಯ, ಗೋಮೂತ್ರದಿಂದ ತಯಾರಿಸಲ್ಪಟ್ಟ ಮೂರ್ತಿಗಳು, ಕ್ರಿಮನಾಶಕಗಳು, ಔಷಧಿ ಮಳಿಗೆ, ಎತ್ತಿನ ಗಾಣದಿಂದ ಕಬ್ಬಿನ ಹಾಲು, ಎಣ್ಣೆಯನ್ನು ತೆಗೆಯುವ ಪ್ರಾತಿಕ್ಷತೆ ಮತ್ತು ಮಾರಾಟ, ಖಾದ್ಯಮೇಳ, ಆಹಾರ ಮೇಳ, ಕುಡಿಯುವ ಶುದ್ಧನೀರು, ಊಟೋಪಚಾರದ ವ್ಯವಸ್ಥೆ ಇರಲಿದೆ. ಪೂರ್ವಾಹ್ನ ಗಂಟೆ 8ರಿಂದ ಹೋಮ, ಗೋಪೂಜೆ, ನೋಂದಾವಣೆಗೆ ಅವಕಾಶವಿದ್ದು, ಭಕ್ತರಿಗೆ ವೈಯುಕ್ತಿಕ ಗೋಪೂಜೆ, ಗೋವಿಗೆ ಆರತಿ, ಗೋಗ್ರಾಸ ನೀಡಲು ಅವಕಾಶವಿದೆ. ಗೋ ಸೇವಾ ರಶೀದಿ ಪಡೆದು ಸೇವೆಯಲ್ಲಿ ಪಾಲ್ಗೊಳ್ಳುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ವಿನಂತಿಸಿದರು.

LEAVE A REPLY

Please enter your comment!
Please enter your name here