ವರದಿ-ಉಮಾಪ್ರಸಾದ್ ರೈ ನಡುಬೈಲು
ಪುತ್ತೂರು: ಸವಣೂರಿನಿಂದ ಕೇವಲ 11 ಕಿ.ಮೀ, ದೂರ ಕ್ರಮಿಸಿದರೆ ಬೆಳ್ಳಾರೆಯನ್ನು ಇನ್ನೂ ಸುಲಭದಲ್ಲಿ ತಲುಪಬಹುದು. ಸವಣೂರಿನಿಂದ ಕುಂಜಾಡಿ ಹಾಗೆಯೇ ಕಾಪುಕಾಡು-ಬೆಳ್ಳಾರೆ ನಡುವೆ ರಸ್ತೆ ಅತ್ಯಂತ ಯೋಗ್ಯವಾಗಿತ್ತು. ಆದರೆ ಕುಂಜಾಡಿ-ಕಾಪುಕಾಡು ರಸ್ತೆಯು ಅಭಿವೃದ್ದಿ ಆಗದೇ ವಾಹನ ಸವಾರರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದರು. ಆದರೆ ಇದೀಗ ಕುಂಜಾಡಿ- ಮುಕ್ಕೂರು-ಕಾಪುಕಾಡು ನಡುವೆ ಮಧ್ಯಮ ಪಥ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಕೆಲಸ ಕಾರ್ಯ ಬಿರುಸಿನಿಂದ ನಡೆಯುತ್ತಿದೆ.
ಮೂರು ವರ್ಷದ ಬಳಿಕ ವಿಸ್ತರಣೆ
ಸುಳ್ಯ ಉಪವಿಭಾಗಕ್ಕೆ ಸೇರಿರುವ ಮಾಸ್ತಿಕಟ್ಟೆಯಿಂದ – ಕಾಪುಕಾಡು ತನಕ 3.5ಕೋಟಿ ವೆಚ್ಚದಲ್ಲಿ ಕಾಮಗಾರಿ ಪೂರ್ಣ ಗೊಂಡು ಉದ್ಘಾಟನೆಗೊಂಡಿದೆ. ಪುತ್ತೂರು ಉಪವಿಭಾಗಕ್ಕೆ ಸೇರಿದ ಕನ್ನಡಕುಮೇರಿನಿಂದ ಕಾಪುಕಾಡು ತನಕ ರಸ್ತೆ ವಿಸ್ತರಣೆಯಾಗಿ ಹೊಸದಾಗಿ ಡಾಮಾರು ಕಾಣಲಿದೆ ಎಂದು ಹೇಳಲಾಗಿತ್ತಾದರೂ ಕನ್ನಡಕುಮೇರಿನಿಂದ ಬೊಬ್ಬರಕಾಡು ಚೆಡಾವಿನ ತನಕ ಮಾತ್ರ ಡಾಮಾರು ಆಗಿತ್ತು. ಅಲ್ಲಿಂದ ಮುಕ್ಕೂರು-ಕಾಪುಕಾಡು ತನಕ ರಸ್ತೆಯ ಇಕ್ಕೆಲ ಅಗೆದು ಮೂರು ವರ್ಷ ಸಂದಿದ್ದು ಅಭಿವೃದ್ಧಿ ಆಗಿರಲಿಲ್ಲ. ಇದೀಗ ಅನುದಾನ ಕಾಯ್ದಿರಿಸಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಪ್ರಮುಖ ಸಂಪರ್ಕ ರಸ್ತೆ
ಶಾಂತಿಮೊಗರು ಬಳಿ ಕುಮಾರಧಾರಾ ನದಿಗೆ ಸೇತುವೆ ನಿರ್ಮಾಣಗೊಂಡ ಬಳಿಕ ಯಾತ್ರಾರ್ಥಿಗಳಿಗೆ ಕಡಿಮೆ ಸಮಯದಲ್ಲಿ ಬೆಳ್ಳಾರೆ- ಪೆರುವಾಜೆ ಸವಣೂರು ಸಂಪರ್ಕ ರಸ್ತೆ ಮೂಲಕ ಧರ್ಮಸ್ಥಳಕ್ಕೆ ತೆರಳಲು ಅನುಕೂಲಕರವೆನಿಸಿದೆ. ಪ್ರಯಾಣಿಕರಿಗೆ 30 ಕಿ.ಮೀ ಹಾಗೂ 45 ನಿಮಿಷ ಸಮಯ ಉಳಿತಾಯವಾಗುವುದರಿಂದ ಮಡಿಕೇರಿ-ಸುಳ್ಯ- ಬೆಳ್ಳಾರೆ- ಸವಣೂರು- ಶಾಂತಿಮೊಗರು- ನೆಲ್ಯಾಡಿ- ಪಟ್ರಮೆ- ಧರ್ಮಸ್ಥಳ ರಸ್ತೆಯಲ್ಲಿ ಪ್ರಯಾಣ ಮಾಡುತ್ತಾರೆ. ಮೈಸೂರಿನಿಂದ ಮಡಿಕೇರಿ, ಕಾಸರಗೋಡು, ಸುಳ್ಯ ಸೇರಿದಂತೆ ತಾಲೂಕು, ಹೊರ ಜಿಲ್ಲೆಯ ಜನರು ಧರ್ಮಸ್ಥಳ ಕ್ಷೇತ್ರಕ್ಕೆ ತೆರಳಲು ಈ ರಸ್ತೆಯನ್ನು ಬಳಸುತ್ತಾರೆ. ಜತೆಗೆ ಪೆರುವಾಜೆ ಮತ್ತು ಬೆಳಂದೂರಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜ್, ಕಡಬ ತಾಲೂಕು ಕೇಂದ್ರ, ಶರವೂರು, ಶಾಂತಿಮೊಗರು, ಸೌತೆಡ್ಕ, ಪೆರುವಾಜೆ ದೇವಸ್ಥಾನ, ಸವಣೂರಿನಲ್ಲಿ ಪದ್ಮಾವತಿ ದೇವಿ ಬಸದಿ, ಕುದ್ಮಾರು ಕೂರ ಎಂಬಲ್ಲಿ ಮಸೀದಿ, ಅಲಂಕಾರು, ನೆಲ್ಯಾಡಿ, ಬೆಂಗಳೂರು ಮೊದಲಾದಡೆ ತೆರಳಲು ಈ ರಸ್ತೆಯೇ ಪ್ರಧಾನವಾಗಿದೆ.
ಶರವೇಗದಲ್ಲಿ ಸಾಗುತ್ತಿದೆ ಕುಂಜಾಡಿ ಸೇತುವೆ ಕಾಮಗಾರಿ
ಸವಣೂರು- ಬೆಳ್ಳಾರೆ ರಸ್ತೆಯ ಕುಂಜಾಡಿ ಬಳಿ 2.5 ಕೋಟಿ ರೂ, ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿ ಶರವೇಗದಲ್ಲಿ ಸಾಗುತ್ತಿದೆ. ಕಾಮಗಾರಿ ನಡೆಸುವವರು ಅತ್ಯಂತ ಚುರುಕಿನಿಂದ ಕೆಲಸ ಕಾರ‍್ಯವನ್ನು ಮಾಡುತ್ತಿದ್ದಾರೆ. ಲೋಕಪಯೋಗಿ ಇಲಾಖೆಯ ಲೆಕ್ಕ ಶೀರ್ಷಿಕೆ 50-54ರ 2.5 ಕೋ.ಅನುದಾನದಲ್ಲಿ ಸೇತುವೆ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲಾಗಿದೆ.
ಧರ್ಮಸ್ಥಳ ಕ್ಷೇತ್ರ ಸಹಿತ ಹಲವು ಪ್ರದೇಶಗಳಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿ ರುವ ಬೆಳ್ಳಾರೆ- ಪೆರುವಾಜೆ- ಸವಣೂರು ರಸ್ತೆಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗಿದೆ. ಕೊನೆಯ ಹಂತವಾಗಿರುವ ಮುಕ್ಕೂರು- ಕಾಪುಕಾಡು ತನಕ ರಸ್ತೆ ಅಭಿವೃದ್ಧಿ ಕೆಲಸ ಪ್ರಾರಂಭಗೊಂಡಿದ್ದು, ಅತೀ ಶ್ರೀಘ್ರ ಕಾಮಗಾರಿ ಮುಕ್ತಾಯವಾಗಲಿದೆ.
ಲೋಕಪಯೋಗಿ ಇಲಾಖೆಯ ಪುತ್ತೂರು ಉಪವಿಭಾಗ ವ್ಯಾಪ್ತಿಗೆ ಒಳಪಟ್ಟಿರುವ ರಸ್ತೆ ಇದಾಗಿದೆ. ಏಳು ಮೀಟರ್ ಅಗಲದ ರಸ್ತೆ ನಿರ್ಮಾಣ ಆಗಲಿದ್ದು, ಒಟ್ಟು 10 ಕೋಟಿ ರೂ.ಅನುದಾನ ಮುಂಜೂರಾಗಿ ಕಾಮಗಾರಿ ಪ್ರಾರಂಭಗೊಂಡಿದೆ, ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರವರ ಮುತುವರ್ಜಿ ಮೇರೆಗೆ ನಿಕಟಪೂರ್ವ ಶಾಸಕ ಎಸ್. ಅಂಗಾರರವರ ಅವಧಿಯಲ್ಲಿ ಈ ರಸ್ತೆಗೆ ಅನುದಾನ ಮೀಸಲಿಡಲಾಗಿತ್ತು.