ಸಹಕಾರ ಮನೋಭಾವ ವೃದ್ಧಿಗೆ ಶಿಬಿರವು ಸಹಕಾರಿ: ಪುಷ್ಪಲತಾ ದೇವಕಜೆ
ಪುತ್ತೂರು: ಸಹಕಾರ ಮನೋಭಾವ ವೃದ್ಧಿಗೆ ಶಿಬಿರವು ಸಹಕಾರಿ. ಶಿಬಿರದಲ್ಲಿ ಪಡೆಯುವ ಅನುಭವಗಳು ವಿದ್ಯಾರ್ಥಿಯ ಮಾನಸಿಕ ಹಾಗೂ ದೈಹಿಕ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿದೆ. ಶಿಬಿರಾರ್ಥಿಗಳ ಕಾರ್ಯಗಳು ಶಾಲೆಯ ಪ್ರಗತಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ ಎಂದು ಬಡಗನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಲತಾ ದೇವಕಜೆ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೊಯ್ಲ, ಬಡಗನ್ನೂರು ಶಾಲೆಯಲ್ಲಿ ನಡೆಯುತ್ತಿರುವ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಶಿಬಿರಾಧಿಕಾರಿ ಯೋಗೀಶ್ ಎಲ್.ಎನ್ ಕಾಲೇಜಿನ ಎನ್ಎಸ್ಎಸ್ ಘಟಕಗಳ ಪೂರ್ವ ಕಾರ್ಯಗಳನ್ನು ತಿಳಿಸುತ್ತಾ ಪ್ರಸ್ತುತ ಶಿಬಿರದ ಪ್ರಮುಖ ಯೋಜನೆಗಳನ್ನು ವಿವರಿಸಿದರು.ಅತಿಥಿ ಪಡುಮಲೆ ಜೀರ್ಣೋಧ್ಧಾರ ಸಮಿತಿ ಕೊವೆಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು ಮಾತನಾಡಿ ಶಿಬಿರವು ವಿದ್ಯಾರ್ಥಿ ಮತ್ತು ಸಮಾಜದ ನಡುವಿನ ಕೊಂಡಿಯಾಗಿದ್ದು ಸಾಮಾಜಿಕವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ ಎಂದರು.
ವಾಲಿಬಾಲ್ ಅಸೋಸಿಯೇಷನ್ ಪುತ್ತೂರು ಅಧ್ಯಕ್ಷ ಸತೀಶ್ ರೈ ಕಟ್ಟಾವು ಮಾತನಾಡಿ, ಶಿಬಿರದ ಕಲಿಕೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸರ್ವರ ಸಹಯೋಗದೊಂದಿಗೆ ಶಿಬಿರದ ಯೋಜನೆಗಳನ್ನು ಸಹಕಾರಗೊಳಿಸಲು ಶುಭಹಾರೈಸಿದರು.ಶಾಲೆಯ ಮುಖ್ಯ ಗುರು ಪುಷ್ಪಾವತಿ ಎಂ ಬಿ ಮಾತನಾಡಿ ಎನ್ಎಸ್ಎಸ್ ಶಿಬಿರವು ಸ್ವಯಂಸೇವಕರಲ್ಲಿ ಸೇವಾ ಮನೋಭಾವದ ಜೊತೆಗೆ ಜೀವನ ಪಾಠವನ್ನು ಕಲ್ಪಿಸಿಕೊಡುತ್ತದೆ ಮತ್ತು ಇವರ ಕಾರ್ಯಗಳು ಇತರರಿಗೆ ಸ್ಪೂರ್ತಿದಾಯಕವಾಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಕುಂಬ್ರ ಕ್ಲಸ್ಟರ್ ಸಿ ಆರ್ ಪಿ ಶಶಿಕಲಾ ಮಾತನಾಡಿ ಶಿಬಿರಾರ್ಥಿಯು ಸಮಾಜಕ್ಕೆ ಕೊಡಲು ಸಾಧ್ಯವಾಗುವ ಮಾನವ ಸಂಪನ್ಮೂಲವೇ ಸೇವೆಯಾಗಿದೆ ಶಿಬಿರವು ಅಗಾಧವಾದ ಅನುಭವ ಕೌಶಲ್ಯದ ಜೊತೆಗೆ ಶಾಶ್ವತ ನೆನಪುಗಳನ್ನು ಕಟ್ಟಿಕೊಡುತ್ತದೆ ಎಂದರು.ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಮಾತನಾಡಿ, ಯಾಂತ್ರಿಕ ಯುಗವು ಶ್ರಮದಾನದ ಮಹತ್ವವನ್ನು ಕುಂಠಿತಗೊಳಿಸಿದ್ದರೂ ಎನ್ಎಸ್ಎಸ್ ನ ಸ್ವಯಂಸೇವಕರು ಶ್ರಮದಾನಾದಿ ಸೇವಾ ಕಾರ್ಯಗಳಲ್ಲಿ ಉತ್ಸುಕತೆ ತೋರುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಗಳೊಡನೆ ಬೆರೆಯುತ್ತಾ ಜ್ಞಾನಾಭಿವೃದ್ಧಿಯನ್ನು ಹೊಂದಿರಿ ಎಂದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ನಾಯ್ಕ , ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಕಾಶ್ ರೈ ಕೊಯ್ಲ, ಕಾಲೇಜಿನ ಗ್ರಂಥಪಾಲಕ ರಾಮ ಕೆ, ಊರವರು, ಶಾಲಾ ವಿದ್ಯಾರ್ಥಿಗಳು, ಘಟಕ ನಾಯಕರುಗಳು, ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಪರು. ಹರ್ಷ.ಪಿ ವಂದಸಿದರು. ಘಟಕ ನಾಯಕಿ ಕೃತಿಕಾ ಪಿ ನಿರೂಪಿಸಿದರು.