ಪುತ್ತೂರು: ಪಡೀಲ್ ಮನೆಯೊಂದರ ಸಿಟೌಟ್‌ನಲ್ಲಿದ್ದ ಕೊಠಡಿಯಲ್ಲಿ ಬೆಂಕಿ ಅವಘಡದಿಂದಾಗಿ 20 ಚೀಲ ಅಡಿಕೆ ಭಸ್ಮವಾಗಿದ್ದು, ಪಂಪ್, ಟೈಲರಿಂಗ್ ಮೆಷಿನ್ ಸಹಿತ ಕಬ್ಬಿಣದ ಕಪಾಟಿನಲ್ಲಿರುವ ಬಟ್ಟೆ ಬರೆಗಳು ಕರಗಿ ಹೋಗಿರುವ ಘಟನೆ ಫೆ.8ರ ನಸುಕಿನ ಜಾವ ನಡೆದ ಬಗ್ಗೆ ವರದಿಯಾಗಿದೆ. ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಬನ್ನೂರು ವ್ಯಾಪ್ತಿಯ ಪೋಸ್ಟ್ ಮ್ಯಾನ್ ನಾರಾಯಣ ನಾಯ್ಕ ಎಂಬವರ ಪಡೀಲ್ ಮನೆಯಲ್ಲಿ ಈ ಬೆಂಕಿ ಅವಘಡ ನಡೆದಿದೆ. ಫೆ.7ರಂದು ನಾರಾಯಣ ನಾಯ್ಕ ಮನೆ ಮಂದಿ ರಾತ್ರಿ ಮಲಗಿದ ಬಳಿಕ ತಡ ರಾತ್ರಿ ಫೆ.8ರ ನಸುಕಿನ ಜಾವ ಗಂಟೆ 1.30ರ ಸುಮಾರಿಗೆ ಸಿಟೌಟ್‌ನಲ್ಲಿ ಶಬ್ದ ಕೇಳಿ ಹೊರಗೆ ನೋಡಿದಾಗ ಸಿಟೌಟ್‌ನ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯ ಮನೆಯವರಿಗೆ ಮಾಹಿತಿ ನೀಡಿ ಎಲ್ಲರು ನೀರು ಹಾಯಿಸಿ ಬೆಂಕಿ ಶಮನಕ್ಕೆ ಪ್ರಯತ್ನಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಶಮನಗೊಳಿಸಿದ್ದಾರೆ.
ಬೆಂಕಿ ಅವಘಡದಿಂದಾಗಿ ಕೊಠಡಿಯಲ್ಲಿದ್ದ 20 ಚೀಲ ಅಡಿಕೆ, ಟೈಲರಿಂಗ್ ಮೆಷಿನ್, ಪಂಪ್, ಟಿಲ್ಟರ್ ಗ್ರೈಂಡರ್ ಬೆಂಕಿಗಾಹುತಿಯಾಗಿದೆ ಕಬ್ಬಿಣದ ಕಪಾಟಿನ ಒಳಗಡೆ ಇದ್ದ ಬಟ್ಟೆಬರೆಗಳು ಕರಗಿ ಹೋಗಿದೆ. ಮನೆಯ ಸಿಟೌಟ್ ಕೊಠಡಿಯಲ್ಲಿದ್ದ ವಿದ್ಯುತ್ ಸ್ಚಿಚ್ ಬೋರ್ಡ್‌ನಿಂದ ಶಾರ್ಟ್ ಸರ್ಕ್ಯೂಟ್ ಆಗಿದ್ದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ಮನೆ ಮಾಲಕ ನಾರಾಯಣ ನಾಯ್ಕ ತಿಳಿಸಿದ್ದಾರೆ. ಒಟ್ಟು ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.