ಭಕ್ತಿ, ಭಾವದ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಕಳಿಯಾಟ ಮಹೋತ್ಸವ

0

ಪುತ್ತೂರು:ವಾಣಿಯನ್ ಗಾಣಿಗ ಸಮುದಾಯದವರ ಕುಲದೇವತೆಯಾಗಿರುವ ಕಾಸರಗೋಡು ಜಿಲ್ಲೆಯ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ 7 ದಿನಗಳ ಕಾಲ ಸಂಭ್ರಮಿಲಿರುವ ‘ಕಳಿಯಾಟ ಮಹೋತ್ಸವ’ವು ಮಾ.1ರಿಂದ ಪ್ರಾರಂಭಗೊಂಡಿದೆ. ಪ್ರತಿದಿನ ಕರ್ನಾಟಕ ಹಾಗೂ ಕೇರಳದ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರರಾರು ಮಂದಿ ಭಕ್ತಾದಿಗಳ ಭಾಗವಹಿಸುವಿಕೆಯೊಂದಿಗೆ 20 ವರ್ಷಗಳ ಬಳಿಕ ನಡೆಯುವ ಕಳಿಯಾಟ ಮಹೋತ್ಸವವು ಸಂಭ್ರಮಗಳಿಗೆ ಸಾಕ್ಷಿಯಾಗುತ್ತಿದೆ.


ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದಲ್ಲಿರುವ ಈ ಕ್ಷೇತ್ರದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಕಳಿಯಾಟ ಮಹೋತ್ಸವ ನೆರವೇರುತ್ತಿದೆ. ಈ ಹಿಂದೆ 2004ರಲ್ಲಿ ಕಳಿಯಾಟ ಮಹೋತ್ಸವ ನೆರವೇರಿತ್ತು. ಕ್ಷೇತ್ರವು ಜೀಣೋದ್ಧಾರಗೊಂಡು 2020ರ ಮಾರ್ಚ್‌ನಲ್ಲಿ ಬ್ರಹ್ಮಕಲಶೋತ್ಸವ ನೆರವೇರಿತ್ತು. ಇದೇ ಸಮಯದಲ್ಲಿ ಕಳಿಯಾಟ ಮಹೋತ್ಸವ ನಡೆಸಲು ಯೋಚಿಸಿದ್ದರೂ ಕೋವಿಡ್‌ನಿಂದಾಗಿ ಸ್ಥಗಿತಗೊಂಡಿತ್ತು. ಇದೀಗ 20 ವರ್ಷಗಳ ನಂತರ ನಡೆಯುವ ಕಳಿಯಾಟ ಮಹೋತ್ಸವನ್ನು ಕಣ್ತುಂಬಿಕೊಳ್ಳಲು ಪ್ರತಿನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ.


ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶಾಲವಾದ ಪಾರ್ಕಿಂಗ್ ಸೌಲಭ್ಯ, ಕ್ಷೇತ್ರದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ವೀಕ್ಷಣೆಗೆ ಅನುಕೂಲವಾಗುವಂತೆ ವಿಶಾಲವಾದ ಗ್ಯಾಲರಿಗಳು, ಕುಳಿತು ಊಟ ಮಾಡುವ ವಿಶಾಲವಾದ ಭೋಜನ ಶಾಲೆ, ಶುಚಿ ರುಚಿಯಾದ ಊಟ, ಉಪಹಾರಗಳು, ತಂಪು ಪಾನೀಯಗಳು, ಅತಿಥಿ ಸತ್ಕಾರಗಳು ಅತ್ಯಂತ ಶಿಸ್ತು ಹಾಗೂ ವ್ಯವಸ್ಥತಿವಾಗಿ ನೆರವೇರುತ್ತಿದೆ. ಕಳಿಯಾಟ ಮಹೋತ್ಸವಕ್ಕೆ ಕುಂಬಳೆ ಪೇಟೆಯಿಂದಲೇ ಬಂಟಿಂಗ್ಸ್, ವಿದ್ಯುತ್ ದೀಪಗಳಿಂದ ಶೃಂಗಾರಗೊಂಡಿದ್ದು ಭಕ್ತರನ್ನು ಕ್ಷೇತ್ರಕ್ಕೆ ಕೈಬೀಸಿ ಕರೆಯುತ್ತಿದೆ. ವಿವಿಧ ವಿಭಾಗಗಳಲ್ಲಿ ಸ್ವಯಂಸೇವಕರ ತಂಡವು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದೆ. ಪುತ್ತೂರಿನ ವಾಣಿಯನ್/ಗಾಣಿಗ ಸಮುದಾಯ ಹಲವು ಮಂದಿ ಪ್ರಮುಖರು ಈ ಕಾರ್ಯಕ್ರಮದಲ್ಲಿ ವಿವಿಧ ಜವಾಬ್ದಾರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಷೇತ್ರಕ್ಕೆ ಪ್ರತಿದಿನ ವಿವಿಧ ಭಾಗಗಳ ಭಕ್ತರಿಂದ ಹಸಿರು ಹೊರೆಕಾಣಿಕೆಗಳು ಸಮರ್ಪಣೆಯಾಗುತ್ತಿದ್ದು ಪುತ್ತೂರು, ಕಡಬ ತಾಲೂಕಿನ ಸಮಾಜ ಬಾಂಧವರು ಹಾಗೂ ಭಕ್ತಾದಿಗಳಿಂದ ಮಾ.2ರಂದು ಹಸಿರು ಹೊರೆಕಾಣಿಕೆ ಸಮರ್ಪಣೆಗೊಂಡಿದೆ. ಕ್ಷೇತ್ರದ ಪ್ರವೇಶ ಧ್ವಾರದ ಬಳಿಯಲ್ಲಿ ವಾಣಿಯನ್ ಗಾಣಿಗ ಸಮುದಾಯದ ಕುಲ ಕಸುಬು ಗಾನದಿಂದ ಎಣ್ಣೆ ತೆಗೆಯುವ ಸ್ಥಬ್ದ ಚಿತ್ರ ಸೇರಿದಂತೆ ಹಲವು ಸ್ಥಬ್ದ ಚಿತ್ರಗಳು ವಿಶೇಷ ಆಕರ್ಷಣೆಯಾಗಿದೆ.


ಏಳು ದಿನಗಳ ಕಾಲ ನಡೆಯುವ ಕಳಿಯಾಟ ಮಹೋತ್ಸವದಲ್ಲಿ ದೇಗುಲದ ಮುಂಭಾಗದಲ್ಲಿ ತೆಯ್ಯಂ ಅನ್ನು ನಿರಂತರವಾಗಿ ಏಳು ದಿನಗಳ ಕಾಲ ದೇವಾಲಯದ ಪ್ರತಿಯೊಂದು ದೇವತೆಗಳಿಗೂ ನಡೆಸಲಾಗುತ್ತದೆ. ಏಳು ದಿವಸವು ಪ್ರಧಾನ ದೈವಗಳೊಂದಿಗೆ ಭಗವತಿ ದೇವಿಯು ಆರಾಧಿಸಲ್ಪಡುತ್ತಾರೆ. ಏಳನೇ ದಿನದಲ್ಲಿ ಭಗವತಿ ದೇವಿಯ ಮಹಿಮೆ ಎಂಬಂತೆ ಶ್ರೀ ಕ್ಷೇತ್ರದ ಆಳವಾದ ಪ್ರವಿತ್ರ ಬಾವಿಯ ( ಮಣಿ ಕಿನಾರೆ) ನೀರು ಉಕ್ಕೇರಿ ಬಂದು ಭಗವತಿ ಅಮ್ಮನವರ ಅಣಿಗೆ ಸ್ಪರ್ಶಿಸಲಿದೆ. ಬಳಿಕ ಪ್ರಸಾದ ವಿತರಣೆಯೊಂದಿಗೆ ವೈಭವದ ಕಳಿಯಾಟ ಮಹೋತ್ಸವವು ಸಂಪನ್ನಗೊಳ್ಳಲಿದೆ.


ಕಳಿಯಾಟ ಮಹೋತ್ಸವದ ಪ್ರಾರಂಭದ ದಿನವಾದ ಮಾ.1ರಂದು ಶ್ರೀ ಅನಂತಪುರ ಅನಂತ ಪದ್ಮನಾಭ ಸ್ವಾಮಿ ದೇವರ ಸನ್ನಿಧಿಯಿಂದ ಭಂಡಾರ ಅಗಮನ, ಹೊರೆಕಾಣಿಕೆ ಮೆರವಣಿಗೆ, ಶ್ರೀ ಸನ್ನಿಧಿಯಲ್ಲಿ ಕೊಡಿ ಎಲೆ ಇಡುವುದು, ಅಚ್ಚನ್ಮಾರರ ದರ್ಶನ, ಉಗ್ರಾಣ ತುಂಬಿಸುವುದು, ಅಕ್ಷಯ ಪಾತ್ರೆ ಇಡುವುದು, ಅಪರಾಹ್ನ ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ಪುಲ್ಲೂರ್‌ಕಣ್ಣನ್ ದೈವದ ವೆಳ್ಳಾಟ, ತಂಬುರಾಟಿಯ ಸಂಧ್ಯಾ ಸ್ತೋತ್ರ, ರಾತ್ರಿ ಕಣ್ಣಂಗಾಟ್ ಭಗವತಿ, ಪುಲ್ಲೂರ್‌ಕಾಳಿ ದೈವಗಳ ಸ್ತೋತ್ರ, ಮಾ.2ರಂದು ಪೂರ್ವಾಹ್ನ ಪುಲ್ಲೂರ್‌ಕಣ್ಣನ್ ದೈವದ ನರ್ತನ, ಕಣ್ಣಂಗಾಟ್ ಭಗವತಿ-ಪುಲ್ಲೂರ್‌ಕಾಳಿ ದೈವಗಳ ನರ್ತನ, ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ಸಂಜೆ ಕುತ್ಯಾಳ ತರವಾಡಿನಿಂದ ಬೀರ್ಣಾಳ್ವ ದೈವದ ಭಂಡಾರ ಆಗಮನ, ಪುಲ್ಲೂರ್‌ಕಣ್ಣನ್ ದೈವದ ವೆಳ್ಳಾಟ, ತಂಬುರಾಟಿಯ ಸಂಧ್ಯಾ ಸ್ತೋತ್ರ, ರಾತ್ರಿ ವಿಷ್ಣುಮೂರ್ತಿ ದೈವದ ತೊಡಂಙಲ್, ಕಣ್ಣಂಗಾಟ್ ಭಗವತಿ ಮತ್ತು ಪುಲ್ಲೂರ್‌ಕಾಳಿ ದೈವಗಳ ಸ್ತೋತ್ರ, ವಿಷ್ಣುಮೂರ್ತಿ ದೈವದ ಕುಳಿಚ್ಚಾಟ ನಡೆಯಿತು.


ಮಾ.3ರಂದು ಪೂರ್ವಾಹ್ನ ಪುಲ್ಲೂರ್‌ಕಣ್ಣನ್ ದೈವದ ನರ್ತನ, ಅನಂತಪುರ ದೇವಸ್ಥಾನ, ಯಜಮಾನರ ಮನೆಗೂ ಭೇಟಿ, ಕಣ್ಣಂಗಾಟ್ ಭಗವತಿ ದೈವ, ಪುಲ್ಲೂರ್ ಕಾಳಿ ದೈವದ ನರ್ತನ, ಅಪರಾಹ್ನ ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ಅಪರಾಹ್ನ ಬೀರ್ಣಾಳ್ವ ದೈವದ ನರ್ತನ, ವಿಷ್ಣುಮೂರ್ತಿ ದೈವದ ನರ್ತನ, ಮಾಯಿಪ್ಪಾಡಿ ಅರಮನೆಗೆ ಭೇಟಿ, ಪುಲ್ಲೂರ್‌ಕಣ್ಣನ್ ದೈವದ ವೆಳ್ಳಾಟ, ವೇಟಕ್ಕೊರುಮಗನ್ ದೈವದ ವೆಳ್ಳಾಟ, ತಂಬುರಾಟಿಯ ಸಂಧ್ಯಾ ಸ್ತೋತ್ರ, ರಾತ್ರಿ ವಿಷ್ಣುಮೂರ್ತಿ ದೈವದ ತೊಡಂಙಲ್, ಕಣ್ಣಂಗಾಟ್ ಭಗವತಿ ಮತ್ತು ಪುಲ್ಲೂರ್‌ಕಾಳಿ ದೈವಗಳ ಸ್ತೋತ್ರ, ವಿಷ್ಣುಮೂರ್ತಿ ದೈವದ ಕುಳಿಚ್ಚಾಟ,ಮಾ.4ರಂದು ಪೂರ್ವಾಹ್ನ ಪುಲ್ಲೂರ್‌ಕಣ್ಣನ್ ದೈವದ ನರ್ತನವಾಗಿ ಮಾಯಿಪ್ಪಾಡಿ ಅರಮನೆಗೆ ಭೇಟಿ, ಕಣ್ಣಂಗಾಟ್ ಭಗವತಿ ದೈವದ ನರ್ತನ, ಪುಲ್ಲೂರ್‌ಕಾಳಿ ದೈವದ ನರ್ತನ, ಅಪರಾಹ್ನ ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ವೇಟಕ್ಕೊರುಮಗನ್ ದೈವದ ನರ್ತನ, ಅಪರಾಹ್ನ ವಿಷ್ಣುಮೂರ್ತಿ ದೈವದ ನರ್ತನ, ಅನಂತಪುರ ದೇವಸ್ಥಾನ, ಯಜಮಾನರ ಮನೆಗೆ ಭೇಟಿ, ಪುಲ್ಲೂರ್‌ಕಣ್ಣನ್ ದೈವದ ವೆಳ್ಳಾಟ, ತಂಬುರಾಟಿಯ ಸಂಧ್ಯಾ ಸ್ತೋತ್ರ, ರಾತ್ರಿ ವಿಷ್ಣುಮೂರ್ತಿ ದೈವದ ತೊಡಂಙಲ್, ಮೂವಾಳಂಕುಯಿ ಚಾಮುಂಡಿ ದೈವದ ತೊಡಂಙಲ್, ಕಣ್ಣಂಗಾಟ್ ಭಗವತಿ, ಪುಲ್ಲೂರ್‌ಕಾಳಿ ದೈವಗಳ ಸ್ತೋತ, ವಿಷ್ಣುಮೂರ್ತಿ ದೈವದ ಕುಳಿಚ್ಚಾಟ ನಡೆಯಿತು.


ಮಾ.7 ಭಗವತಿ ಅಮ್ಮನವರ ಸಿರಿಮುಡಿ ದರ್ಶನ:
ಮಹೋತ್ಸವದಲ್ಲಿ ಮಾ.5ರಂದು ಪೂರ್ವಾಹ್ನ ಪುಲ್ಲೂರ್‌ಕಣ್ಣನ್, ಕಣ್ಣಂಗಾಟ್ ಭಗವತಿ ಪುಲ್ಲೂರ್‌ಕಾಳಿ ದೈವಗಳ ನರ್ತನ, ಮಧ್ಯಾಹ್ನ ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ಅಪರಾಹ್ನ ವಿಷ್ಣುಮೂರ್ತಿ ದೈವದ ನರ್ತನ, ಪುಲ್ಲೂರ್ ಕಣ್ಣನ್ ದೈವದ ವೆಳ್ಳಾಟ, ಮೂವಾಳಂಕುಯಿ ಚಾಮುಂಡಿ ದೈವದ ನರ್ತನ, ತಂಬುರಾಟಿಯ ಸಂಧ್ಯಾ ಸ್ತೋತ್ರ, ರಾತ್ರಿ ಕಣ್ಣಂಗಾಟ್ ಭಗವತಿ ಮತ್ತು ಪುಲ್ಲೂರ್‌ಕಾಳಿ ದೈವಗಳ ಸ್ತೋತ್ರ, ಮಾ.6ರಂದು ಪೂರ್ವಾಹ್ನ ಪುಲ್ಲೂರ್‌ಕಣ್ಣನ್, ಕಣ್ಣಂಗಾಟ್ ಭಗವತಿ, ಪಡಿಞರ್ ಚಾಮುಂಡಿ ದೈವದ ನರ್ತನ, ಮಧ್ಯಾಹ್ನ ಅಡಿಚ್ಚುತ್ತಳಿ ಸ್ತೋತ್ರ, ಅಪರಾಹ್ನ ತಚ್ಚಿಲೋನ್ ದೈವದ ವೆಳ್ಳಾಟ, ತಂಬುರಾಟಿಯ ಮಧ್ಯಾಹ್ನ ಸ್ತೋತ್ರ, ಅಪರಾಹ್ನ ಪುಲ್ಲೂರ್‌ಕಾಳಿ, ನರಂಬಿಲ್ ಭಗವತಿ ದೈವದ ಸ್ತೋತ್ರ, ಸಂಜೆ ತಚ್ಚಿಲೋನ್ ಮತ್ತು ನಾಯನಾರ್ ದೈವಗಳ ನರ್ತನ, ತಂಬುರಾಟಿಯ ಸಂಧ್ಯಾ ಸ್ತೋತ್ರ, ರಾತ್ರಿ ಗಣಪತಿ ಸ್ತೋತ್ರ, ಕೊಡಿ ಎಲೆ ಸ್ತೋತ್ರ, ದರ್ಶನದೊಂದಿಗೆ ಮೇಲೇರಿಗೆ ಕೊಳ್ಳಿ ತರುವುದು, ಅಗ್ನಿಸ್ಪರ್ಶ ನಡೆಯಲಿದೆ. ಕಳಿಯಾಟ ಮಹೋತ್ಸವದ ಕೊನೆಯ ದಿನವಾದ ಮಾ.7ರಂದು ಪ್ರಾತಃಕಾಲ ನರಂಬಿಲ್ ಭಗವತಿ ದೈವದ ನರ್ತನ, ಪೂರ್ವಾಹ್ನ ಪುಲ್ಲೂರ್ ಕಾಳಿ ದೈವದ ನರ್ತನ, ತೀಪಾತಿ ದೈವದ ನರ್ತನ, ಅಗ್ನಿ ಸೇವೆ, ಶ್ರೀ ಮುಚ್ಚಿಲೋಟ್ ಭಗವತಿ ಅಮ್ಮನವರ ಸಿರಿಮುಡಿ ದರ್ಶನ, ಪುಲ್ಲೂರ್‌ಕಾಳಿ ದೈವದೊಂದಿಗೆ ಭೇಟಿ, ಪ್ರಸಾದ ವಿತರಣೆಯೊಂದಿಗೆ ಕಳಿಯಾಟ ಮಹೋತ್ಸವವು ಸಂಪನ್ನಗೊಳ್ಳಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here