ಬಡಗನ್ನೂರು: ಬಡಗನ್ನೂರು ಸ.ಹಿ.ಪ್ರಾ.ಶಾಲೆಗೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಜಿಲ್ಲಾಧಿಕಾರಿಗೆ ಬರೆದುಕೊಳ್ಳಲು ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ಅವರ ಅಧ್ಯಕ್ಷತೆಯಲ್ಲಿ ಫೆ.7ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಸದಸ್ಯ ಸಂತೋಷ್ ಆಳ್ವ ವಿಷಯ ಪ್ರಸ್ತಾವಿಸಿ ಮಾತನಾಡಿ ಬಡಗನ್ನೂರು ಶಾಲಾ ಕಟ್ಟಡ ಗೋಡೆ ಹೊಡೆದು ಮತ್ತು ಮೇಲ್ಚಾವಣಿ ಮಾಡು ಗೆದ್ದಲು ಹಿಡಿದು ಅಪಾಯಕಾರಿ ವ್ಯವಸ್ಥೆ ಇತ್ತು. ಈ ಬಗ್ಗೆ ಕಟ್ಟಡ ನೆಲಸಮಗೊಳಿಸುವ ಬಗ್ಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಕೇಳಿಕೊಂಡಿದ್ದು, ಅನುಮತಿ ದೊರೆತ ಬಳಿಕ ಕಟ್ಟಡ ನೆಲಸಮಗೊಳಿಸಲಾಗಿದೆ. ಆದರೆ ಈಗ ಕಟ್ಟಡ ನೆಲಸಮಗೊಂಡು ಸುಮಾರು ಒಂದು ವರ್ಷ ಆಗುತ್ತಿದೆಯಾದರೂ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿ ಅಥವಾ ಸಂಬಂಧ ಪಟ್ಟ ಇಲಾಖೆ ವತಿಯಿಂದ ಯಾವುದೇ ಅನುದಾನ ಮಂಜೂರಾತಿಗೊಂಡಿಲ್ಲ. ಶಾಲೆಯಲ್ಲಿ ಸುಮಾರು ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಮಕ್ಕಳ ಸಂಖ್ಯೆ ಹೆಚ್ಚು ಇರುವುದರಿಂದ ತರಗತಿವಾರು ಪಾಠ ಮಾಡಲು ಕಷ್ಟಕರ ಪರಿಸ್ಥಿತಿ ಒದಗಿದೆ. ಆದುದರಿಂದ ತುರ್ತಾಗಿ ಮೂರು ಕೊಠಡಿ ಹೊಂದುವ ಕಟ್ಟಡ ವ್ಯವಸ್ಥೆ ಆಗಬೇಕು. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಈ ಸಭೆಯಲ್ಲಿ ಉಪಾಧ್ಯಕ್ಷೆ ಸುಶೀಲ ಪಕ್ಯೋಡ್, ಸದಸ್ಯರಾದ ವೆಂಕಟೇಶ ಕನ್ನಡ್ಕ, ಕುಮಾರ ಅಂಬಟೆಮೂಲೆ, ವಸಂತ ಗೌಡ ಕನ್ನಯ, ಪದ್ಮನಾಭ ಕನ್ನಡ್ಕ, ಸಂತೋಷ್ ಆಳ್ವ ಗಿರಿಮನೆ, ರವಿಚಂದ್ರ ಸಾರೆಪ್ಪಾಡಿ, ಧರ್ಮೇಂದ್ರ ಕುಲಾಲ್, ಪದಡ್ಕ, ಲಿಂಗಪ್ಪ ಮೋಡಿಕೆ, ಕಲಾವತಿ ಗೌಡ ಪಟ್ಲಡ್ಕ, ಶ್ರೀಮತಿ ಕನ್ನಡ್ಕ, ಸುಜಾತ ಮೈಂದನಡ್ಕ, ಸವಿತಾ ನೇರೋತ್ತಡ್ಕ, ದಮಯಂತಿ ಕೆಮನಡ್ಕ, ಜ್ಯೋತಿ ಅಂಬಟೆಮೂಲೆ, ಹೇಮಾವತಿ ಮೋಡಿಕೆ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.