




ಪುತ್ತೂರು: ವಿವೇಕಾನಂದ ಶಿಶುಮಂದಿರದಲ್ಲಿ ಫೆ.24ರಂದು ಮಾತೃವಂದನಾ, ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಹಾಗೂ ಸಹಭೋಜನ ಕಾರ್ಯಕ್ರಮ ನಡೆಯಿತು.




ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳಿಂದ ದೀಪ ಪ್ರಜ್ವಲನೆ ನಡೆಯಿತು. ಶಿಶುಮಂದಿರದ ಮಕ್ಕಳು ದೀಪಜ್ಯೋತಿ ಹಾಡಿದರು. ಜೊತೆಗೆ ಮಕ್ಕಳಿಂದ ಸರಸ್ವತಿ ವಂದನೆಯು ನಡೆಯಿತು. ಮಾತೃವಂದನಾ ಕಾರ್ಯಕ್ರಮದಲ್ಲಿ ಮಕ್ಕಳು ಮಾತೆಯರ ಪಾದ ತೊಳೆದು ಕುಂಕುಮ, ಅರಿಶಿನ ಹಚ್ಚಿ ಹೂವಿಟ್ಟು ನಮಸ್ಕರಿಸಿ ಪಾದ ಪೂಜೆ ಮಾಡಿದರು. ಬಳಿಕ ಮಾತೆಯರು ಮಕ್ಕಳಿಗೆ ಆರತಿ ಬೆಳಗಿ ಕುಂಕುಮವಿಟ್ಟು ಹರಸಿ, ಸಿಹಿ ತಿನ್ನಿಸುವುದರ ಮೂಲಕ ಮಕ್ಕಳ ಹುಟ್ಟುಹಬ್ಬ ಆಚರಿಸಲಾಯಿತು. ಅತಿಥಿಯಾಗಿದ್ದ ಡಾ.ರವೀಶ್ ಪಡುಮಲೆಯವರು ಮಕ್ಕಳನ್ನು ಹೇಗೆ ಬೆಳೆಸಬೇಕು, ಇದರಲ್ಲಿ ಮಾತೆಯರ ಕರ್ತವ್ಯ ಹಾಗೂ ಮಕ್ಕಳಿಗೆ ಕೊಡಬೇಕಾದ ಶಿಕ್ಷಣದ ಬಗ್ಗೆ ತಿಳಿಸಿದರು. ಮನೆಯೇ ಮೊದಲ ಪಾಠಶಾಲೆ. ಹಾಗಾಗಿ ಮಾತೆಯರು ಸರಿಯಾದ ಶಿಕ್ಷಣದ ವ್ಯವಸ್ಥೆಯನ್ನು ಕೊಡಬೇಕು. ತನ್ನ ಮಗ ಅಥವಾ ಮಗಳ ಜೀವನದ ವ್ಯವಸ್ಥೆ ಏನು ಎಂಬುದನ್ನು ಹೇಳಿ ಕೊಡುವುದು ಅಮ್ಮನ ಕರ್ತವ್ಯವಾಗಿದೆ ಎಂದು ಡಾ.ರವೀಶ್ ಪಡುಮಲೆ ಹೇಳಿದರು.






ಅಖಂಡ ಭಾರತಕ್ಕೆ ಅತಿಥಿಗಳು ದೀಪ ಬೆಳಗಿಸಿದರು. ಮಾತೆಯರು ಹಚ್ಚುವೆವು ದೀಪ ಹಚ್ಚುವೆವು ದೀಪ ಹಾಡನ್ನು ಹಾಡಿದರು. ನಂತರ ಎಲ್ಲಾ ಮಾತೆಯಂದಿರು ಮಕ್ಕಳು ಅಖಂಡ ಭಾರತಕ್ಕೆ ಹಣತೆ ಹಚ್ಚಿದರು. ಶ್ರೀನಿವಾಸ ಪೈಯವರು ಅಧ್ಯಕ್ಷತೆ ವಹಿಸಿದ್ದರು. ಶಿಶುಮಂದಿರದ ಅಧ್ಯಕ್ಷ ರಾಜ್‌ಗೋಪಾಲ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಟಾಣಿ ಗೌರವ್ ಸ್ವಾಗತಿಸಿ, ಜಶ್ಮಿತ್ ವಂದಿಸಿದರು. ದ್ವಿತಿ ಶೆಣೈ ಪಂಚಾಂಗ ಪಠಣ ಮಾಡಿದರು. ಶಾಂತಿಮಂತ್ರದ ಬಳಿಕ ಸಾಮೂಹಿಕ ಸಹಭೋಜನ ನಡೆಯಿತು. ಸುಮಾರು 500ಕ್ಕೂ ಮಿಕ್ಕಿ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.








