8 ತಿಂಗಳಲ್ಲಿ ಸಾವಿರದ ನಾಲ್ಕು ನೂರು ಕೋ. ಅನುದಾನ
ಉಪ್ಪಿನಂಗಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜನತೆಗೆ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದಲ್ಲದೆ, ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಒಂದು ಸಾವಿರದ ನಾಲ್ಕು ನೂರು ಕೋಟಿ ರೂ. ಅನುದಾನವನ್ನು ನೀಡಿದೆ. ಶಾಸಕನಾಗಿ ಆಯ್ಕೆಯಾದ 8 ತಿಂಗಳಲ್ಲೇ ಇಷ್ಟು ದೊಡ್ಡ ಮೊತ್ತದ ಅನುದಾನವನ್ನು ತಂದಿರುವುದು ಇತಿಹಾಸದಲ್ಲೇ ಮೊದಲಾಗಿದೆ. ರಾಜ್ಯ ಸರಕಾರದಿಂದ ಅನುದಾನಗಳು ಬರುತ್ತಿಲ್ಲ ಎನ್ನುವ ಸುಳ್ಳು ಆರೋಪಗಳಿಗೆ ಈ ಮೂಲಕ ಉತ್ತರ ನೀಡಿದ್ದೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದರು.
34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 90.5 ಲಕ್ಷದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನೆಕ್ಕಿಲಾಡಿಯ ದರ್ಬೆಯಲ್ಲಿ ಗುದ್ದಲಿ ಪೂಜೆ ನಡೆಸಿ ಮಾತನಾಡಿದ ಅವರು, ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಪಿಡಬ್ಲ್ಯೂಡಿ ಇಲಾಖೆಯ 10 ಕೋಟಿಯ ಹೆದ್ದಾರಿ ಚತುಷ್ಪಥ ಕಾಮಗಾರಿ ಸೇರಿದಂತೆ 34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಗೆ ಒಟ್ಟು 10 ಕೋಟಿಯ ತೊಂಭತ್ತು ಲಕ್ಷದ ಐದು ಸಾವಿರ ರೂಪಾಯಿ ಅನುದಾನವನ್ನು ನೀಡಿದ್ದೇನೆ. ಬೇರಿಕೆ- ಬೊಳಂತಿಲ ರಾಜ್ಯ ಹೆದ್ದಾರಿಯ ಚತುಷ್ಪಥ ಕಾಮಗಾರಿಗೆ ಮಂಜೂರಾತಿ ನೀಡಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ. ಈ ಕಾಮಗಾರಿ ಈಗ ಪ್ರಗತಿಯಲ್ಲಿದ್ದು, ಕಾಮಗಾರಿ ಮುಗಿದ ಬಳಿಕ ಬಿಲ್ ನೀಡುವುದು ಕೂಡಾ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವೇ. ದರ್ಬೆ ರಸ್ತೆಯು ಹಲವಾರು ವರ್ಷಗಳಿಂದ ನಡೆದಾಡಲೂ ಕಷ್ಟಕರವಾಗುವಂತಹ ಸ್ಥಿತಿಯಲ್ಲಿತ್ತು. ಇಲ್ಲಿರುವುದು ಬೀಡಿ ಕಟ್ಟುವಂತಹ ಬಡ ಕುಟುಂಬಗಳು. ಆದರೆ ಅವರು ಸರಿಯಾದ ರಸ್ತೆಯಿಲ್ಲದೆ ಪಡುವ ಸಂಕಷ್ಟ ಯಾರಿಗೂ ಅರ್ಥವಾಗಲಿಲ್ಲ. ಆದ್ದರಿಂದಲೇ ಅದನ್ನು ಅಭಿವೃದ್ಧಿ ಪಡಿಸಲು ಅಂದು ಅಧಿಕಾರದಲ್ಲಿದ್ದ ಬಿಜೆಪಿಯಿಂದ ಸಾಧ್ಯವಾಗಲಿಲ್ಲ. ಈ ರಸ್ತೆಯ ಸ್ಥಿತಿಯ ಬಗ್ಗೆ ಇಲ್ಲಿನ ಕಾಂಗ್ರೆಸ್ ವಲಯಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಹಾಗೂ ಪಕ್ಷದ ಪದಾಧಿಕಾರಿಗಳ ಮನವಿಯನ್ನಾಧರಿಸಿ ರಸ್ತೆ ಅಭಿವೃದ್ಧಿಗೆ 30 ಲಕ್ಷ ರೂ. ಅನುದಾನವನ್ನು ನೀಡಿದ್ದೇನೆ. ಇದರಿಂದಾಗಿ ಬಿಜೆಪಿ ಕಾರ್ಯಕರ್ತರೇ ನನಗೆ ಅಭಿನಂದನೆಯ ಬ್ಯಾನರ್ ಹಾಕಿದ್ದಾರೆ. ನಾನು ಓರ್ವ ಶಾಸಕನಾಗಿ ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವುದಿಲ್ಲ. ಸದಾ ಅಭಿವೃದ್ಧಿಯ ಚಿಂತನೆ ನಮ್ಮದಾಗಿರಬೇಕು. ರಾಜ್ಯ ಸರಕಾರದ ಯೋಜನೆಗಳನ್ನು ಮನೆ-ಮನೆ ತಲುಪಿಸುವ ಕಾರ್ಯ ಪಕ್ಷದ ಕಾರ್ಯಕರ್ತರಿಂದಾಗಬೇಕು. ಅಭಿವೃದ್ಧಿಯ ಹಾದಿಯಲ್ಲಿ ಸಾಗುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗುತ್ತಾ ಪಕ್ಷ ಕಟ್ಟುವ ಕಾರ್ಯ ನಮ್ಮದಾಗಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಜತೀಂದ್ರ ಶೆಟ್ಟಿ ಅಲಿಮಾರ್ ಮಾತನಾಡಿ, ಈ ರಸ್ತೆಯ ಅಭಿವೃದ್ಧಿ ಬಗ್ಗೆ ನಾವೆಲ್ಲರೂ ಹಲವು ವರ್ಷಗಳಿಂದ ಬೇಡಿಕೆಯಿಡುತ್ತಿದ್ದೇವೆ. ಆದರೆ ನಿಮ್ಮಿಂದ ಅದಕ್ಕೆ ಸ್ಪಂದನೆ ದೊರಕಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್ ಮಾತನಾಡಿ, ಈ ಭಾಗದಲ್ಲಿ ರಸ್ತೆಗಳಾಗಬೇಕಾದರೆ ಕಾಂಗ್ರೆಸ್‌ನ ಶಾಸಕರು ಗೆದ್ದು ಬರಬೇರಬೇಕು ಎನ್ನುವ ಮಾತು ನಿಜವಾಗಿದೆ. ಯಾಕೆಂದರೆ ಅಂದು ಶಕುಂತಳಾ ಶೆಟ್ಟಿಯವರು ಕಾಂಗ್ರೆಸ್‌ನಿಂದ ಶಾಸಕಿಯಾಗಿದ್ದ ಸಮಯದಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಬೊಳಂತಿಲದಿಂದ ದರ್ಬೆಯವರೆಗೆ ರಸ್ತೆಯನ್ನು ಅಭಿವೃದ್ಧಿ ಪಡಿಸಿದರು. ಈಗ 30 ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ಧಿಗೊಳ್ಳಲಿರುವ ದರ್ಬೆ ರಸ್ತೆಯು ವಿನಯ ಕುಮಾರ್ ಸೊರಕೆಯವರು ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ಸಂದರ್ಭ ಅಭಿವೃದ್ಧಿಯನ್ನು ಕಂಡಿತ್ತು. ಈಗ ಮತ್ತೆ ಕಾಂಗ್ರೆಸ್‌ನಿಂದ ಶಾಸಕರಾಗಿರುವ ಅಶೋಕ್ ಕುಮಾರ್ ರೈಯವರು ಮತ್ತೆ ಅದರ ಅಭಿವೃದ್ಧಿಗೆ ಅನುದಾನವನ್ನು ನೀಡಿದ್ದಾರೆ. ಈ ಮೂಲಕ ಈ ಭಾಗದಲ್ಲಿ ರಸ್ತೆಗಳು ಅಭಿವೃದ್ಧಿಯಾಗಬೇಕಾದರೆ ಕಾಂಗ್ರೆಸ್‌ನ ಶಾಸಕರು ಗೆದ್ದು ಬರಬೇರಬೇಕು ಎನ್ನುವ ಮಾತು ನಿಜವಾಗಿದೆ ಎಂದರು.
ಈ ಸಂದರ್ಭ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಂ ಕೆ.ಬಿ., ಡಿಸಿಸಿ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆ, ಕಾಂಗ್ರೆಸ್ ಮುಖಂಡರಾದ ನಝೀರ್ ಮಠ, ಜಯಪ್ರಕಾಶ್ ಕೋಡಿಂಬಾಡಿ, ಫಾರೂಕ್ ಪೆರ್ನೆ, ಶರೀಕ್ ಅರಪ್ಪಾ, ಗಣೇಶ್ ನಾಯಕ್, ಬೂತ್ ಸಮಿತಿ ಅಧ್ಯಕ್ಷರಾದ ಹಮೀದ್ ಪಿ.ಟಿ., ಖಾದರ್ ಆದರ್ಶನಗರ, ಇಸಾಕ್, ಪ್ರಮುಖರಾದ ಸುಹಾಸ್ ಕೊಳಕ್ಕೆ, ಉಷಾ ಬೀತಲಪ್ಪು, ಭವಾನಿ ಬೀತಲಪ್ಪು, ಪೊನ್ನಕ್ಕ, ಸುರೇಶ್ ನಾಯ್ಕ ದರ್ಬೆ, ಗಣೇಶ್ ನಾಯಕ್, ಗೋಪಾಲ ನಾಯಕ್, ಸುಂದರ ನಾಯ್ಕ, ಸಿಮಿ ಗೋಡ್ವಿನ್, ಶಿಲ್ಪಾ, ಗೀತಾ ನಾಯಕ್, ಸುಂದರ ನಾಯ್ಕ ದರ್ಬೆ, ಯಶೋಧಾ, ಸುಧಾ ನಾಯ್ಕ, ಸುಕುಮಾರ ಬೀತಲಪ್ಪು, ಗಿರಿಜಾ ಬೀತಲಪ್ಪು, ರಾಜೀವ ದರ್ಬೆ, ಹೊನ್ನಪ್ಪ ನಾಯ್ಕ ದರ್ಬೆ, ಕುಂಞ ನಾಯ್ಕ ದರ್ಬೆ, ನರಸಿಂಹ ನಾಕ್, ಸುದರ್ಶನ್ ನಾಕ್, ಅರುಣಾ, ಹೊನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು.
34 ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್ ಸ್ವಾಗತಿಸಿ, ವಂದಿಸಿದರು.
ದರ್ಬೆಯ ಈ ರಸ್ತೆಯನ್ನು ಪುರುಷರಕಟ್ಟೆಗೆ ಜೋಡಿಸಬೇಕು ಎನ್ನುವ ಬೇಡಿಕೆಗಳು ನನಗೆ ಬಂದಿವೆ. ಅದಕ್ಕೆ ಸಣ್ಣ ಸೇತುವೆಯೊಂದರ ನಿರ್ಮಾಣದ ಅಗತ್ಯವಿದೆಯೆಂಬುದು ಕೂಡಾ ನನ್ನ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಅನುದಾನ ತಂದು ಕಾಂಕ್ರೀಟ್ ರಸ್ತೆಯನ್ನು ಮಾಡಿ ಅದರಲ್ಲಿ ನಿಮ್ಮನ್ನು ಪುರುಷರಕಟ್ಟೆಗೆ ಹೋಗಿ ಬರುವ ವ್ಯವಸ್ಥೆಯನ್ನು ಮಾಡುತ್ತೇನೆ ಎಂದು ಭರವಸೆ ನೀಡಿದ ಶಾಸಕ ಅಶೋಕ್ ಕುಮಾರ್ ರೈಯವರು, ಆದರ್ಶನಗರದಲ್ಲಿ ತಡೆಗೋಡೆ ನಿರ್ಮಾಣದ ಕಾರ್ಯವೂ ಅಗತ್ಯವಾಗಿ ಆಗಬೇಕಿದೆ. ಅದಕ್ಕೂ ಅನುದಾನವನ್ನು ನೀಡುವುದಾಗಿ ತಿಳಿಸಿದರು.