ಪುತ್ತೂರು:ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕ ಸಮೀಪದ ಪೋಳ್ಯ ಎಂಬಲ್ಲಿ ಬೈಕ್ ಹಾಗೂ ಟಿಪ್ಪರ್ ಲಾರಿ ಮಧ್ಯೆ ನಡೆದ ಅಪಘಾತದಲ್ಲಿ ಬೈಕ್‌ನ ಹಿಂಬದಿ ಸವಾರೆ, ಮಾಣಿ ಖಾಸಗಿ ಶಾಲಾ ಶಿಕ್ಷಕಿ ಮೃತಪಟ್ಟಿರುವ ಘಟನೆ ಜ.29ರಂದು ಮಧ್ಯಾಹ್ನ ನಡೆದಿದೆ.
ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಮದಕ ಸುರೇಶ್ ಕುಲಾಲ್ ಪತ್ನಿ ಅನಿತಾ(35ವ.) ಮೃತಪಟ್ಟವರು. ಮಾಣಿ ಸಮೀದ ಗಡಿಯಾರ ವಿಸ್ಡಮ್ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಅನಿತಾ ಕೆಲ ದಿನಗಳ ಹಿಂದೆ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಜ.29ರಂದು ಬೆಳಿಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದರು. ಚಿಕಿತ್ಸೆ ಪಡೆದು ಬೈಕ್‌ನಲ್ಲಿ ಹಿಂತಿರುಗುವ ವೇಳೆ ಕಬಕ ಸಮೀಪ ಪೋಳ್ಯ ಎಂಬಲ್ಲಿ ಏಕಾಏಕಿ ಬಂದ ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಿಂಬದಿ ಸವಾರೆ ಅನಿತಾ ಹಾಗೂ ಅವರು ಮಗು ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಬೊಳುವಾರು ಮಹಾವೀರ ಆಸ್ಪತ್ರೆಗೆ ಕರೆ ತರಲಾಗಿದ್ದರೂ ಆಸ್ಪತ್ರೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಮಗುವಿನ ಭುಜದ ಭಾಗಕ್ಕೆ ಸಣ್ಣ ಪುಟ್ಟ ಗಾಯವಾಗಿದ್ದು, ಸುರೇಶ್ ಕುಲಾಲ್ ಗೆ ಸಣ್ಣ ಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಮೃತರ ಪತಿ ಸುರೇಶ್ ಕುಲಾಲ್ ನೀಡಿದ ದೂರಿನಂತೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತಿ ಸುರೇಶ್ ಕುಲಾಲ್, ಪುತ್ರಿ ಋತ್ವಿಯವರನ್ನು ಅಗಲಿದ್ದಾರೆ.