‘ಹರೀಶ್ ಪೂಂಜ ಮಾದರಿ ಶಾಸಕರು. ನಮ್ಮಿಂದ ಕಲಿತು ನಮಗೆ ಕಲಿಸುತ್ತಿದ್ದಾರೆ’ ಎಂದು ಶಶಿಧರ ಶೆಟ್ಟರು ಹೇಳಿದ ಮಾತು ಬೆಳ್ತಂಗಡಿಯ ರಾಜಕೀಯಕ್ಕೆ ದಿಕ್ಸೂಚಿ ಆಗಬಹುದೇ? ಅದರಿಂದಾಗಿ ಮುಂದಿನ ಸಲ ಹರೀಶ್ ಪೂಂಜರು ಬೆಂಗಳೂರಿಗೆ, ಶಶಿಧರ ಶೆಟ್ಟರಿಗೆ ಬೆಳ್ತಂಗಡಿ ಅಥವಾ ಎಂ.ಪಿ. ಕೋಟ ದೊರಕಲಿದೆ ಎಂಬ ಅಭಿಪ್ರಾಯ ನಿಧಾನವಾಗಿ ಹರಡಲಾರಂಭಿಸಿದೆ.
ಕಳೆದ ಎರಡು ಬಾರಿ ಹರೀಶ್ ಪೂಂಜ ಬೆಳ್ತಂಗಡಿಯಲ್ಲಿ ಶಾಸಕರಾಗಲು ಬಂಡವಾಳ ಹಾಕಿದ್ದ, ಶ್ರಮವಹಿಸಿದ್ದ ಶಶಿಧರ ಶೆಟ್ಟಿ ಬರೋಡಾ ಅವರು ಕಿಂಗ್ ಮೇಕರ್ ಎಂದು ಎಲ್ಲರಿಗೂ ತಿಳಿದಿದೆ. ಈ ಸಲದ ಚುನಾವಣೆ ಫಲಿತಾಂಶ ಬರುವವರೆಗೆ ತೆರೆಮರೆಯಲ್ಲಿದ್ದ ಶಶಿಧರ ಶೆಟ್ಟರು ಇದೀಗ ಮುನ್ನಲೆಗೆ ಬರುತ್ತಿದ್ದಾರೆ, ಉದ್ಯಮಿಯಾಗಿ ಮಿಂಚುತ್ತಿದ್ದಾರೆ, ಸ್ಟಾರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶಾಸಕ ಹರೀಶ್ ಪೂಂಜರ ರಾಜಕೀಯ ಮತ್ತು ಇತರ ವಿರೋಧಿಗಳು ಶಶಿಧರ ಶೆಟ್ಟರಿಗೆ ವಿರೋಧಿಗಳಲ್ಲ. ಹಾಗೂ ಕೆಲವರು ಅವರ ಸ್ನೇಹಿತರೇ ಆಗಿದ್ದಾರೆ. ಆದುದರಿಂದ ಶಶಿಧರ ಶೆಟ್ಟರು ತಾಲೂಕಿನ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ, ಆರ್ಥಿಕ ಶಕ್ತಿಯಾಗಿ ಶಾಸಕ ಹರೀಶ್ ಪೂಂಜರನ್ನು ಮೀರಿ ಬೆಳೆಯುತ್ತಿದ್ದಾರೆ ಎಂಬ ಅಭಿಪ್ರಾಯ ಚಾಲ್ತಿಯಲ್ಲಿದೆ.
ಶಶಿಧರ ಶೆಟ್ಟರು ಬೆಳ್ತಂಗಡಿಯ ದೇವಸ್ಥಾನಗಳ ಬ್ರಹ್ಮಕಲಶೋತ್ಸವ, ವಿವಿಧ ಕಾರ್ಯಕ್ರಮಗಳ ದಾನಿಯಾಗಿ ಪ್ರೋತ್ಸಾಹಕರಾಗಿದ್ದಾರೆ. ಧರ್ಮಸ್ಥಳದ ಧರ್ಮಸಂರಕ್ಷಣಾಯಾತ್ರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿವಿಧ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ, ಅಧ್ಯಕ್ಷರಾಗಿ, ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಹರೀಶ್ ಪೂಂಜರು ಶಾಸಕರಾಗುವ ಮೊದಲು (ಶಶಿಧರ ಶೆಟ್ಟರ ಆರ್ಥಿಕ ಬೆಂಬಲದಿಂದ) ಬೆಳ್ತಂಗಡಿಯಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಮಾಡಿಸಿದ್ದಕ್ಕಿಂತ ಮತ್ತು ಮಾಡಿದ ಜನಪರ ಕೆಲಸಗಳಿಗಿಂತ ಹೆಚ್ಚು ಕೆಲಸ ಇದೀಗ ಶಶಿಧರ ಶೆಟ್ಟರಿಂದ ನಡೆಯುತ್ತಿದೆ ಎಂಬ ಅಭಿಪ್ರಾಯವಿದೆ. ಇದರಿಂದಾಗಿ ಮತ್ತು ಶಶಿಧರ ಶೆಟ್ಟರಿಗೆ ಇರುವ ಆರ್ಥಿಕ ಸಬಲತೆಯಿಂದಾಗಿ ರಾಜಕೀಯ ನಾಯಕರು ಇವರ ಹಿಂದೆ ಮುಂದೆ ಇದ್ದಾರೆ. ರಾಜಕೀಯ ಸ್ಥಾನಕ್ಕಾಗಿ ಇವರು ರಾಜಕೀಯ ನಾಯಕರೊಂದಿಗೆ ಬೆರೆಯುತ್ತಿದ್ದಾರೆ. ಮಾಧ್ಯಮದವರನ್ನು ಹಿಡಿದುಕೊಂಡಿದ್ದಾರೆ. ಮಾಧ್ಯಮದವರು ಇವರ ಹಿಂದೆ ಬೀಳುತ್ತಿದ್ದಾರೆ.
ಇತ್ತೀಚಿನ ಕಾರ್ಯಕ್ರಮ ಒಂದರಲ್ಲಿ ಶಶಿಧರ ಶೆಟ್ಟಿಯವರು ಹರೀಶ್ ಪೂಂಜರನ್ನು ಉದ್ದೇಶಿಸಿ -‘ಹರೀಶ್ ಪೂಂಜ ಮಾದರಿ ಶಾಸಕರು, ನಮ್ಮಿಂದ ಕಲಿತು ನಮಗೇ ಕಲಿಸುತ್ತಿದ್ದಾರೆ’ ಎಂದು ಹೇಳಿದ ಮಾತನ್ನು ಹರೀಶ್ ಪೂಂಜಾರವರು ನಗುತ್ತಲೇ ಸ್ವೀಕರಿಸಿದ್ದಾರೆ. ಅದು ಹರೀಶ್ ಪೂಂಜರ ಮೇಲೆ ಶಶಿಧರ ಶೆಟ್ಟರಿಗೆ ಇರುವ ಪ್ರಭಾವವನ್ನು ತೋರಿಸುತ್ತದೆ. ಮಾತ್ರವಲ್ಲ ಮುಂದೆ ಬೆಳ್ತಂಗಡಿಯ ರಾಜಕೀಯ ಚಿತ್ರಣಕ್ಕೆ ದಿಕ್ಸೂಚಿ ಆಗಬಲ್ಲದು ಎಂದರೆ ತಪ್ಪಾಗಲಾರದು. ಒಟ್ಟಿನಲ್ಲಿ ಈ ಮೇಲಿನ ಎಲ್ಲಾ ಕಾರಣಗಳಿಂದಾಗಿ ಮುಂದಿನ ಸಲ ಚುನಾವಣೆಗೆ ಹರೀಶ್ ಪೂಂಜರವರು ಬೆಂಗಳೂರಿಗೆ, ಶಶಿಧರ ಶೆಟ್ಟರಿಗೆ ಬೆಳ್ತಂಗಡಿ ಕ್ಷೇತ್ರ ಅಥವಾ ಎಂ.ಪಿ. ಕೋಟ ದೊರಕಲಿದೆ. ಅದಕ್ಕಾಗಿ ತಯಾರಿ ನಡೆಯುತ್ತಿದೆ ಎಂಬ ಅಭಿಪ್ರಾಯ ಸಣ್ಣ ಪ್ರಮಾಣದಲ್ಲಿ ಜನರಲ್ಲಿ ಹರಡಲಾರಂಭಿಸಿದೆ.