ಇಂದು ಮಂಗಳೂರಿನಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶ-ಖರ್ಗೆ, ಸಿಎಂ., ಡಿಸಿಎಂ, ಸಚಿವರ ಸಹಿತ ಪಕ್ಷದ ನಾಯಕರ ಆಗಮನ

0

ಪುತ್ತೂರು: ಮುಂಬರುವ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಆರಂಭಿಸಿದ್ದು ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ರಾಜ್ಯ ಮಟ್ಟದ ಸಮಾವೇಶ ಫೆ.17ರಂದು ಮಂಗಳೂರುನಲ್ಲಿ ನಡೆಯಲಿದೆ.

ಮಂಗಳೂರು ಅಡ್ಯಾರಿನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮುಂಭಾಗದ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಮಾವೇಶ ಅಪರಾಹ್ನ 2 ಗಂಟೆಗೆ ನಡೆಯಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಹಿತ ರಾಜ್ಯ ಸಚಿವರು ಸೇರಿದಂತೆ ಪಕ್ಷದ ಹಲವು ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶಕ್ಕಾಗಿ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿದ್ದು ಗಣ್ಯರ ಆಗಮನದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ, ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಿಂದಲೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಾರ್ಯಕರ್ತರು, ಪಕ್ಷದ ಪ್ರಮುಖರು ಮಂಗಳೂರು ತೆರಳಿದ್ದಾರೆ.

ಬಸ್ಸುಗಳ ವ್ಯವಸ್ಥೆ:
ಸಮಾವೇಶಕ್ಕೆ ತೆರಳುವವರಿಗಾಗಿ ಪುತ್ತೂರು, ಕಡಬ ಸಹಿತ ವಿವಿಧ ಕಡೆಗಳಿಂದ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ. ಅವಿಭಜಿತ ದ.ಕ.ಜಿಲ್ಲೆಯಲ್ಲಿ ಪ್ರಸ್ತುತ ಓರ್ವರೇ ಕಾಂಗ್ರೆಸ್ ಶಾಸಕರು ಇರುವ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಸಮಾವೇಶಕ್ಕೆ ತೆರಳಲಿದ್ದು ಈ ಕುರಿತು ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ಈಗಾಗಲೇ ಸಭೆಗಳು ನಡೆದು ಚರ್ಚೆ ನಡೆಸಲಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಸಹಭಾಗಿತ್ವದಲ್ಲಿ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಸಹಕಾರದಿಂದ ಈ ಕಾರ್ಯಕ್ರಮ ನಡೆಯಲಿದೆ. ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಎಲ್ಲಾ ಹಂತದ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ತಮ್ಮ ಸಂಘಟನಾ ಶಕ್ತಿಯನ್ನು ವಿರೋಧ ಪಕ್ಷದವರಿಗೆ ತೋರಿಸುವ ನಿಟ್ಟಿನಲ್ಲಿ ಮತ್ತು ಸರಕಾರದ ಕಾರ್ಯಕ್ರಮಗಳನ್ನು ಜನತೆಗೆ ಮುಟ್ಟಿಸುವ ನಿಟ್ಟಿನಲ್ಲಿ ಈ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಲು ಕೆಪಿಸಿಸಿಯಿಂದ ಪ್ರತಿ ತಾಲೂಕು ಮಟ್ಟಕ್ಕೂ ವೀಕ್ಷಕರ ನೇಮಕ ಮಾಡಲಾಗಿದೆ.ಜೊತೆಗೆ ಪ್ರತಿಬ್ಲಾಕ್‌ಗೆ ಕೂಡಾ ಉಸ್ತುವಾರಿಗಳನ್ನು ನೇಮಿಸಲಾಗಿದೆ.

ವಾಹನಗಳ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ:
ಕಾಂಗ್ರೆಸ್ ಸಮಾವೇಶದ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ 73ರ ರಸ್ತೆಯಲ್ಲಿ ಸಂಚರಿಸುವ ಘನ ವಾಹನಗಳ ಸಂಚಾರದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಸಮಾವೇಶಕ್ಕೆ ಆಗಮಿಸುವ ಕಾರ್ಯಕರ್ತರ ವಾಹನಗಳನ್ನು ನಿಲ್ಲಿಸಲು ಸ್ಥಳಗಳನ್ನು ನಿಗದಿಪಡಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ನಗರದ ಮೂಲಕ ಬಿ.ಸಿ.ರೋಡ್/ಬೆಂಗಳೂರು ಕಡೆಗೆ ಸಂಚರಿಸುವ ಘನ ವಾಹನಗಳು ನಂತೂರು-ಪಂಪ್‌ವೆಲ್-ತೊಕ್ಕೊಟ್ಟು-ಮುಡಿಪು-ಮೆಲ್ಕಾರ್ ಮೂಲಕ ಸಂಚರಿಸುವುದು. ಬೆಂಗಳೂರು/ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಘನ ವಾಹನಗಳು ಮೆಲ್ಕಾರ್-ಮುಡಿಪು-ತೊಕ್ಕೊಟ್ಟು-ಪಂಪ್‌ವೆಲ್ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ. ಈ ತಾತ್ಕಾಲಿಕ ಸಂಚಾರ ಮಾರ್ಪಾಡು ಫೆ.17ರಂದು ಬೆಳಗ್ಗೆ 9 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ಊರ್ಜಿತದಲ್ಲಿರುತ್ತದೆ.

ವಾಹನ ಪಾರ್ಕಿಂಗ್ ಸ್ಥಳಗಳ ವಿವರ:
*ಬಂಟ್ವಾಳ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಗಣ್ಯರ ಕಾರುಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಕಾಮತ್ ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ.
*ಬಂಟ್ವಾಳ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರ ಕಾರುಗಳಿಗೆ ಅಡ್ಯಾರ್‌ನ ಕರ್ಮಾರ್ ಮೈದಾನದಲ್ಲಿ ಪಾರ್ಕಿಂಗ್ ಸೌಲಭ್ಯ.
*ಬಂಟ್ವಾಳ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಬಸ್‌ಗಳು ಕಾರ್ಯಕರ್ತರನ್ನು ಕಾಮತ್ ಪಾರ್ಕಿಂಗ್ ಬಳಿ ಇಳಿಸಿ ಅಲ್ಲಿಂದ ಮುಂದುವರಿದು ಕಣ್ಣೂರಿನಲ್ಲಿ ಯೂ ಟರ್ನ್ ಮಾಡಿ ಮೋತಿಶ್ಯಾಮ್/ಷಾ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕಾಗಿದೆ.
*ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಗಣ್ಯರ ಕಾರುಗಳಿಗೆ ಅಡ್ಯಾರ್ ಗಾರ್ಡನ್‌ನಲ್ಲಿ ಪಾರ್ಕಿಂಗ್ ಮಾಡುವಂತೆ ಸೂಚಿಸಲಾಗಿದೆ.
*ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಬಸ್‌ಗಳ ಚಾಲಕರು ಕಾರ್ಯಕರ್ತರನ್ನು ಅಡ್ಯಾರ್ ಗಾರ್ಡನ್ ಮುಂಭಾಗ ಇಳಿಸಿ ಸೋಮನಾಥಕಟ್ಟೆಯಲ್ಲಿ ಯೂ ಟರ್ನ್ ಮಾಡಿ ಕಣ್ಣೂರು ಮಸೀದಿ ಬಳಿ ಇರುವ ಷಾ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕಾಗಿದೆ.
*ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ದ್ವಿಚಕ್ರ ವಾಹನಗಳನ್ನು ಅಡ್ಯಾರ್ ಗಾರ್ಡನ್ ಮೈದಾನದಲ್ಲಿ ಪಾರ್ಕಿಂಗ್ ಮಾಡುವುದು. ಅಡ್ಯಾರ್ ಕಟ್ಟೆಯಲ್ಲಿರುವ ಜಯಶೀಲರವರ ಮೈದಾನದಲ್ಲಿ ಕೂಡಾ ಪಾರ್ಕಿಂಗ್ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಮಂಗಳೂರು ನಗರ ಪೊಲೀಸರ ಪ್ರಕಟನೆ ತಿಳಿಸಿದೆ.

ಸಿಎಂ ಭೇಟಿ ಹಿನ್ನೆಲೆ ಡ್ರೋನ್ ನಿಷೇಧ:
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಫೆ.17ರಂದು ರಾಜ್ಯಮಟ್ಟದ ಕಾಂಗ್ರೆಸ್ ಸಮಾವೇಶ ಹಾಗೂ ವಾಮಂಜೂರಿನ ತಿರುವೈಲ್‌ನಲ್ಲಿ ಕಂಬಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿಗಳ ಸುರಕ್ಷತೆ ಮತ್ತು ಭದ್ರತೆಯ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಫೆ.17ರಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಂಗಳೂರು ನಗರದ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಆವರಣದ ಸುತ್ತಮುತ್ತ ಐದು ಕಿಲೋಮೀಟರ್ ವ್ಯಾಪ್ತಿಯನ್ನು ಹಾಗೂ ವಾಮಂಜೂರಿನ ತಿರುವೈಲಿನಲ್ಲಿ ನಡೆಯಲಿರುವ ಕಂಬಳ ಕಾರ್ಯಕ್ರಮದ ಸುತ್ತಮುತ್ತ 5 ಕಿ.ಮೀ ವ್ಯಾಪ್ತಿಯನ್ನು ತಾತ್ಕಾಲಿಕವಾಗಿ ರೆಡ್‌ಝೋನ್ ಎಂದು ಪರಿಗಣಿಸಿ ಆ ಪ್ರದೇಶದಲ್ಲಿ ಯಾವುದೇ ಮಾದರಿಯ ಡ್ರೋನ್ ಹಾರಾಟ ಬಳಕೆ ಮತ್ತು ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here