ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು – ಭವಾನಿ
ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ತಾಲೂಕು ಹಾಗೂ ಮಹಿಳಾ ಜ್ಞಾನ ವಿಕಾಸ ಕೇಂದ್ರ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಫೆ.2 ರಂದು ಕೋಟೇಚಾ ಹಾಲ್ನಲ್ಲಿ ನಡೆಯಿತು.
ಪುತ್ತೂರು ಮಹಿಳಾ ಠಾಣೆಯ ಉಪನಿರೀಕ್ಷಕಿ ಭವಾನಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬೆಂಗಳೂರು ಬಿಟ್ಟರೆ ದ.ಕ. ಜಿಲ್ಲೆಯಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ , ಇನ್ಸ್ಟಾಗ್ರಾಂ ಬಳಕೆಯಲ್ಲಿ ಅಪರಿಚಿತ ವ್ಯಕ್ತಿಗಳ ಸಂಪರ್ಕದಿಂದ ಮಹಿಳಾ ದೌರ್ಜನ್ಯಗಳು ಆಗುತ್ತಿವೆ. ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು. ಪೋಷಕರು ತಮ್ಮ ಮಕ್ಕಳ ಮೇಲೆ ಕಾಳಜಿ ವಹಿಸಬೇಕು ಎಂದರು.
ದ. ಕ ಜಿಲ್ಲೆಯ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ ಮಾತೃಶ್ರೀ ಹೇಮಾವತಿ ಅಮ್ಮನವರ ಪರಿಕಲ್ಪನೆಯ ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಮಹಿಳೆಯರು ಕೌಟುಂಬಿಕವಾಗಿ, ಸಾಮಾಜಿಕವಾಗಿ, ಭೌದ್ಧಿಕವಾಗಿ, ಆರ್ಥಿಕವಾಗಿ ಬದಲಾವಣೆ ಹೊಂದಿರುವ ಬಗ್ಗೆ, ಈ ಕಾರ್ಯಕ್ರಮದ ಮೂಲಕ ವಿವಿಧ ಪ್ರತಿಭೆಗಳಿಗೆ ವೇದಿಕೆ ಸಿಕ್ಕಿರುವ ಬಗ್ಗೆ ಮಾರ್ಗದರ್ಶನ ನೀಡಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಕುಮಾರಿ ಅರುಣ ಡಿ ಮಾತನಾಡಿ ಇಂದು ಮಹಿಳೆಯರು ಎಷ್ಟು ಪ್ರಬಲರಾಗಿದ್ದಾರೆ ಎಂದರೆ ಜ್ಞಾನವಿಕಾಸ ಕಾರ್ಯಕ್ರಮದ ಮಹತ್ವ ಅಷ್ಟಿದೆ. ನಿಮ್ಮ ಪ್ರತಿಭೆಗಳಿಗೆ ಒಂದು ಸರಿಯಾದ ಅವಕಾಶ ಸಿಕ್ಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಿ ಕುಟುಂಬ ನಿರ್ವಹಣೆ ಮಾಡುವುದನ್ನು ಮಹಿಳಾ ಸಬಲೀಕರಣ ಎನ್ನಬಹುದು. ಇಂದು ಮಹಿಳೆಯರು ಬ್ಯಾಂಕಿಂಗ್, ಶಾಲಾ- ಕಾಲೇಜು, ವಿಜ್ಞಾನ ಇತ್ಯಾದಿ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವುದನ್ನು ಕಾಣಬಹುದು. ಸಂಘದ ಮೂಲಕ ಜ್ಞಾನ ಗಳಿಸಿದ್ದಾರೆ. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಅಪಾರವಾಗಿದೆ. ಬ್ಯೂಟಿಷನ್, ಕೋಳಿ ಸಾಕಾಣಿಕೆ, ಹೈನುಗಾರಿಕೆ ಮೂಲಕ ಆರ್ಥಿಕ ಸಬಲರಾಗಬೇಕೆಂದರು.
ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಕೇಂದ್ರ ಒಕ್ಕೂಟಗಳ ಅಧ್ಯಕ್ಷ ಉದಯ್ ಕುಮಾರ್ ಮಾತನಾಡಿ ಮಾತೃಶ್ರೀ ಡಾ ಹೇಮಾವತಿ ವಿ ಹೆಗ್ಗಡೆಯವರ ಕನಸಿನ ಕೂಸು ಈ ಜ್ಞಾನವಿಕಾಸ ಸಂಘ. ಮನೆ ಒಳಗೆ ಇರುವ ಮಹಿಳೆಯರು ಇಂದು ಸಮಾಜದ ವ್ಯವಹಾರ ಜ್ಞಾನ ಹೊಂದಿದ್ದಾರೆ. ಇನ್ನು ಹೆಚ್ಚಿನ ರೀತಿಯಲ್ಲಿ ಜ್ಞಾನ ವಿಕಾಸ ಸಂಘಗಳು ಬೆಳೆಯಲಿ ಎಂದರು.
ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಬನ್ನೂರು ವಲಯ ಅಧ್ಯಕ್ಷ ಮನೋಹರ್ ಮಾತನಾಡಿ ಸದಸ್ಯರ ಸಮಸ್ಯೆಗಳನ್ನು ಚರ್ಚಿಸುವ ವೇದಿಕೆಯಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಭಾಗವಹಿಸಬೇಕೆಂದು ತಿಳಿಸಿದರು.
ಕೇಂದ್ರ ಒಕ್ಕೂಟದ ಅಧ್ಯಕ್ಷ ಉದಯಕುಮಾರ್, ಬನ್ನೂರು ವಲಯದ ವಲಯಾಧ್ಯಕ್ಷ ಮನೋಹರ್, ಕೇಪುಳು ಒಕ್ಕೂಟದ ಅಧ್ಯಕ್ಷ ಜಯಾನಂದ್, ಪಡೀಲ್ ಒಕ್ಕೂಟದ ಅಧ್ಯಕ್ಷೆ ಮೈಮುನಾ, ಯೋಜನಾಧಿಕಾರಿ ಶಶಿಧರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ನಡೆದ ಸಾಮಾಜಿಕ ಜಾಲತಾಣ ಹಾಗೂ ಹೆಣ್ಣು ಮಕ್ಕಳ ರಕ್ಷಣೆ ಎಂಬ ಮಹಿಳಾ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ನರೇಂದ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಮಧುರ ಗಣರಾಜ ಭಟ್ ಇವರು ಭಾಗವಹಿಸಿ ಮಾಹಿತಿ ನೀಡಿದರು.
ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಛ ತಯಾರಿ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಗಳನ್ನು ನಡೆಸಲಾಯಿತು. ಜ್ಞಾನವಿಕಾಸ ಸದಸ್ಯರ ಸ್ವ ಉದ್ಯೋಗ ಸ್ಟಾಲ್ ಹಾಗೂ ಸಿರಿ ಧಾನ್ಯ ಬಳಸಿ ತಯಾರಿಸಿದ ಆಹಾರ ಪದಾರ್ಥಗಳ ಪ್ರದರ್ಶನವನ್ನು ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ ಹೂವಿನ ಕುಂಡವನ್ನು ಸ್ಮರಣಿಕೆಯ ರೂಪದಲ್ಲಿ ನೀಡಲಾಯಿತು. ಬಲ್ನಾಡು ಹಾಗೂ ಬೆಟ್ಟಂಪಾಡಿ ಶೌರ್ಯ ವಿಪತ್ತು ಘಟಕದ ಸ್ವಯಂಸೇವಕರು ಹಾಗೂ ಬನ್ನೂರು ನವ ಜೀವನ ಸಮಿತಿಯ ಸದಸ್ಯರು ಸಹಕರಿಸಿದರು.
ತಾಲೂಕು ಯೋಜನಾಧಿಕಾರಿ ಶಶಿಧರ್ ಸ್ವಾಗತಿಸಿ, ಕೃಷಿ ಮೇಲ್ವಿಚಾರಕ ಉಮೇಶ್ ನಿರೂಪಿಸಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ವರದಿ ಮಂಡನೆ ಮಾಡಿದರು. ಬನ್ನೂರು ವಲಯದ ಮೇಲ್ವಿಚಾರಕಿ ಸುನೀತಾ ಶೆಟ್ಟಿ ವಂದಿಸಿದರು. ತಾಲೂಕಿನ ಮೇಲ್ವಿಚಾರಕರು, ತಾಂತ್ರಿಕ ಸಿಬ್ಬಂದಿ ವರ್ಗದವರು, ಸೇವಾ ಪ್ರತಿನಿಧಿಗಳು, ಜ್ಞಾನವಿಕಾಸ ಕೇಂದ್ರದ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಶಾಸನ ಫಲಾನುಭವಿಗಳಿಗೆ ಮಾಶಾಸನ ಮಂಜೂರಾತಿ ಪತ್ರ ನೀಡಲಾಯಿತು, ಹಾಗೆಯೇ ಜನಮಂಗಳ ಕಾರ್ಯಕ್ರಮದಡಿಯಲ್ಲಿ ವೀಲ್ ಚಯರ್ನ್ನು ಹಸ್ತಾಂತರ ಮಾಡಲಾಯಿತು.