ಉಪ್ಪಿನಂಗಡಿ: ಒಣಗಿದ ಮರದ ಬುಡಕ್ಕೆ ಯಾರೋ ವಿಘ್ನ ಸಂತೋಷಿಗಳು ಅಗ್ನಿಸ್ಪರ್ಶ ಮಾಡಿದ ಕಾರಣ ಮರವು ಬುಡದಿಂದಲೇ ಮುರಿಯಲ್ಪಟ್ಟು ರಸ್ತೆಗೆ ಬಿದ್ದು ದ್ವಿಚಕ್ರ ವಾಹನ ಸವಾರರು ಕೂದಲೆಳೆ ಅಂತರದಿಂದ ಅಪಾಯದಿಂದ ಪಾರಾದ ಘಟನೆ ಶುಕ್ರವಾರ ಸಾಯಂಕಾಲ ಸಂಭವಿಸಿದೆ.
ಇಲ್ಲಿನ ಕುಮಾರಧಾರಾ ನದಿಯ ಹಳೇ ಸೇತುವೆಯ ನೆಕ್ಕಿಲಾಡಿ ಪಾರ್ಶ್ವದಲ್ಲಿ ಒಂದು ಮರವು ಒಣಗಿ ಹೋಗಿದ್ದು, ಅದನ್ನು ತೆರವುಗೊಳಿಸುವಲ್ಲಿ ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸಿದ್ದರು. ಈ ಮಧ್ಯೆ ಶುಕ್ರವಾರದಂದು ಯಾರೋ ಕಿಡಿಗೇಡಿಗಳು ಮರದ ಬುಡಕ್ಕೆ ಬೆಂಕಿ ಹಚ್ಚಿದ್ದು, ಮರವು ಸಂಪೂರ್ಣ ಒಣಗಿದ್ದರಿಂದ ಮರಕ್ಕೆ ಬೆಂಕಿ ಆವರಿಸಲ್ಪಟ್ಟಂತೆಯೇ ಬುಡದಿಂದಲೇ ಮರವು ರಸ್ತೆಗೆ ಮುರಿದು ಬಿತ್ತು. ಈ ವೇಳೆ ಹಳೇ ಸೇತುವೆಯಲ್ಲಿ ಉಪ್ಪಿನಂಗಡಿಯಿಂದ ನೆಕ್ಕಿಲಾಡಿಯತ್ತ ದ್ವಿಚಕ್ರ ವಾಹನದಲ್ಲಿ ಪ್ರಯಣಿಸುತ್ತಿದ್ದ ಇಬ್ಬರು ಕೂದಲೆಳೆ ಅಂತರದಲ್ಲಿ ಮರಕ್ಕೆ ಸಿಲುಕದೆ ಅಪಾಯದಿಂದ ಪಾರಾದರು. ಈ ಆಘಾತದ ನಡುವೆಯೂ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರದ ರೆಂಬೆ ಕೊಂಬೆಗಳನ್ನು ರಸ್ತೆಯ ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಮೂಲಕ ಸಮಸ್ಯೆಯನ್ನು ನಿವಾರಿಸುವ ನಾಗರಿಕ ಪ್ರಜ್ಞೆಯನ್ನು ಕೂಡಾ ಈ ದ್ವಿಚಕ್ರ ವಾಹನ ಸವಾರರು ಪ್ರದರ್ಶಿಸಿ ಗಮನ ಸೆಳೆದರು.