ಅಕ್ಷಯ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಕಾನೂನು ಮಾಹಿತಿ

0

ಅಮೂಲ್ಯ “ಮತ” ಚಲಾಯಿಸಿ, “ಯೋಗ್ಯ” ವ್ಯಕ್ತಿಯನ್ನು ಆರಿಸಿ-ನ್ಯಾಯಾಧೀಶೆ ಅರ್ಚನಾ ಉಣ್ಣಿತಾನ್

ಪುತ್ತೂರು: ವಯಸ್ಸು ಹದಿನೆಂಟು ತುಂಬಿದ ಪ್ರತಿಯೋರ್ವ ನಾಗರಿಕ ಮತವನ್ನು ಚಲಾಯಿಸುವ ಹಕ್ಕು ಸಂವಿಧಾನದಲ್ಲಿ ಬರುತ್ತದೆ. ಆದ್ದರಿಂದ ನಮ್ಮ ಅಮೂಲ್ಯ “ಮತ” ಚಲಾಯಿಸಿ, “ಯೋಗ್ಯ” ವ್ಯಕ್ತಿಯನ್ನು ಆರಿಸುವ ಮೂಲಕ ಸುಭದ್ರ ಭಾರತಕ್ಕೆ ಮುಂದಡಿ ಇಡಬೇಕಾಗಿದೆ ಎಂದು ಜೆ.ಎಂ.ಎಫ್.ಸಿ ಪುತ್ತೂರು ಮತ್ತು ಪ್ರಧಾನ ವ್ಯವಹಾರಿಕ ನ್ಯಾಯಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಅರ್ಚನಾ ಕೆ.ಉಣ್ಣಿತಾನ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಸಂಪ್ಯ ಅಕ್ಷಯ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಅಕ್ಷಯ ಕಾಲೇಜಿನ ಸಭಾಂಗಣದಲ್ಲಿ ಫೆ.17 ರಂದು ನಡೆದ ಅಂತರರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಕಾನೂನು ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮತ ಎನ್ನುವುದು ಅದು ಅಮೂಲ್ಯವಾಗಿದೆ. ನಮ್ಮ ಒಂದು ಮತದಿಂದ ಏನೂ ಆಗಬಲ್ಲುದು. ಆದರೆ ನಿರ್ಧಾರವಾಗುವುದು ಆ ಒಂದು ಮತದಿಂದಲೇ. ಆದ್ದರಿಂದ ದೇಶದ ಹಿತದೃಷ್ಟಿಯಿಂದ ನಾವು ಯಾರನ್ನು ಆರಿಸಬೇಕು ಎನ್ನುವುದು ಪ್ರತಿಯೋರ್ವರ ವಿವೇಚನೆಗೆ ಬಿಟ್ಟದ್ದು ಎಂದರು.

ಅಧ್ಯಕ್ಷತೆ ವಹಿಸಿದ ಪುತ್ತೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ ಮಾತನಾಡಿ, ಯಾವುದೇ ರೀತಿಯ ಆಸೆ-ಆಮಿಷೆಗಳಿಗೆ ಯಾರೂ ಬಲಿಯಾಗಬಾರದು. ಯಾರು ಸಮಾಜದ ಒಳಿತನ್ನು ಚಿಂತಿಸುತ್ತಾರೋ ಅವರಿಗೆ ತಮ್ಮ ಹಕ್ಕಿನ ಮತ ಚಲಾಯಿಸಿ. ಹಿಂದೆ ನ್ಯಾಯಾಧೀಶರು ಪಬ್ಲಿಕ್ ಆಗಿ ಬರುವಂತಹುದು ಇಲ್ಲವಾಗಿತ್ತು. ಆದರೆ ಈಗ ಕಾನೂನು ಸೇವಾ ಸಮಿತಿಯ ಮೂಲಕ ಜನರಿಗೆ ಅರಿವನ್ನು ಮೂಡಿಸುವ ಕೆಲಸ ಆಗುತ್ತಿದೆ. ಕೆಲವರಿಗೆ ತನ್ನ ಕೇಸಿಗೆ ಹಣ ಹೊಂದಿಸಲು ಕಷ್ಟವಾಗಿದ್ದ ಸಂದರ್ಭದಲ್ಲಿ ಕಾನೂನು ಸೇವಾ ಸಮಿತಿಯು ಅದನ್ನು ಉಚಿತವಾಗಿ ಭರಿಸುವ ಕಾರ್ಯ ಆಗುತ್ತಿದೆ ಎಂದರು.

ಸಂಪ್ಯ ಅಕ್ಷಯ ಕಾಲೇಜು ಪ್ರಾಂಶುಪಾಲ ಸಂಪತ್ ಕೆ.ಪಕ್ಕಳ ಮಾತನಾಡಿ, ಸಾಮಾನ್ಯ ವ್ಯಕ್ತಿಯಾಗಲಿ, ಪ್ರಧಾನ ಮಂತ್ರಿಯಾಗಲಿ, ಸಂವಿಧಾನಬದ್ಧವಾಗಿ ಇಲ್ಲಿ ಎಲ್ಲರೂ ಸಮಾನರೇ. ಕಾನೂನನ್ನು ಉಲ್ಲಂಘಿಸುವುದು, ಕಾನೂನನ್ನು ಮಿತಿ ಮೀರುವುದು ಸಂವಿಧಾನದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇರುತ್ತದೆ. ತನ್ನ ಒಂದು ಮತದಿಂದ ಏನೂ ಆಗದು ಎಂದು ನಾವು ಸುಮ್ಮನಿದ್ದರೆ ಮುಂದೆ ನಾವು ಪಶ್ಚಾತ್ತಾಪ ಪಡಬೇಕಾದೀತು. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಪ್ರಯೋಜನವಿಲ್ಲ ಎಂಬಂತೆ ಆಗಬಲ್ಲುದು ಎಂದರು.

ನ್ಯಾಯವಾದಿ ಪ್ರಿಯಾ ಮಹೇಶ್, ಅಕ್ಷಯ ಕಾಲೇಜು ಚೇರ್ ಮ್ಯಾನ್ ಜಯಂತ್ ನಡುಬೈಲು ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕಿ ರಶ್ಮಿ ಸ್ವಾಗತಿಸಿ, ಪುತ್ತೂರು ವಕೀಲರ ಸಂಘದ ಜೊತೆ ಕಾರ್ಯದರ್ಶಿ ಸೀಮಾ ನಾಗರಾಜ್ ವಂದಿಸಿದರು. ಉಪನ್ಯಾಸಕರಾದ ಮೇಘಶ್ರೀ, ರಕ್ಷಣ್ ಟಿ.ಆರ್, ಪ್ರಭಾವತಿ, ಕಾವ್ಯ ಮಲ್ಲಿಕಾರ್ಜುನ್, ಕಿಶೋರ್ ಕುಮಾರ್ ರೈ, ಶ್ರದ್ಧಾ, ಜನಿಟರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ನ್ಯಾಯವಾದಿ ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು.

ಒಂದು ಮತ ದೇಶದ ಸಮಗ್ರ ಬದಲಾವಣೆಗೆ ನಾಂದಿ…
ಜನವರಿ 25 ದೇಶದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಒಂದು ಮತ ದೇಶದ ಸಮಗ್ರ ಬದಲಾವಣೆಗೆ ನಾಂದಿ ಹಾಡಬಲ್ಲುದು. ಮೊದಲು 21 ವರ್ಷಕ್ಕೆ ಮತದಾನ ಮಾಡುವ ಅವಕಾಶವಿದ್ದಿತ್ತು. ಆದರೆ ಈಗ ದೇಶದ ಹಿತಾಸಕ್ತಿಯನ್ನು ಗಮನಿಸಿ 18 ವರ್ಷಕ್ಕೆ ಮತ ಚಲಾಯಿಸುವ ಮಹತ್ತರ ಬದಲಾವಣೆಯನ್ನು  ಸಂವಿಧಾನದಲ್ಲಿ ತರಲಾಯಿತು.  ಇಂದಿನ ಡಿಜಿಟಲ್ ಯುಗದಲ್ಲಿ ಇವಿಎಂ ಮೆಷಿನ್ ಮತದಾನಕ್ಕೆ ಸೂಕ್ತವಾದ ಕ್ರಮವಾಗಿದೆ ಮಾತ್ರವಲ್ಲ ಪ್ರಧಾನಿಯವರೂ ಕೂಡ ಈ ನಿಟ್ಟಿನಲ್ಲಿ ಉತ್ತಮ ಹೆಜ್ಜೆಯನ್ನಿಟ್ಟಿದ್ದಾರೆ. ತಮ್ಮ ಮತವನ್ನು ಬೇರೆಯವರು ಚಲಾಯಿಸುವಾಗ ಅದನ್ನು ಪ್ರಶ್ನಿಸುವ ಹಕ್ಕು ಸಂವಿಧಾನವು ಪ್ರತಿಯೋರ್ವನಿಗೆ ಅನುಕೂಲ ಮಾಡಿಕೊಟ್ಟಿದೆ.
– ಚಂದ್ರಾವತಿ ಟಿ, ಸಂಪನ್ಮೂಲ ವ್ಯಕ್ತಿ ಹಾಗೂ ವಕೀಲರು

LEAVE A REPLY

Please enter your comment!
Please enter your name here