ವಿನ್ಯಾಸ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯಿತಿಗೆ ನೀಡಬೇಕು: ಸದಸ್ಯರ ಆಗ್ರಹ, ನಿರ್ಣಯ
ನೆಲ್ಯಾಡಿ: ಗ್ರಾಮ ಪಂಚಾಯಿತಿಗಳಲ್ಲಿ ಆಗುತ್ತಿದ್ದ ವಿನ್ಯಾಸ ನಕ್ಷೆ ಅನುಮೋದನೆಗೆ ತಡೆ ನೀಡಿರುವುದು ಸರಿಯಲ್ಲ. ಈ ಅಧಿಕಾರವನ್ನು ಮತ್ತೆ ಗ್ರಾಮ ಪಂಚಾಯತ್ ಗೇ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಲು ಬಜತ್ತೂರು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ.
ಸಭೆ ಮಾ. 5 ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಾಧರ ಪಿ.ಎನ್. ಅವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಗ್ರಾಮ ಪಂಚಾಯಿತಿಗೆ ಇದ್ದ ವಿನ್ಯಾಸ ನಕ್ಷೆ ಅನುಮೋದನೆ ಅಧಿಕಾರಕ್ಕೆ ತಡೆ ನೀಡಿ ಮಹಾನಗರ ಪಾಲಿಕೆಗಳಿಗೆ ನೀಡಲಾಗಿದೆ. ಈ ಮೂಲಕ ಗ್ರಾಮ ಪಂಚಾಯಿತಿಗಳ ಅಧಿಕಾರವನ್ನು ಮೊಟಕುಗೊಳಿಸಲಾಗುತ್ತಿದೆ. ಮಹಾನಗರ ಪಾಲಿಕೆಗಳಿಗೆ ಹೋಗಿ ವಿನ್ಯಾಸ ನಕ್ಷೆ ಅನುಮೋದನೆ ಪಡೆಯುವುದು ಗ್ರಾಮೀಣ ಭಾಗದ ಜನರಿಗೆ ಸವಾಲಿನ ಕೆಲಸ ಆಗಲಿದೆ. ಓಡಾಟ, ಖರ್ಚು ವೆಚ್ಚವೂ ಅಧಿಕವಾಗಲಿದೆ. ಆದ್ದರಿಂದ ಹಿಂದಿನಂತೆ ವಿನ್ಯಾಸ ನಕ್ಷೆ ಅನುಮೋದನೆ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳಿಗೇ ನೀಡಬೇಕೆಂದು ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ಚರ್ಚೆ ನಡೆದು ಸರ್ಕಾರಕ್ಕೆ ಬರೆಯಲು ನಿರ್ಣಯ ಮಾಡಲಾಯಿತು.
ಇಂಗುಗುಂಡಿ ಕಡ್ಡಾಯ:
ಎಲ್ಲಾ ಮನೆಯವರು ಕಡ್ಡಾಯವಾಗಿ ಇಂಗುಗುಂಡಿ ರಚನೆ ಮಾಡಿಕೊಳ್ಳಬೇಕು. ಮನೆಯ ಕೊಳಚೆ ನೀರನ್ನು ಚರಂಡಿಗೆ ಬಿಡಬಾರದು. ಇಂಗು ಗುಂಡಿಗೆ ಕೊಳಚೆ ನೀರು ಬಿಡಬೇಕು. ತಪ್ಪಿದಲ್ಲಿ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಚರಂಡಿಗೆ ಕಸ ಹಾಕುವವರಿಗೆ ನೋಟೀಸ್ ನೀಡಲು ಸಭೆಯಲ್ಲಿ ನಿರ್ಣಯ ಮಾಡಲಾಯಿತು.
ಕಸ ಎಸೆದಲ್ಲಿ ದಂಡ:
ಕೆಲ ದಿನದ ಹಿಂದೆ ಹೊಸಗದ್ದೆ ಪರಿಸರದಲ್ಲಿ ಪಿಕಾಪ್ ವಾಹನವೊಂದರಲ್ಲಿ ತಂದು ಕಸ ಎಸೆಯುತ್ತಿರುವುದನ್ನು ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿ ಪಂಚಾಯತ್ ಗೆ ದೂರು ನೀಡಿದ್ದರು. ಪಂಚಾಯತ್ ನಿಂದ ಪೊಲೀಸರಿಗೆ ದೂರು ನೀಡಲಾಗಿತ್ತು. ಬಳಿಕ ಕಸ ತಂದು ಹಾಕಿದ ಅಂಗಡಿಯವರಿಗೆ ಪಂಚಾಯತ್ ನಿಂದ 1500 ರೂ.ದಂಡ ವಿಧಿಸಲಾಗಿದೆ. ಯಾರೂ ಕಸ ತಂದು ರಸ್ತೆ ಬದಿ ಎಸೆಯಬಾರದು. ಕಸ ಎಸೆಯುವುದು ಕಂಡು ಬಂದಲ್ಲಿ ಅಂತವರಿಗೆ ಪಂಚಾಯತ್ ನಿಂದ ರೂ. 5 ಸಾವಿರದ ತನಕ ದಂಡ ವಿಧಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.
ಬೋರ್ ವೆಲ್ ಗೆ ಮನವಿ:
ಸುಮಾರು 20 ವರ್ಷ ದ ಹಿಂದೆ ನೀರಕಟ್ಟೆಯಲ್ಲಿ ಪಂಚಾಯತ್ ವತಿಯಿಂದ ಬೋರ್ ವೆಲ್ ಕೊರೆಯಲಾಗಿದ್ದು ಇದರಿಂದಲೇ ಗ್ರಾಮ ಪಂಚಾಯಿತಿ ಟ್ಯಾಂಕ್ ಗಳಿಗೆ ಈಗಲೂ ನೀರು ಪೂರೈಕೆ ಮಾಡಲಾಗುತ್ತಿದೆ. ಈಗ ಖಾಸಗಿ ವ್ಯಕ್ತಿಯೋರ್ವರು ಸದ್ರಿ ಬೋರ್ ವೆಲ್ ನನ್ನ ವರ್ಗ ಜಾಗದಲ್ಲಿದ್ದು ನನಗೆ ತೋಟಕ್ಕೆ ನೀರು ಬಳಕೆಗೆ ಅವಕಾಶ ನೀಡಬೇಕು. ಇಲ್ಲದೇ ಇದ್ದಲ್ಲಿ ಹೊಸದಾಗಿ ಬೋರ್ ವೆಲ್ ಕೊರೆಯಲು ಅವಕಾಶ ನೀಡುವಂತೆ ಮನವಿ ಮಾಡಿರುವ ವಿಚಾರವೂ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಈ ಬಗ್ಗೆ ಚರ್ಚೆ ನಡೆದು ಸದ್ರಿಯವರಿಗೆ ಅವರ ಜಾಗದ ಸರ್ವೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಲು ನಿರ್ಣಯ ಮಾಡಲಾಯಿತು.
ಹಕ್ಕುಪತ್ರ ವಿತರಿಸಿ:
ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತ 15 ಫಲಾನುಭವಿಗಳಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ತಾಂತ್ರಿಕ ದೋಷದಿಂದ ಹಕ್ಕುಪತ್ರ ವಿತರಣೆಗೆ ಸಮಸ್ಯೆ ಯಾಗಿದೆ ಎಂಬ ಉತ್ತರ ನಿಗಮದಿಂದ ಬಂದಿದೆ. ಈ ತಾಂತ್ರಿಕದೋಷ ವನ್ನು ಆದಷ್ಟು ಬೇಗ ಸರಿಪಡಿಸಿಕೊಂಡು ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಆಗ್ರಹಿಸಿದರು.
ಪರವಾನಿಗೆ ಪಡೆಯದೇ ಇದ್ದಲ್ಲಿ ದಂಡ:
ಮನೆ ಹಾಗೂ ಇತರೇ ಕಟ್ಟಡ ರಚಿಸುವವರು ಮೊದಲು ಪರವಾನಿಗೆ ಪಡೆದುಕೊಳ್ಳಬೇಕು. ಇಲ್ಲದೇ ಇದ್ದಲ್ಲಿ ಅಂತವರಿಗೆ ದಂಡ ವಿಧಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ನೀರಕಟ್ಟೆ ಅಂಗಡಿ ಕಟ್ಟಡ ಹಾಗೂ ಗೇರು ಫಸಲು ಈ ತಿಂಗಳಲ್ಲೇ ಏಲಂ ಮಾಡಲು ನಿರ್ಣಯ ಮಾಡಲಾಯಿತು. ಇನ್ನಿತರ ಹಲವು ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಲಾಯಿತು.
ಸದಸ್ಯರಾದ ಸಂತೋಷ್ ಕುಮಾರ್ ಪಂರ್ದಾಜೆ, ಉಮೇಶ್ ಓಡ್ರಪಾಲು, ಮೋನಪ್ಪ ಗೌಡ ಬೆದ್ರೋಡಿ, ಅರ್ಪಿತಾ ರೈ, ಪ್ರೆಸಿಲ್ಲಾ ಡಿಸೋಜ, ಸ್ಮಿತಾ, ಪ್ರೇಮ ರವರು ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಂದ್ರಮತಿಯವರು ಸ್ವಾಗತಿಸಿ, ಸರಕಾರದ ಸುತ್ತೋಲೆ ಹಾಗೂ ಸಾರ್ವಜನಿಕ ಅರ್ಜಿಗಳನ್ನು ಸಭೆಗೆ ಮಂಡಿಸಿದರು. ಸಿಬ್ಬಂದಿ ರಮೇಶ್ ಸಹಕರಿಸಿದರು.