ಕೃಷಿ ಚಟುವಟಿಕೆಗಳಿಗೆ ಕೊಳವೆ ಬಾವಿ ಕೊರೆಯಲು ಅನುಮತಿಗೆ ಗ್ರಾಪಂ ಕೊಳವೆ ಬಾವಿಯಿಂದ 500 ಮೀಟರ್ ಅಂತರ ಕಡ್ಡಾಯ-ನಿರ್ಣಯ
ಪುತ್ತೂರು: ಗ್ರಾಮ ಪಂಚಾಯತ್‌ನ ಕುಡಿಯುವ ನೀರಿನ ಕೊಳವೆ ಬಾವಿಯಿಂದ 500 ಮೀಟರ್ ಅಂತರ ಬಿಟ್ಟು ಉಳಿದಂತೆ ಕೃಷಿ ಚಟುವಟಿಕೆಗಳಿಗೆ ಕೊಳೆವೆ ಬಾವಿ ತೆಗೆಯಲು ಅನುಮತಿ ನೀಡುವ ಬಗ್ಗೆ ಒಳಮೊಗ್ರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಭೆಯು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ರವರ ಅಧ್ಯಕ್ಷತೆಯಲ್ಲಿ ಫೆ.13 ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಪಡೆಯಲು ಗ್ರಾಪಂನಿಂದ ಅನುಮತಿ ನೀಡುವ ಬಗ್ಗೆ ಬಂದ ಸಾರ್ವಜನಿಕ ಅರ್ಜಿಯೊಂದರ ಬಗ್ಗೆ ಸದಸ್ಯ ಮಹೇಶ್ ಕೇರಿ ವಿಷಯ ಪ್ರಸ್ತಾಪಿಸಿ ಕೊಳವೆ ಬಾವಿ ಕೊರೆಯಲು ಅನುಮತಿ ಇದೆಯಾ ಎಂದು ಪಿಡಿಒ ರವರಲ್ಲಿ ಪ್ರಶ್ನಿಸಿದರು. ಈ ಬಗ್ಗೆ ಪಿಡಿಒ ನಮಿತಾ ಉತ್ತರಿಸಿ ಗ್ರಾ.ಪಂ ಕುಡಿಯುವ ನೀರಿನ ಕೊಳವೆ ಬಾವಿಗಿಂತ 500 ಮೀಟರ್ ಅಂತರವಿರಬೇಕು ಅಂತಹ ಪ್ರದೇಶದಲ್ಲಿ ಕೊಳವೆ ಬಾವಿ ಕೊರೆಯಲು ಅನುಮತಿ ನೀಡಲು ಅವಕಾಶವಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮಹೇಶ್ ರೈಯವರು, ಈ ಬಗ್ಗೆ ಜನರಿಗೆ ಪ್ರಕಟಣೆಯಲ್ಲಿ ತಿಳಿಸುವುದು ಉತ್ತಮ ಯಾಕೆಂದರೆ ಗ್ರಾ.ಪಂನಿಂದ ಕೊಳವೆ ಬಾವಿಗೆ ಕೊರೆಯಲು ಅನುಮತಿ ದೊರೆಯುವುದಿಲ್ಲ ಎಂಬ ವಿಚಾರದಲ್ಲಿ ಕದ್ದು ಮುಚ್ಚಿ ರಾತ್ರೋ ರಾತ್ರಿ ಕೊಳವೆ ಬಾವಿ ತೆಗೆಯುತ್ತಾರೆ. ಆ ಬಳಿಕ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಪಡೆಯಲು ಮಸ್ಕಾಂ ಕಛೇರಿಗೆ ಹೋಗುತ್ತಾರೆ. ಅಲ್ಲಿ ಮೆಸ್ಕಾಂ ಅಧಿಕಾರಿಗಳು ಗ್ರಾ.ಪಂ ನಿಂದ ಅನುಮತಿ ಪಡೆದುಕೊಂಡು ಬರಬೇಕು ಅನ್ನುತ್ತಾರೆ. ಈ ಕಡೆಯಲ್ಲಿ ಕೊಳವೆ ಬಾವಿ ಕೊರೆಯಲು ಫಲಾನುಭವಿ ಗ್ರಾಪಂನಿಂದ ಅನುಮತಿಯನ್ನುಪಡೆದುಕೊಂಡಿರುವುದಿಲ್ಲ ಇದರಿಂದ ಬಡ ಸಣ್ಣ ಕೃಷಿಕರಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗುತ್ತದೆ . ಆದ್ದರಿಂದ ಈ ಬಗ್ಗೆ ಜನರಿಗೆ ಪ್ರಕಟಣೆ ಮೂಲಕ ತಿಳಿಸಿದಲ್ಲಿ ಕೊಳವೆ ಬಾವಿ ಕೊರೆಯಲು ಅನುಮತಿಗೆ ನೇರವಾಗಿ ಗ್ರಾ.ಪಂ ಬರುತ್ತಾರೆ ಎಂದು ಸದಸ್ಯ ಮಹೇಶ್ ಕೇರಿ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಬಗ್ಗೆ ಚರ್ಚಿಸಿ ಸರ್ವ ಸದಸ್ಯರ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಗ್ರಾ.ಪಂ ವ್ಯಾಪ್ತಿಯಲ್ಲಿ ಅಳವಡಿಸಿರುವ ಬ್ಯಾನರ್‌ಗಳಲ್ಲಿ ಅವಧಿ ಮೀರಿದ ಹಾಗೂ ಅನುಮತಿ ಇಲ್ಲದೆ ಅಳವಡಿಸಿದ ಬ್ಯಾನರ್‌ಗಳನ್ನು ತೆರವುಗೊಳಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಗ್ರಾ.ಪಂ ವ್ಯಾಪ್ತಿಯಲ್ಲಿ ಅಳವಡಿಸಿರುವ ಬ್ಯಾನರ್‌ಗಳಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ದೂರು ಅರ್ಜಿ ಬಗ್ಗೆ ಪರಿಶೀಲಿಸಿ, ಮುಂದೆ ಬ್ಯಾನರ್ ಅಳವಡಿಸಲು ಅನುಮತಿ ಜತೆಗೆ ಕೆಲವೊಂದು ಷರತ್ತು ವಿಧಿಸುವ ಬಗ್ಗೆ ನಿರ್ಣಯಿಸಲಾಯಿತು.
ಕುಂಬ್ರ ಪೇಟೆಯಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ಸ್ವಚ್ಚತಾಗಾರ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ ಎಂಬ ಕಾರಣದಿಂದ ಶೌಚಾಲಯ ನಿರ್ವಹಣೆ ವ್ಯವಸ್ಥೆಯನ್ನು ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ವಹಿಸಿಕೊಡಲು ಸರ್ವಸದಸ್ಯರು ಒಮ್ಮತದಿಂದ ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾ.ಪಂ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಹಾಕುವ ಮೂಲಕ ಪರಿಸರವನ್ನು ಹಾಳು ಮಾಡುತ್ತಿದ್ದಾರೆ ಎಂಬ ವಿಷಯವನ್ನು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಸಭೆಯ ಗಮನಕ್ಕೆ ತಂದರು. ತ್ಯಾಜ್ಯ ಹಾಕುವ ಸ್ಥಳದಲ್ಲಿ ಸೂಚನಾ ಫಲಕವನ್ನು ಹಾಕುವುದು, ಫಲಕ ಹಾಕಿದ ಮೇಲೂ ತ್ಯಾಜ್ಯ ಹಾಕಿದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಶೀನಪ್ಪ ನಾಯ್ಕ ಬೊಳ್ಳಾಡಿ, ಸಿರಾಜುದ್ದೀನ್, ಚಿತ್ರಾ ಬಿ.ಸಿ, ಸುಂದರಿ, ಶಾರದಾ, ಲತೀಫ್ ಟೈಲರ್, ಮಹೇಶ್ ರೈ ಕೇರಿ, , ನಳಿನಾಕ್ಷಿ, ರೇಖಾ, ವನಿತಾ ಚರ್ಚೆಯಲ್ಲಿ ಪಾಲ್ಗೊಂಡರು. ಕಾರ್ಯದರ್ಶಿ ಜಯಂತಿ ಸ್ವಾಗತಿಸಿ ವಂದಿಸಿದರು. ಪಿಡಿಒ ನಮಿತಾ ಎ.ಕೆ ಸಾರ್ವಜನಿಕ ಮತ್ತು ಸರ್ಕಾರಿ ಸುತ್ತೋಲೆಗಳನ್ನು ಓದಿದರು. ಸಿಬ್ಬಂದಿಗಳಾದ ಗುಲಾಬಿ, ಜಾನಕಿ, ಕೇಶವ, ಮೋಹನ್ ಸಹಕರಿಸಿದರು.