ಪುತ್ತೂರು: ಆಧುನಿಕ ಯುಗದಲ್ಲಿ ನಮ್ಮ ಸಂಸ್ಕೃತಿಯನ್ನು ನಾವು ಮೃಯುತ್ತಿದ್ದೇವೆ ಇದು ಮುಂದಿನ ದಿನಗಳಲ್ಲಿ ಗಂಡಾಂತರಕ್ಕೆ ಕಾರಣವಾಗಲಿದೆ ಎಂದು ಶಾಸಕರಾದ ಅಶೋಕ್ ರೈ ಹೇಳಿದ್ದಾರೆ. ಅವರು ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೆತ್ತು ಹೊತ್ತು ಸಾಕಿದ ತಂದೆ, ತಾಯಿಯನ್ನು ಮಕ್ಕಳು ದೂರ ಮಾಡುವ ಕಾಲ ಬಂದಿದೆ. ಸಹೋದರರ ನಡುವೆ ಆಸ್ತಿಗಾಗಿ ಕಚ್ಚಾಟ ಹೆಚ್ಚಾಗಿದೆ. ಸಂಬಂಧಗಳೇ ಇಲ್ಲದೆ ಬದುಕುವ ವಾತಾವರಣ ಸೃಷ್ಟಿಯಾಗುತ್ತಿದೆ. ದೇವರ ಬಗ್ಗೆ ಮಾತನಾಡುತ್ತಾರೆ, ಆದರೆ ಮನೆಯಲ್ಲೇ ಇರುವ ಮಾತನಾಡುವ ದೇವರನ್ನು ಆಶ್ರಮಕ್ಕೆ ಸೇರಿಸುತ್ತೇವೆ. ಇದೆಂತಹ ನ್ಯಾಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಕಷ್ಟದಲ್ಲಿದ್ದವರಿಗೆ ನೆರವಾಗುವುದೇ ನಿಜವಾದ ಧರ್ಮವಾಗಿದೆ. ದೇವರ ಮೇಲಿನ ನಂಬಿಕೆ ನಮಗೆ ಬದುಕನ್ನು ಕೊಡುತ್ತದೆ. ಉತ್ತಮ ಪ್ರಜೆಗಳಾಗಿ ಬಾಳಿದರೆ ನಮಗೆ ಸಮಾಜದಲ್ಲಿ ಗೌರವ ದೊರೆಯುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಸಂಘಟನೆಯ ಮುಖಂಡ ಅರುಣ್ ಪುತ್ತಿಲ, ಸುಜಯ್ ತಂತ್ರಿ ಉಪ್ಪಳ, ನಂದಿಕೇಶ್ವರ ಭಜನಾ ಮಂದಿರದ ಅಧ್ಯಕ್ಷ ವರುಣ್ ಕುಮಾರ್ ಜೈನ್, ಉದ್ಯಮಿ ಉಮೇಶ್ ನಾಡಾಜೆ ಉಪಸ್ಥಿತರಿದ್ದರು. ಕೇಶವ ಪೂಜಾರಿ ಬೆದ್ರಾಳ ಸ್ವಾಗತಿಸಿದರು. ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.