ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ಅವರ ಅಧ್ಯಕ್ಷತೆಯಲ್ಲಿ ಪ್ರಥಮ ಕೆಡಿಪಿ ಸಭೆ ಜ.29 ರಂದು ತಾ.ಪಂ ಸಭಾಂಗಣದಲ್ಲಿ ನಡೆಯಿತು. ಕೊರಗ ಸಮುದಾಯದ ಬಹುತೇಕ ಮಂದಿಗೆ ಆಧಾರ್ ಕಾರ್ಡ್ ಇಲ್ಲದೆ ಅವರಿಗೆ ಆಯುಷ್ಮಾನ್ ಕಾರ್ಡ್ ಇಲ್ಲ ಎಂಬ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರಿಂದ ಮಾಹಿತಿ ಪಡೆದ ಶಾಸಕ ಅಶೋಕ್ ರೈ ಮಾತನಾಡಿ, ಕೊರಗ ಸಮುದಾಯದವರಿಗೆ ಆಯುಷ್ಮಾನ್ ಕಾರ್ಡ್ ಇಲ್ಲ ಎಂದಾಗಬಾರದು. ಅಧಿಕಾರಿಗಳು ಪರಿಶೀಲನೆ ಮಾಡಿ ಆಧಾರ್ ಕಾರ್ಡ್ ಇಲ್ಲದವರಿಗೆ ಆಧಾರ್ ಕಾರ್ಡ್ ಮಾಡಿ ಕೊಡುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ತಾ.ಪಂ ಆಡಳಿತಾಧಿಕಾರಿ ಸಂಧ್ಯಾ, ತಹಶೀಲ್ದಾರ್ ಜೆ ಶಿವಶಂಕರ್, ಡಿವೈಎಸ್ಪಿ ಅರುಣ್ ನಾಗೇಗೌಡ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ಯೋಜನಾಧಿಕಾರಿ ಸುಕನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.