ಆಲಂಕಾರು: ಮೊಬೈಲ್ ಅಂಗಡಿಯಿಂದ ಕಳ್ಳತನ ಪ್ರಕರಣ-ಆರೋಪಿ ಪೋಲಿಸ್ ವಶಕ್ಕೆ-ಬಾಲಾಪರಾಧಿ ಎಂದು ಪ್ರಕರಣವನ್ನು ಠಾಣೆಯಲ್ಲಿ ಇತ್ಯರ್ಥ ಮಾಡಿದ ಪೋಲಿಸರು!

0

ಕಡಬ: ಆಲಂಕಾರು ಪೇಟೆಯಲ್ಲಿರುವ ಸಾನಿಧ್ಯ ಮೊಬೈಲ್ ಅಂಗಡಿಯಿಂದ ಫೆ.5ರಂದು ರಾತ್ರಿ ಸುಮಾರು 1.30ರ ವೇಳೆಗೆ ಯುವಕನೋರ್ವ ಅಂಗಡಿಯ ಬೀಗ ಮುರಿದು ಮೊಬೈಲ್ ಕಳ್ಳತನ ನಡೆಸಿರುವ ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಯುವಕನನ್ನು ವಶಕ್ಕೆ ಪಡೆದುಕೊಂಡ ಕಡಬ ಪೋಲಿಸರು ಕದ್ದಿರುವ ಮೊಬೈಲ್‌ಗಳನ್ನು ವಶಕ್ಕೆ ಪಡೆದು ಅಂಗಡಿ ಮಾಲಕರಿಗೆ ಹಿಂದಿರುಗಿಸಿದ್ದಾರೆ, ಬಳಿಕ ಈತ ಬಾಲಾಪರಾಧಿ ಎಂದು ಪ್ರಕರಣ ದಾಖಲಿಸದೆ ಪ್ರಕರಣವನ್ನು ರಾಜಿಯಲ್ಲಿ ಮುಗಿಸಿರುವ ವಿಚಾರ ಬೆಳಕಿಗೆ ಬಂದಿದೆ.


ಪ್ರಕರಣ: ಫೆ.5ರಂದು ರಾತ್ರಿ ಸುಮಾರು 1.30ರ ವೇಳೆಗೆ ಆಲಂಕಾರು ಸಾನಿಧ್ಯ ಮೊಬೈಲ್ ಅಂಗಡಿಗೆ ಉತ್ತರ ಪ್ರದೇಶ ಮೂಲದವನಾಗಿದ್ದು ನೆಕ್ಕೆರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಕುಟುಂಬದ ಜತೆ ಇರುವ ಯುವಕನೋರ್ವ ಅಂಗಡಿಯ ಬೀಗವನ್ನು ಎಕ್ಸೋ ಬ್ಲೇಡ್ ಮೂಲಕ ಮುರಿದು ಒಳನುಗ್ಗಿ ಕಳ್ಳತನ ನಡೆಸಿದ್ದಾನೆ. ಕಳ್ಳತನ ಆಗಿರುವ ವಿಷಯ ತಿಳಿದ ಅಂಗಡಿ ಮಾಲಕರು ಬೆಳಿಗ್ಗೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ತಮ್ಮ ಅಂಗಡಿಗೆ ಬರುತ್ತಿರುವ ಗ್ರಾಹಕನೇ ಆರೋಪಿ ಎಂದು ತಿಳಿಯಿತು, ಬಳಿಕ ಪೊಲೀಸರಿಗೆ ತಿಳಿಸಿ ಯುವಕನನ್ನು ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ, ಪ್ರಾರಂಭದಲ್ಲಿ ಕಳ್ಳತನದ ಬಗ್ಗೆ ಒಪ್ಪಿಕೊಳ್ಳದಿದ್ದರೂ ತೀವ್ರ ವಿಚಾರಣೆಯ ಬಳಿಕ ಒಪ್ಪಿಕೊಂಡು ಕದ್ದಿರುವ ಮೊಬೈಲ್ ಗಳನ್ನು ಹಿಂತಿರುಗಿಸಿದ್ದಾನೆ ಎಂದು ತಿಳಿದು ಬಂದಿದೆ.


ಪ್ರಕರಣ ರಾಜಿಯಲ್ಲಿ ಇತ್ಯರ್ಥ!: ಮೊಬೈಲ್ ಎಗರಿಸಿದಾತ ಬಾಲಾಪರಾಧಿ ಎಂದು ವಿಚಾರಣೆ ವೇಳೆ ತಿಳಿದು ಬಂದಿತ್ತು, ಈ ಹಿನ್ನಲೆಯಲ್ಲಿ ಪ್ರಕರಣನ್ನು ರಾಜಿಯಲ್ಲಿ ಮುಗಿಸಲಾಗಿದೆ. ಅಲ್ಲದೆ ಅಂಗಡಿ ಮಾಲಕರು ದೂರನ್ನೂ ನೀಡಿರುವುದಿಲ್ಲ ಎಂದು ಕಡಬ ಎಸ್‌ಐ ಅಭಿನಂದನ್ ಅವರು ಮಾಹಿತಿ ನೀಡಿದ್ದಾರೆ.

ಕಳ್ಳತನ ಪ್ರಕರಣವೂ ರಾಜಿಯಲ್ಲಿ ಇತ್ಯರ್ಥವಾದರೆ !-ಸಾರ್ವಜನಿಕರ ಆಕ್ಷೇಪ
ಹೊರ ರಾಜ್ಯದಿಂದ ಕಾರ್ಮಿಕರಾಗಿ ಇಲ್ಲಿಗೆ ಬರುವವರ ಮಾಹಿತಿಯನ್ನು ಠಾಣೆಯಲ್ಲಿ ನೀಡಬೇಕು, ಅವರನ್ನು ಕೆಲಸಕ್ಕೆ ಇಟ್ಟುಕೊಳ್ಳುವವರು ಕೂಡ ಜಾಗೃತರಾಗಬೇಕು ಎಂದು ಇಲಾಖೆ ಪ್ರಕಟಣೆ ನೀಡುತ್ತದೆ, ಆದರೆ ಕಾರ‍್ಯಗತಗೊಳಿಸುತ್ತಿಲ್ಲ, ಇತ್ತೀಚೆಗೆ ಕಡಬ ಐತ್ತೂರು ಗ್ರಾಮದ ವ್ಯಕ್ತಿಯೋರ್ವರು ಹೊರ ರಾಜ್ಯದಿಂದ ಬರುವವರ ಮಾಹಿತಿಯನ್ನು ಠಾಣೆಗೆ ನೀಡಲು ಬಂದಾಗ ಅವರಿಂದ ಮಾಹಿತಿಯನ್ನು ಪಡೆಯಲು ಪೊಲೀಸರು ಹಿಂದೇಟು ಹಾಕಿದ್ದರು, ಬಳಿಕ ಠಾಣಾಧಿಕಾರಿಯವರು ಪಡೆದುಕೊಂಡಿದ್ದರು. ಇತ್ತ ಹೊರ ರಾಜ್ಯದಿಂದ ಕೆಲಸಕ್ಕೆ ಬಂದಿರುವ ಈ ಯುವಕ ಕಳ್ಳತನ ನಡೆಸಿರುವ ಸ್ವಷ್ಟವಾದ ವೀಡಿಯೋ ಲಭಿಸಿದ್ದರೂ ಕೇವಲ ಬಾಲಾಪರಾಧಿ ಎಂಬ ಕಾರಣಕ್ಕೆ ಯಾವುದೇ ಪ್ರಕರಣ ದಾಖಲಿಸದೆ ಆತನನ್ನು ಬಿಟ್ಟಿರುವುದು ಕಳ್ಳತನ ಹೆಚ್ಚಾಗುವುದಕ್ಕೆ ಆಸ್ಪದ ನೀಡಿದಂತಾಗುತ್ತದೆ ಎಂದು ಸಾರ್ವಜನಿಕರು ಪೊಲೀಸರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ

LEAVE A REPLY

Please enter your comment!
Please enter your name here