ಪುತ್ತೂರು: ದ್ವಾರಕಾ ಪ್ರತಿಷ್ಠಾನ ಪುತ್ತೂರು ವತಿಯಿಂದ ದ್ವಾರಕೋತ್ಸವ-2024 ಕಾರ್ಯಕ್ರಮ ಮುಕ್ರಂಪಾಡಿಯ ನಂದಗೋಕುಲ ಬಡಾವಣೆಯ ನಂದಗೊಕುಲ ವೇದಿಕೆಯಲ್ಲಿ ಫೆ.18ರಂದು ನಡೆಯಲಿದೆ. ಬೆಳಿಗ್ಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲ ಕೃಷ್ಣ ಭಟ್ಟ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಕ್ರಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ ಎಂ. ನೂತನ ಗ್ರಂಥಾಲಯವನ್ನು ಉದ್ಘಾಟಿಸಲಿದ್ದಾರೆ. ಆರ್ಯಾಪು ಶ್ರೀಗುರು ನರಸಿಂಹ ಕಲಾ ಮಂಡಳಿಯ ಯಕ್ಷಗಾನ ಪ್ರಸಾದನ ಕಲಾವಿದ ಕೆ ವೆಂಕಟೇಶ ಮಯ್ಯ ಹಾಗೂ ಪುತ್ತೂರಿನ ಹಿರಿಯ ಸಾಹಿತಿ ಪ್ರೊ. ವಿ. ಬಿ ಅರ್ತಿಕಜೆ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಮಾತ್ರವಲ್ಲದೆ, ಕನ್ಯಾನದ ಯಕ್ಷಗಾನ ಕಲಾಪೋಷಕ ಕೆ.ಪಿ ರಾಜಗೋಪಾಲ್‌ರವರು ಹಿರಿಯ ಯಕ್ಷಗಾನ ಕಲಾವಿದ ಹಾಗೂ ಪ್ರಸಂಗಕರ್ತ ಬೆಳ್ಳಾರೆ ಮಂಜುನಾಥ ಭಟ್ಟ ಹಾಗೂ ಹಿರಿಯ ಸಾಹಿತಿ ಗಣರಾಜ ಕುಂಬ್ಳೆಯವರ ಕೃತಿ ಬಿಡುಗಡೆಗೊಳಿಸಲಿದ್ದಾರೆ. ರಾಮಕುಂಜದ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಚೇತನ್ ಮೊಗ್ರಾಲ್ ಪ್ರಮುಖ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 12 ರಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಬು ಕೆ. ಮತ್ತು ನಂದಗೋಕುಲದ ವಿದ್ಯಾರ್ಥಿಗಳಿಂದ ಕೀಬೋರ್ಡ್ ವಾದನ, ಅಪರಾಹ್ನ 2 ರಿಂದ ನಂದಗೋಕುಲದ ಕಿರಿಯ ಕಲಾವಿದರಿಂದ ಯಕ್ಷಗಾನ ವೈಭವ, 3 ಗಂಟೆಯಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ವಾಲಿ ಸುಗ್ರೀವರ ಕಾಳಗ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಭಾಗವಹಿಸುವ ಪ್ರತೀ ಗ್ರಾಹಕರಿಗೂ ದ್ವಾರಕೋತ್ಸವದ ಪ್ರಯುಕ್ತ ರೂ.10,000 ಮೊತ್ತದ ವಿಶೇಷ ಗಿಫ್ಟ್ ಓಚರ್ ವಿತರಿಸಲಾಗುವುದು. ಸ್ಥಳದಲ್ಲೇ ಸೈಟ್ ಬುಕ್ ಮಾಡುವವರಿಗೆ ವಿಶೇಷ ಉಡುಗೊರೆಯನ್ನು ನೀಡಲಾಗುವುದು ಎಂದು ದ್ವಾರಕಾ ಪ್ರತಿಷ್ಠಾನದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.