ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರಾಚಾರ್ಯರಿಗೆ ಬೇಡಿಕೆ ಮಂಡನೆ
ಉಪ್ಪಿನಂಗಡಿ: ಕಾಲೇಜಿನಲ್ಲಿರುವ ಕುಂದುಕೊರತೆಗಳನ್ನು ಬಗೆಹರಿಸಬೇಕೆಂದು ವಿದ್ಯಾರ್ಥಿಗಳು ಒಟ್ಟಾಗಿ ಬೇಡಿಕೆ ಮಂಡಿಸಿದ ಘಟನೆ ಮಾ.6ರಂದು ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.
ಕಾಲೇಜಿನ ಮುಂಭಾಗ ಒಟ್ಟು ಸೇರಿದ ವಿದ್ಯಾರ್ಥಿಗಳು ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಕಾಲೇಜಿನ ಪ್ರಾಚಾರ್ಯ ಪ್ರೊ. ಸುಬ್ಬಪ್ಪ ಕೈಕಂಬ ಅವರನ್ನು ಆಗ್ರಹಿಸಿದರಲ್ಲದೆ, ಅವರಿಗೆ ಮನವಿ ನೀಡಿದರು. ಕಾಲೇಜಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲ. ಕಾಲೇಜು ಗ್ರಂಥಾಲಯವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ನೀರಿನ ಟ್ಯಾಂಕ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಾಲೇಜು ಆವರಣವನ್ನು ಸ್ವಚ್ಛವಾಗಿಡುವ ಬಗ್ಗೆ, ಶಿಥಿಲ ಕಟ್ಟಡದೊಳಗೆ ತರಗತಿಗಳು ನಡೆಯುತ್ತಿರುವ ಬಗ್ಗೆ, ಕೆಲವು ತರಗತಿಯಲ್ಲಿ ಫ್ಯಾನ್ನ ವ್ಯವಸ್ಥೆ ಇಲ್ಲದಿರುವ ಬಗ್ಗೆ, ಕಾಲೇಜಿನ ಆವರಣದಲ್ಲಿ ಬೀದಿ ನಾಯಿಗಳ ಕಾಟವನ್ನು ನಿಯಂತ್ರಿಸುವ ಬಗ್ಗೆ, ಒಂದು ಸೆಮಿಸ್ಟರ್ ಕಳೆದರೂ ವಿದ್ಯಾರ್ಥಿ ಪ್ರತಿನಿಧಿಗಳ ಸಭೆ ಕರೆಯದಿರುವ ಬಗ್ಗೆ, ಕಾಲೇಜಿನಲ್ಲಿ ಅಸ್ತಿತ್ವದಲ್ಲಿರುವ ಐಒಪಿ ಸಮಿತಿಯ ಸಭೆ ಕರೆಯದ ಬಗ್ಗೆ, ವಿದ್ಯಾರ್ಥಿನಿಯರ ವಿಶ್ರಾಂತಿ ಕೊಠಡಿಯು ದುಸ್ಥಿತಿಯಲ್ಲಿರುವ ಬಗ್ಗೆ, ಪ್ರಥಮ ದರ್ಜೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇನ್ನೂ ಐಡಿ ಕಾರ್ಡ್ ನೀಡದಿರುವ ಬಗ್ಗೆ, ಶೌಚಾಲಯ ಸ್ವಚ್ಚತೆಯಿಂದ ಕೂಡಿರದ ಬಗ್ಗೆ ವಿದ್ಯಾರ್ಥಿಗಳು ಮನವಿಯಲ್ಲಿ ಉಲ್ಲೇಖಿಸಿದ್ದರಲ್ಲದೆ, ಈ ಎಲ್ಲಾ ಕುಂದು ಕೊರತೆಗಳನ್ನು ಬಗೆ ಹರಿಸಿಕೊಡಬೇಕಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಕಾಲೇಜು ಪ್ರಾಚಾರ್ಯ ಪ್ರೊ. ಸುಬ್ಬಪ್ಪ ಕೈಕಂಬ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಸುಬ್ಬಪ್ಪ ಕೈಕಂಬ, ವಿದ್ಯಾರ್ಥಿಗಳೆಲ್ಲ ಒಟ್ಟಾಗಿ ಕೆಲವೊಂದು ಬೇಡಿಕೆಗಳನ್ನು ಮಂಡಿಸಿದ್ದಾರೆಯೇ ಹೊರತು, ಇದು ಪ್ರತಿಭಟನೆ ಅಲ್ಲ. ಇವರು ಹೇಳಿದ ಕೆಲವೊಂದು ಸಮಸ್ಯೆಗಳು ದೊಡ್ಡ ಮಟ್ಟದಲ್ಲಿ ಇಲ್ಲದಿದ್ದರೂ, ಸಣ್ಣ ಸಣ್ಣ ಸಮಸ್ಯೆಗಳಿರುವುದು ನನ್ನ ಗಮನಕ್ಕೂ ಬಂದಿತ್ತು. ಅದು ಸರಿಪಡಿಸಬೇಕಾದದ್ದೇ. ಆದರೆ ಕೆಲವೊಂದು ಕಾರಣಗಳಿಂದ ತುರ್ತು ಪರಿಹಾರ ಸಾಧ್ಯವಾಗಿಲ್ಲ. ಕಾಲೇಜಿನಲ್ಲಿ ಅಡಿಟೋರಿಯಂ ಇಲ್ಲ ಎಂಬ ನೆಲೆಯಿಂದ ಗ್ರಂಥಾಲಯವನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಿಲ್ಲ. ಈಗ ಇವರ ಎಲ್ಲಾ ಬೇಡಿಕೆಗಳನ್ನು ಆಲಿಸಿದ್ದೇನೆ. 15 ದಿನದೊಳಗೆ ಇದಕ್ಕೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದೇನೆ. ಹಾಗೆ ಮಾಡುತ್ತೇನೆ ಎಂದರು.