ವಿಟ್ಲ:ವಿಟ್ಲ ಮೂಲದ ವ್ಯಕ್ತಿಯೊಬ್ಬರು ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ವಿಟ್ಲ ಕಾಶೀಮಠ ಅಪ್ಪೆರಿಪಾದೆ ನಿವಾಸಿ ಪ್ರದೀಪ್ (27) ಎಂಬವರು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಫೆ.4ರಂದು ಮಂಗಳೂರಿನ ಬೈಕಂಪಾಡಿ ಬಸ್ ನಿಲ್ದಾಣದ ಬಳಿ ವಾಹನ ನಿಲ್ಲಿಸಿ ಮೂತ್ರ ವಿಸರ್ಜನೆಗೆಂದು ನಿಂತಿದ್ದ ವೇಳೆ ಅನುಮಾನಗೊಂಡು ಯಾರೋ ಅಪರಿಚಿತ ವ್ಯಕ್ತಿಗಳು ಬೈಕ್‌ನಲ್ಲಿ ಬಂದು ನನ್ನನ್ನು ಸ್ಥಳೀಯ ಪ್ರಕರಣದ ಆರೋಪಿಯೆಂದು ಅವಾಚ್ಯ ಶಬ್ಧಗಳಿಂದ ಬೈದು ಪೊಲೀಸರಿಗೆ ಫೋನ್ ಮೂಲಕ ತಿಳಿಸಿರುತ್ತಾರೆ. ಬಳಿಕ ಪೊಲೀಸ್ ತನಿಖೆಯ ವೇಳೆ ನಾನು ನೈಜ ಆರೋಪಿ ಅಲ್ಲ, ಎಂಬ ನಿಜಾಂಶವೂ ತಿಳಿದು ಬಂದಿತ್ತು. ಯುವಕರ ತಂಡ ಅಡ್ಡಗಟ್ಟುವ ವೇಳೆ ಅಲ್ಲಿಯೇ ಇದ್ದ ಅಪರಿಚಿತ ವ್ಯಕ್ತಿಯೊಬ್ಬ ಈ ಸನ್ನಿವೇಶವನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದ್ದ. ಈ ವೀಡಿಯೋವನ್ನು ವಿಟ್ಲದ ಎನ್ ಎಸ್ ಶರತ್ ಎಂಬಾತ ತನ್ನ ಗ್ಯಾಂಗ್ ನೊಂದಿಗೆ ನನ್ನ ತಂದೆ ನಡೆಸುತ್ತಿರುವ ಹೋಟೇಲ್ ಬಳಿ ಬಂದು ನಾನು ಮಾಧ್ಯಮ ಪ್ರತಿನಿಧಿ, ವೀಡಿಯೋ ಡಿಲೀಟ್ ಮಾಡಬೇಕಾದರೆ ಹಣ ನೀಡುವಂತೆ ನನಗೆ ಬೆದರಿಕೆಯೊಡ್ಡಿ ಹಣ ದೋಚಿರುವುದಾಗಿ ಪ್ರದೀಪ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಪರಿಚಿತರು ಚಿತ್ರೀಕರಿಸಿದ ವೀಡಿಯೋವನ್ನು ತನ್ನ ಮೊಬೈಲ್‌ನಲ್ಲಿ ತೋರಿಸಿ ಹಣ ನೀಡುವಂತೆ ಒತ್ತಡ ಹೇರಿದ್ದಾರೆ. ಈ ಪೈಕಿ ವಿಟ್ಲ ಮೂಲದ ಎನ್ ಎಸ್ ಶರತ್ ಎಂಬಾತ ಹಣ ನೀಡದಿದ್ದಲ್ಲಿ ಮಾಧ್ಯಮದಲ್ಲಿ ವೈರಲ್‌ಗೊಳಿಸುವುದಾಗಿ ಬೆದರಿಕೆಯೊಡ್ಡಿದ್ದಾನೆ. ಎನ್ ಎಸ್ ಶರತ್ ಮತ್ತು ಇನ್ನಿಬ್ಬರು ಪರಿಚಿತರು ಬೆಳಗ್ಗಿನಿಂದ ಸಂಜೆವರೆಗೆ ಸುಮಾರು 8 ಬಾರಿ ಕೆಂಪು ಬಣ್ಣದ ಸ್ವಿಫ್ಟ್ ಕಾರು, ಸ್ಕೂಟರ್ ಮತ್ತು ಬೈಕಿನಲ್ಲಿ ನನ್ನ ಹೋಟೇಲ್‌ಗೆ ಬಂದು ಹತ್ತು ಸಾವಿರ ರೂ. ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಅವರ ಬೆದರಿಕೆಗೆ ಹೆದರಿ ಅನ್ಯಮಾರ್ಗವಿಲ್ಲದೆ 6,000/- ರೂ. ನೀಡಿದ್ದೇನೆ. ಇದಾದ ಬಳಿಕ ಮರುದಿನ ಎನ್ ಎಸ್ ಶರತ್ ಎಂಬಾತ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ನನ್ನ ಪರಿಚಯಸ್ಥರ ಮೊಬೈಲ್‌ಗಳಿಗೆ ಈ ವೀಡಿಯೋ ರವಾನೆಯಾಗಿದೆ. ಇದರಿಂದ ನನ್ನ ಗೌರವಕ್ಕೆ ಧಕ್ಕೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ತಲೆ ಎತ್ತಿ ಓಡಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಪ್ರದೀಪ್ ಹೇಳಿದ್ದಾರೆ.
ಮಾತ್ರವಲ್ಲದೆ, ಇನ್ನೂ ಹೆಚ್ಚಿನ ಹಣವನ್ನು ನೀಡಬೇಕು ಇಲ್ಲವಾದಲ್ಲಿ ನಿನ್ನ ಸಂಬಂಧಿಕರಿಗೆ ಮತ್ತು ಇತರರಿಗೆ ವಿಡಿಯೋ ರವಾನಿಸುವುದಾಗಿ 8971****25 ಈ ಮೊಬೈಲ್ ಸಂಖ್ಯೆಯಿಂದ ಪೋನ್ ಕರೆಯ ಮೂಲಕ ಬೆದರಿಕೆಯೊಡ್ಡಲಾಗಿದೆ. ಇದರಿಂದ ನನ್ನ ಮಾನ ಮರ್ಯಾದೆಗೆ ಧಕ್ಕೆಯಾಗಿದ್ದು, ಊರಿನ ಜನರು, ಪರಿಚಯಸ್ಥರು ನನ್ನನ್ನು ಅನುಮಾನದ ದೃಷ್ಟಿಯಲ್ಲಿ ನೋಡುವಂತಾಗಿದೆ. ಬೈಕಂಪಾಡಿಯಲ್ಲಿ ನಡೆದ ಘಟನೆಗೂ ಎನ್ ಎಸ್ ಶರತ್ ಎಂಬಾತನಿಗೂ ನಿಕಟ ಸಂಬಂಧವಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಹೇಳಲಾಗಿದೆ. ಪ್ರದೀಪ್ ನೀಡಿದ ದೂರಿನಂತೆ ವಿಟ್ಲ ಠಾಣೆಯಲ್ಲಿ ಎನ್ ಎಸ್ ಶರತ್ ಸೇರಿದಂತೆ ಮತ್ತಿಬ್ಬರ ವಿರುದ್ದ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.