ಪುತ್ತೂರು:ಸರ್ವ ನಾಗದೋಷ ಪರಿಹಾರಕ, ಸಂತಾನಪ್ರದಾಯಕನಾಗಿರುವ ಕಾರಣಿಕ ಕ್ಷೇತ್ರ ಮುಂಡೂರು ಗ್ರಾಮದ ಶ್ರೀ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ, ವರ್ಷಾವಧಿ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವ ಮಾ.9ರಿಂದ ಮಾ.10ರ ತನಕ ವಿವಿಧ ವೈದಿಕ, ತಾಂತ್ರಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ವೇ.ಮೂ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ನೇತೃತ್ವದಲ್ಲಿ ನಡೆಯುವ ಜಾತ್ರೋತ್ಸವದಲ್ಲಿ ಮಾ.8ರಂದು ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಪ್ರವೇಶ ರಾತ್ರಿ ರಂಗಪೂಜೆ ನಡೆಯಲಿದೆ. ಮಾ.8ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಗಣಪತಿಹೋಮ, ಕಲಶ ಪೂಜೆ, ಕಲಶಾಭಿಷೇಕ, ನಾಗ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ನಾಗತಂಬಿಲ, ದೈವಗಳಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ದೈವಗಳ ಭಂಡಾರ ತೆಗೆಯುವುದು, ನಂತರ ಶ್ರೀದೇವರ ಬಲಿ ಹೊರಟು, ಉತ್ಸವ, ವಸಂತ ಕಟ್ಟೆಪೂಜೆ, ಸುಡುಮದ್ದು ಪ್ರದರ್ಶನ, ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆದ ಬಳಿಕ ಕ್ಷೇತ್ರದ ದೈವಗಳಾದ ಉಳ್ಳಾಕುಲು, ರಕ್ತೇಶ್ವರಿ, ವ್ಯಾಘ್ರಚಾಮುಂಡಿ, ವರ್ಣರ ಪಂಜುರ್ಲಿ, ಬೊಟ್ಟಿಭೂತ, ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ. ಮಾ.10ರಂದು ಕಲಶ, ಆರಾಧನೆ, ಮಧ್ಯಾಹ್ನ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆಯೊಂದಿಗೆ ಜಾತ್ರೋತ್ಸವ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ.
ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವರು ಅತ್ಯಂತ ಶಕ್ತಿಶಾಲಿ, ಕಾರಣಿಕತೆಯನ್ನು ಹೊಂದಿದ್ದಾರೆ ಎನ್ನುವುದಕ್ಕೆ ಬಹಳಷ್ಟು ಪುರಾವೆಗಳು ಇಲ್ಲಿವೆ. ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸಬೇಕಾದ ಸೇವೆಗಳು ಹಾಗೂ ನಾಗದೋಷಗಳಿಗೆ ಸಂಬಂಧಿಸಿದ ಪರಿಹಾರಕ್ಕಾಗಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗತಂಬಿಲ ಸೇವೆಗಳನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಲ್ಲಿಸುವ ಸೇವೆಯಷ್ಟೇ ಶಕ್ತಿಶಾಲಿ ಹಾಗೂ ಪ್ರಾಮುಖ್ಯತೆಯನ್ನು ಕುಕ್ಕಿನಡ್ಕ ಶ್ರೀ ಸುಬ್ರಾಯ ಸಾನಿಧ್ಯವು ಹೊಂದಿದೆ ಎನ್ನುವುದು ದೇವಸ್ಥಾನದಲ್ಲಿ ನಡೆದ ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿದೆ. ಮುಖ್ಯವಾಗಿ ನಾಗದೋಷ ಮತ್ತು ಸಂತಾನಭಾಗ್ಯ ಇಲ್ಲದವರಿಗೆ ಇಲ್ಲಿ ಬಂದು ಹರಕೆ ತೀರಿಸಿಕೊಂಡರೆ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ. ಇದಕ್ಕೆ ಬಹಳಷ್ಟು ಜೀವಂತ ನಿದರ್ಶನಗಳು ಇಲ್ಲಿವೆ. ಹೀಗಾಗಿ ನಾಗದೋಷ ಪರಿಹಾರಕ್ಕಾಗಿ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.