ಒಳಮೊಗ್ರು ಗ್ರಾಪಂನಿಂದ ಸಂವಿಧಾನ ಜಾಗೃತಿ ಜಾಥಾಕ್ಕೆ ಅದ್ಧೂರಿ ಸ್ವಾಗತ – ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ, ಮರವಣಿಗೆ, ಬಹುಮಾನ ವಿತರಣೆ

0

ಪುತ್ತೂರು: ಸಂವಿಧಾನ ದಿನಾಚರಣೆಯ ಅಂಗವಾಗಿ ಕರ್ನಾಟಕ ಸರಕಾರದ ಆದೇಶದಂತೆ ` ಸಂವಿಧಾನ ಜಾಗೃತಿ ಜಾಥಾ’ ಸ್ತಬ್ಧಚಿತ್ರದ ವಾಹನವು ಫೆ.15ರಂದು ಒಳಮೊಗ್ರು ಗ್ರಾಪಂಗೆ ಆಗಮಿಸಿತು. ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ವಾಹನ ಜಾಥವನ್ನು ಜನ್ಮ ಫ್ಯೂಯೆಲ್ಸ್ ಬಂಕ್ ಬಳಿ ಬರಮಾಡಿಕೊಂಡು ವಾಹನದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಅದ್ಧೂರಿಯಾಗಿ ಬರಮಾಡಿಕೊಂಡರು. ಅಲ್ಲಿಂದ ಕುಂಬ್ರ ಜಂಕ್ಷನ್‌ವರೆಗೆ ಭವ್ಯವಾದ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು. ಕುಂಬ್ರ ಅಶ್ವತ್ಥಕಟ್ಟೆಯ ಬಳಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆರಂಭದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹಾಗೂ ಸದಸ್ಯರುಗಳು ಮಾಲಾರ್ಪಣೆ ಮಾಡಿದರು ಬಳಿಕ ಅಂಬೇಡ್ಕರ್ ಭಾವಚಿತ್ರದ ಎದುರು ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವಾರ್ಪಣೆ ಸಲ್ಲಿಸಿದರು. ಇದೇ ವೇಳೆ ಸಂವಿಧಾನ ಜಾಗೃತಿ ಜಾಥಕ್ಕೊಂದು ನನ್ನ ವಿಜಯ ತಿಲಕ ಎಂದು ಬರೆದ ಭಾರತ ಭೂಪಟದಲ್ಲಿ ತಿಲಕ ಅಂಟಿಸುವ ಮೂಲಕ ಗೌರವ ಸೂಚಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ
ಸಂವಿಧಾನದ ಆಚರಣೆ ಮತ್ತು ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಸಂವಿಧಾನ ಜಾಗೃತಿ ಜಾಥಾದ ವಾಹನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಸಹಿತ ಸದಸ್ಯರುಗಳು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಅದೇ ರೀತಿ ಕುಂಬ್ರ ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಬೊಳ್ಳಾಡಿ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜರವರುಗಳು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ಕಾರ್ಯಕ್ರಮದ ವಿಶೇಷತೆಗಳು
ಮೊದಲಿಗೆ ಜಾಥವನ್ನು ಭವ್ಯವಾಗಿ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು. ಮೆರವಣಿಗೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು, ಪಂಚಾಯತ್ ಸದಸ್ಯರು, ಅಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು. ಬೈಕ್ ರ್‍ಯಾಲಿ ಕೂಡ ನಡೆಯಿತು. ಸಂವಿಧಾನ ಜಾಗೃತಿ ಬಗ್ಗೆ ಗ್ರಾಪಂ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿಶೇಷವಾಗಿ ಉದಯ ಆರ್ಟ್ಸ್‌ನ ಚಂದ್ರ ಜಿ.ರಚಿಸಿದ ಸಂವಿಧಾನ ಜಾಗೃತಿ ಜಾಥಕ್ಕೊಂದು ನನ್ನ ವಿಜಯ ತಿಲಕ ಎಂಬ ಭಾರತ ಭೂಪಟದ ಚಿತ್ರಕ್ಕೆ ಆರಂಭಕ್ಕೆ ಪಂಚಾಯತ್ ಅಧ್ಯಕ್ಷೆ ತ್ರಿವೇಣಿಯವರು ತಿಲಕವನ್ನಿಟ್ಟರು ಬಳಿಕ ಸೇರಿದವರು ತಿಲಕವನ್ನಿಡುವ ಮೂಲಕ ಜಾಥಕ್ಕೆ ವಿಜಯದ ಹಾರೈಕೆ ಮಾಡಲಾಯಿತು. ಸಂಜೀವಿನಿ ತಂಡದವರಿಂದ ಜಾಥಕ್ಕೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಗಿರೀಶ್ ನಾವಡ ಸುರತ್ಕಲ್ ತಂಡದವರಿಂದ ಅಸ್ಪರ್ಶೃತೆಯ ಬಗ್ಗೆ ಬೀದಿ ನಾಟಕ ನಡೆಯಿತು. ಅಸ್ಪರ್ಶೃತೆಯನ್ನು ತೊಡೆದು ಹಾಕುವ ಮೂಲಕ ನಾವೆಲ್ಲರೂ ಒಂದೇ ಎನ್ನುವ ಸಂದೇಶವನ್ನು ಸಾರಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ನೋಡೆಲ್ ಅಧಿಕಾರಿ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ನವೀನ್ ಸ್ಟೀಫನ್ ವೇಗಸ್, ಕಾರ್ಯಕ್ರಮ ಸಂಯೋಜಕ , ಸಮಾಜ ಕಲ್ಯಾಣ ಇಲಾಖೆಯ ಕೃಷ್ಣ ಬಿ, ಪಂಚಾಯತ್ ಕಾರ್ಯದರ್ಶಿ ಜಯಂತಿ, ಸದಸ್ಯರುಗಳಾದ ಶೀನಪ್ಪ ನಾಯ್ಕ, ಲತೀಪ್ ಟೈಲರ್, ಸಿರಾಜುದ್ದೀನ್, ಮಹೇಶ್ ರೈ, ಸುಂದರಿ, ರೇಖಾ, ವನಿತಾ, ಚಿತ್ರಾ,ನಿಮಿತಾ ರೈ, ಸಿಆರ್‌ಪಿ ಶಶಿಕಲಾ, ಕುಂಬ್ರ, ಕೆಪಿಎಸ್ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರು ಅಲ್ಲದೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು, ಶಾಲಾ ಮುಖ್ಯಗುರುಗಳು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು. ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಸ್ವಾಗತಿಸಿದರು. ಶಿಕ್ಷಕ ರಾಮಣ್ಣ ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here