ಪುಣಚ: ಸುಮಾರು 100 ವರ್ಷಗಳ ಮೇಲ್ಪಟ್ಟ ಇತಿಹಾಸ ಇರುವ ಪುಣಚ ಪರಿಯಾಲ್ತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಶಾಲಾ ಹಳೆ ವಿದ್ಯಾರ್ಥಿಯಾಗಿರುವ ಡಾ. ಬಿ.ಎ. ವಿವೇಕ ರೈಯವರು ತಮ್ಮ ಸಾಧನೆಗಾಗಿ ಲಭಿಸಿದ ಪ್ರಶಸ್ತಿಯೊಂದಿಗಿನ ನಗದನ್ನು ತಾನು ಕಲಿತ ಪ್ರಾಥಮಿಕ ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ದೇಣಿಗೆ ನೀಡುವ ಮೂಲಕ ಪ್ರಶಂಸನೀಯ ಕಾರ್ಯ ಮಾಡಿದ್ದಾರೆ.
ಮೂಲತಃ ಪುಣಚ ಅಗ್ರಾಳ ನಿವಾಸಿಯಾಗಿದ್ದು, ಪ್ರಸ್ತುತ ಮಂಗಳೂರು ನಿವಾಸಿಯಾಗಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿಗಳೂ ಖ್ಯಾತ ಜಾನಪದ ವಿದ್ವಾಂಸರೂ ಆಗಿರುವ ಹಿರಿಯ ಸಾಹಿತಿ ಡಾ. ಬಿ.ಎ. ವಿವೇಕ್ ರೈ ಅವರು ಹಲವು ವಿಶಿಷ್ಟ ಸಾಧನೆಗಳಲ್ಲಿ ಪ್ರಶಸ್ತಿಯೊಂದಿಗೆ ಲಭಿಸಿದ ರೂ.1 ಲಕ್ಷ ಮೊತ್ತವನ್ನು ತಾನು ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಪುಣಚ ಪರಿಯಾಲ್ತಡ್ಕ ಪ್ರಾಥಮಿಕ ಶಾಲೆಗೆ ಫೆ.7ರಂದು ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಅವರು ಕಲಿತ ಶಾಲೆ ಪವಿತ್ರವಾದ ದೇಗುಲ. ಇಲ್ಲಿ ಕಲಿತ ಮಕ್ಕಳು ಎಲ್ಲಿ ಹೋದರೂ ತಾವು ಕಲಿತ ಶಾಲೆಯನ್ನು ಮರೆಯದೆ ಯಾವುದಾದರೂ ಒಂದು ರೀತಿಯಲ್ಲಿ ಶಾಲೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ವಿವೇಕ್ ರೈರವರ ಸಹೋದರ, ನಿವೃತ್ತ ಪ್ರಾದೇಶಿಕ ವ್ಯವಸ್ಥಾಪಕ ಉಲ್ಲಾಸ್ ರೈ ಬಿ.ಎ, ಶಾಲಾ ಅಭಿವೃದ್ಧಿ ಅಧ್ಯಕ್ಷ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್ ಮತ್ತು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸುಬ್ರಹ್ಮಣ್ಯ ಶಾಸ್ತ್ರಿ ಮಾತನಾಡಿ ಶುಭ ಹಾರೈಸಿದರು.
ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಧನಸಹಾಯ ನೀಡಿದ ವಿವೇಕ್ ರೈಯವರನ್ನು ಅಭಿವೃದ್ಧಿ ಸಮಿತಿ ಮತ್ತು ಆಡಳಿತ ಸಮಿತಿ ಪರವಾಗಿ ಸನ್ಮಾನಿಸಲಾಯಿತು. ಶಾಲಾ ವಿಧ್ಯಾರ್ಥಿಗಳು ಪ್ರಾರ್ಥಿಸಿದರು. ನಿವೃತ್ತ ಮುಖ್ಯ ಗುರು ಹರ್ಷ ಶಾಸ್ತ್ರಿ ಮಣಿಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಶಾಲಾ ಸಂಚಾಲಕಿ ಉಷಾಲಕ್ಷ್ಮಿ ಮಣಿಲ ವಂದಿಸಿದರು. ಮುಖ್ಯ ಗುರು ಐತ್ತಪ್ಪ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ವಿವೇಕ್ ರೈರವರ ಧರ್ಮ ಪತ್ನಿ ವಸಂತ ಕೋಕಿಲ, ಉಲ್ಲಾಸ್ ರೈರವರ ಧರ್ಮ ಪತ್ನಿ ಮಲ್ಲಿಕಾ ಉಲ್ಲಾಸ್ ರೈ, ಶಾಲಾ ನಿವೃತ್ತ ಗುರುಗಳು, ಹಳೆ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರರು, ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.