ಪುತ್ತೂರು: ಬೆಳ್ತಂಗಡಿ ತಾಲೂಕಿನ ವೇಣೂರು ಠಾಣೆ ವ್ಯಾಪ್ತಿಯ ಕುಕ್ಕೇಡಿ ಗ್ರಾಮದಲ್ಲಿ ಜ.28ರಂದು ಸಂಜೆ ನಡೆದ ಸ್ಪೋಟಕ ಘಟನೆ ಬಗ್ಗೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ವಹಿಸುವಂತೆ ಹಿ.ಜಾ. ವೇದಿಕೆ ಜಿಲ್ಲಾ ಸಂಯೋಜಕ ಮೋಹನ್ ದಾಸ್ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಸ್ಪೋಟಕ ಸಿಡಿದ ವ್ಯಾಪ್ತಿಯಲ್ಲಿ ಸ್ಥಳೀಯರಿಗೆ ಭೂಕಂಪದ ರೀತಿಯಲ್ಲಿ ಅನುಭವವಾಗಿರುವುದರಿಂದ ಹಾಗೂ ಅದರೊಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೃತದೇಹವು ಛಿದ್ರ ಛಿದ್ರವಾಗಿ ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿ ಬಿದ್ದಿದ್ದು ಕೇವಲ ಪಟಾಕಿ ದಾಸ್ತಾನಿನಿಂದ ಮಾತ್ರ ಈ ತರಹದ ಘಟನೆ ಸಂಭವಿಸಲು ಸಾಧ್ಯವಿಲ್ಲ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂಶಯವಿದ್ದು ಇದಕ್ಕೆ ಪೂರಕ ಎನ್ನುವಂತೆ ಕೆಲವು ತಿಂಗಳ ಹಿಂದೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ ಹಾಗೂ ಕೇರಳದಲ್ಲಿ ಚರ್ಚ್ ನಲ್ಲಿ ನಡೆದ ಬಾಂಬ್ ಸ್ಫೋಟಕ್ಕೂ ಸಾಮ್ಯತೆ ಇರುವಂತೆ ಕಂಡು ಬರುತ್ತದೆ.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ನೀಡಿ, ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆಯ ಅನಾವರಣ ಮಾಡುವಂತೆ ಮತ್ತು ಈ ರೀತಿಯ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಪೊಲೀಸ್ ಇಲಾಖೆ ಮತ್ತು ಸರಕಾರವನ್ನು ಹಿಂದೂ ಜಾಗರಣ ವೇದಿಕೆಯ ಪುತ್ತೂರು ಜಿಲ್ಲಾ ಸಮಿತಿ ಆಗ್ರಹಿಸಿದೆ. ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಸಂಯೋಜಕ ಅನೂಪ್ ಕುಮಾರ್, ಸಹ ಸಂಯೋಜಕ ದಿನೇಶ್ ಪಂಜಿಗ, ಪ್ರಾಂತ ಸದಸ್ಯ ಅಜಿತ್ ಹೊಸಮನೆ ಉಪಸ್ಥಿತರಿದ್ದರು.