ಬೇಸಿಗೆ ಕಾಲದಲ್ಲಿ ಭಕ್ತಾದಿಗಳಿಗೆ ಕುಡಿಯುವ ನೀರು,ನೆರಳಿನ ವ್ಯವಸ್ಥೆಯನ್ನು ಕಲ್ಪಿಸಿ- ಧಾರ್ಮಿಕ ದತ್ತಿ ಇಲಾಖಾ ಆಯುಕ್ತರ ಆದೇಶ

0

ಪುತ್ತೂರು: ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ಅಧಿಸೂಚಿತ ದೇವಾಲಯಗಳಲ್ಲಿ ಬೇಸಿಗೆ ಕಾಲದಲ್ಲಿ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ, ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಲ್ಲಲು ಸೂಕ್ತ ನೆರಳಿನ ವ್ಯವಸ್ಥೆ, ಭಕ್ತಾದಿಗಳು ನೆರಳಿನಲ್ಲಿ ಕುಳಿತು ವಿಶ್ರಮಿಸಿಕೊಳ್ಳಲು ಲಭ್ಯ ಸ್ಥಳಾವಕಾಶದಲ್ಲಿ ತಾತ್ಕಾಲಿಕ ಪೆಂಡಾಲ್ ವ್ಯವಸ್ಥೆ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವುದಕ್ಕೆ ಸೂಕ್ತವಾದ ಕ್ರಮ ಕೈಗೊಳ್ಳಲು ಧಾರ್ಮಿಕ ದತ್ತಿ ಇಲಾಖಾ ಆಯುಕ್ತರು ಆದೇಶಿಸಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಬಹುತೇಕ ಪ್ರಮುಖ ಅಧಿಸೂಚಿತ ದೇವಾಲಯಗಳಲ್ಲಿ ಬೇಸಿಗೆ ಕಾಲದ ಸಂದರ್ಭ ರೂಢಿ ಮತ್ತು ಸಂಪ್ರದಾಯಗಳು ಬಹಳ ಹಿಂದಿನಿಂದಲೂ ಜಾರಿಯಲ್ಲಿವೆ. ರಾಜ್ಯ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಂತಹ “ಶಕ್ತಿ ಯೋಜನೆ”ಯನ್ನು ಜಾರಿಗೆ ತಂದಿರುವುದರಿಂದ ಹಾಗೂ ಈ ಸಮಯಗಳಲ್ಲಿ ಶಾಲೆ ಮತ್ತು ಕಾಲೇಜುಗಳ ರಜೆಯಿಂದಾಗಿ ಬಹಳ ದೂರದ ಊರುಗಳಿಂದ, ಜಿಲ್ಲೆಗಳಿಂದ ಹಾಗೂ ಇತರೆ ರಾಜ್ಯಗಳಿಂದ ಮಾತ್ರವಲ್ಲದೇ ವಿದೇಶಗಳಿಂದಲೂ ಸಹ ಭಕ್ತಾದಿಗಳು ಮತ್ತು ಯಾತ್ರಾರ್ಥಿಗಳು ದೇವಾಲಯಗಳಿಗೆ ಭೇಟಿ ನೀಡುವುದು ಗಮನಾರ್ಹವಾಗಿದೆ. ಆದ್ದರಿಂದ, ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ದೇವಾಲಯಗಳಲ್ಲಿ ಬೇಸಿಗೆ ಕಾಲದಲ್ಲಿ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ದೇವರ ದರ್ಶನಕ್ಕೆ ನಿಲ್ಲುವ ಸರತಿ ಸಾಲಿನಲ್ಲಿ ಸೂಕ್ತ ನೆರಳಿನ ವ್ಯವಸ್ಥೆಯನ್ನು, ಭಕ್ತಾದಿಗಳು ನೆರಳಿನಲ್ಲಿ ಕುಳಿತು ವಿಶ್ರಮಿಸಿಕೊಳ್ಳಲು ಅನುಕೂಲವಾಗುವಂತೆ ಅಗತ್ಯಕ್ಕೆ ತಕ್ಕಂತೆ ಲಭ್ಯ ಸ್ಥಳಾವಕಾಶದಲ್ಲಿ ತಾತ್ಕಾಲಿಕ ಪೆಂಡಾಲ್ ವ್ಯವಸ್ಥೆಯನ್ನು ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವುದಕ್ಕೆ ದಾನಿಗಳು ಮುಂದೆ ಬಂದಲ್ಲಿ ಅವರಿಗೆ ಅವಕಾಶ ಮಾಡಿಕೊಡಲು ಹಾಗೂ ಒಂದು ವೇಳೆ ಯಾರು ದಾನಿಗಳು ಮುಂದೆ ಬರದಿದಲ್ಲಿ ಇದಕ್ಕೆ ತಗಲುವ ವೆಚ್ಚವನ್ನು ದೇವಾಲಯದ ನಿಧಿಯಿಂದ ನಿಯಮಾನುಸಾರ ಭರಿಸುವಂತೆ ಜರೂರಾಗಿ ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here