ಭಾರತ್ ಕಟ್ಟಡ ಕಾರ್ಮಿಕರ ಸಂಘದ ಮಹಾಸಭೆ

0

ಸರಕಾರದ ಸೌಲಭ್ಯಗಳನ್ನು ಕಟ್ಟಡ ಕಾರ್ಮಿಕರು ಪಡೆದುಕೊಳ್ಳಿ-ಗಣಪತಿ ಹೆಗ್ಡೆ

ಪುತ್ತೂರು: ಭಾರತ್ ಕಟ್ಟಡ ಕಾರ್ಮಿಕರ ಸಂಘದ 6ನೇ ವರ್ಷದ ಮಹಾಸಭೆ ಪುತ್ತೂರು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಪುತ್ತೂರಿನ ಸಿವಿಲ್ ಇಂಜಿನಿಯರ್ ಸಂತೋಷ್ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕಟ್ಟಡ ಉದ್ಘಾಟನೆಯ ಅವಕಾಶ ಸಿಕ್ಕಿದ್ದು ಸಂತೋಷವಾಗಿದೆ. ನನಗೂ ಕಟ್ಟಡ ಕಾರ್ಮಿಕರ ಸಂಘಕ್ಕೂ ಅವಿನಾಭಾವ ಸಂಬಂಧ ಇದೆ. ಕಾರ್ಮಿಕರಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಹಾರೈಸಿದರು.


ಪುತ್ತೂರು ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕ ಗಣಪತಿ ಹೆಗ್ಡೆ ಮಾತನಾಡಿ ಕಟ್ಟಡ ಕಾರ್ಮಿಕರಿಗೆ ಇಲಾಖೆಯಿಂದ ಉಚಿತ ಆರೋಗ್ಯ ಶಿಬಿರ ನಡೆಸಲಾಗುತ್ತದೆ. ಕಾರ್ಮಿಕರೆಲ್ಲರೂ ಆರೋಗ್ಯ ತಪಾಸಣೆ ನಡೆಸಿಕೊಳ್ಳಿ ಎಂದರು. ಪುತ್ತೂರಿನಲ್ಲಿ ಇರುವ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರು ನಿಜವಾದ ಕಟ್ಟಡ ಕಾರ್ಮಿಕರೇ ಆಗಿದ್ದಾರೆ. ಇದು ಹೆಮ್ಮೆಯ ಸಂಗತಿ. ಉದ್ದೇಶಪೂರ್ವಕವಾಗಿ ಇತರರನ್ನು ನೋಂದಾವಣೆ ಮಾಡಬೇಡಿ. ನಿಜವಾದ ಕಟ್ಟಡ ಕಾರ್ಮಿಕರನ್ನೇ ನೋಂದಾವಣೆ ಮಾಡಿ. ಪ್ರತೀವರ್ಷ ಸದಸ್ಯರು ಕಾರ್ಡ್ ನವೀಕರಣ ಮಾಡಿಸಿಕೊಳ್ಳಿ. ಇಲ್ಲದಿದ್ದಲ್ಲಿ ಸವಲತ್ತುಗಳು ಸಿಗುವುದಿಲ್ಲ ಎಂದು ಹೇಳಿದ ಅವರು ಇಲಾಖೆಯಿಂದ ಸಿಗುವ ಸವಲತ್ತುಗಳನ್ನು ತಿಳಿಸಿದರು.

ನ್ಯಾಯವಾದಿ ಭಾಸ್ಕರ ಗೌಡ ಕೋಡಿಂಬಾಳ ಮಾತನಾಡಿ ಕಟ್ಟಡ ಕಾರ್ಮಿಕರು ದೇಶಕ್ಕೆ ಮುಖ್ಯ. ದೇಶದ ಅಭಿವೃದ್ಧಿಯಲ್ಲಿ ಕಟ್ಟಡ ಕಾರ್ಮಿಕರ ಪಾತ್ರ ಬಹಳ ಮುಖ್ಯ. ಪ್ರತಿಯೊಂದು ಕಟ್ಟಡದಲ್ಲಿಯೂ ಕಾರ್ಮಿಕರ ಬೆವರ ಹನಿ ಇದೆ. ದೇಶದ ಬೆಳವಣಿಗೆಯಲ್ಲಿ ನಿಮ್ಮ ಕೊಡುಗೆ ಅನನ್ಯ ಎಂದು ಹೇಳಿದರು. ಯಾವುದೇ ಕಟ್ಟಡ ನಿರ್ಮಾಣ ಮಾಡಿದರೂ ಕಾರ್ಮಿಕರನ್ನು ಗುರುತಿಸುವ ಕೆಲಸ ಮಾಡುವುದಿಲ್ಲ. ಕಾಮಗಾರಿಯಲ್ಲಿಯೂ ಕಾರ್ಮಿಕರ ಹೆಸರು ಬಳಸುವುದಿಲ್ಲ. ಸರಕಾರ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಬೇಕು ಎಂದರು. ಸಂಘಟನೆ ಇಲ್ಲದಿದ್ದರೆ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ. ಕಾರ್ಮಿಕರು ದುಶ್ಚಟಗಳಿಂದ ದೂರವಿರಬೇಕು. ಕಾರ್ಮಿಕರಿಗೆ ಇರುವ ಆರೋಗ್ಯ ಕಚೇರಿಯಲ್ಲಿ ದುಡಿಯುವವರಿಗೆ ಇರುವುದಿಲ್ಲ. ನಿಮ್ಮ ಹಕ್ಕುಗಳು ನಿಮಗೆ ಸಿಗಲಿ ಎಂದರು. ಸಂಘದ ಕಾನೂನು ಸಲಹೆಗಾರ, ನ್ಯಾಯವಾದಿ ದೀಪಕ್ ಬೊಳುವಾರು ಮಾತನಾಡಿ ಭಾರತ್ ಕಟ್ಟಡ ಕಾರ್ಮಿಕರ ಸಂಘವನ್ನು ಆರಂಭಿಸುವಲ್ಲಿ ದಿ.ಚಿದಾನಂದ ಕಾಮತ್ ಕಾಸರಗೋಡುರವರ ಶ್ರಮ ಇದೆ. ಅವರನ್ನು ನಾವು ಸ್ಮರಣೆ ಮಾಡುವುದು ನಮ್ಮ ಕರ್ತವ್ಯ. ನಿಮಗೆ ಗೊತ್ತಿರುವ ಕಾರ್ಮಿಕರನ್ನು ಸಂಘಕ್ಕೆ ನೋಂದಾವಣೆ ಮಾಡಿಕೊಳ್ಳಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವಾಧ್ಯಕ್ಷ ಲೋಕೇಶ್ ಹೆಗ್ಡೆ ಮಾತನಾಡಿ ಪ್ರತಿ ಕಟ್ಟಡ ನಿರ್ಮಾಣದಲ್ಲಿ ಕಾರ್ಮಿಕರ ಶ್ರಮ ಇದೆ. ಕಾರ್ಮಿಕರು ಸಣ್ಣ ವ್ಯಕ್ತಿಯಲ್ಲ. ಸರಕಾರದಿಂದ ಕಾರ್ಮಿಕರಿಗೆ ಹಲವು ಸವಲತ್ತುಗಳಿವೆ. ಮುಖ್ಯವಾಗಿ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯವೂ ಇದೆ. ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಿ ಎಂದರು. ಸಂಘದ ಕಾರ್ಯಾಧ್ಯಕ್ಷ ಪೌಲ್ ಡಿಸೋಜ ಮರೀಲ್, ಉಪಾಧ್ಯಕ್ಷ ಜಯರಾಮ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಶ್ರಫ್ ಪಡ್ಡಾಯೂರು ಪ್ರಾಸ್ತಾವಿಕ ಮಾತನಾಡಿದರು. ಸಂಘದ ಜತೆ ಕಾರ್ಯದರ್ಶಿ ಮಹಮ್ಮದ್ ಸಾಬಿರ್ ಬನ್ನೂರು ವರದಿ ಮಂಡಿಸಿದರು. ಖಜಾಂಜಿ ಬಶೀರ್ ಅಹಮ್ಮದ್ ಬನ್ನೂರು ಲೆಕ್ಕಪತ್ರ ಮಂಡಿಸಿದರು. ಸಂಘದ ಜತೆ ಕಾರ್ಯದರ್ಶಿ ವಸಂತ್ ಪ್ರಾರ್ಥಿಸಿ ಅಧ್ಯಕ್ಷ ರುಕ್ಮಯ್ಯ ಗೌಡ ಬನಾರಿ ಸ್ವಾಗತಿಸಿದರು. ಸದಸ್ಯ ಸುರೇಶ್ ಕೆ. ವಂದಿಸಿ ವಿನೋದ್ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

ದರ್ಬೆಯಿಂದ ಸಭಾಂಗಣದವರೆಗೆ ಮೆರವಣಿಗೆ,ಉಚಿತ ವೈದ್ಯಕೀಯ ಶಿಬಿರ
ಭಾರತ್ ಕಟ್ಟಡ ಕಾರ್ಮಿಕರ ಸಂಘದ ಸದಸ್ಯರಿಂದ ಬೆಳಿಗ್ಗೆ 9ಗಂಟೆಯಿಂದ ದರ್ಬೆ ವೃತ್ತದಿಂದ ಲಯನ್ಸ್ ಸೇವಾ ಮಂದಿರದವರೆಗೆ ಮೆರವಣಿಗೆ ನಡೆಯಿತು. ಬಳಿಕ ಸದಸ್ಯರಿಗೆ ಕಾರ್ಮಿಕ ಇಲಾಖೆಯ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ನಡೆಯಿತು.

LEAVE A REPLY

Please enter your comment!
Please enter your name here