ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ| ಸಾಂಸ್ಕೃತಿಕ ಕಾರ್ಯಕ್ರಮ
ಪುತ್ತೂರು: ಪುತ್ತೂರು ಎಪಿಎಂಸಿ ರಸ್ತೆಯಲ್ಲಿರುವ ಆದರ್ಶ ಸ್ಪೆಷಾಲಿಟಿ ಆಸ್ಪತ್ರೆಯ ರಜತ ಮಹೋತ್ಸವ ಸಂಭ್ರಮದ ವಿಶೇಷ ಕಾರ್ಯಕ್ರಮ ಮಾ.10ರಂದು ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು. ಆರಂಭದಲ್ಲಿ ಹಿರಿಯ ಪ್ರಸೂತಿ ತಜ್ಞ ಡಾ. ಸುಬ್ರಾಯ ಭಟ್ ಅವರು ದೀಪ ಪ್ರಜ್ವಲಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮದ ನಡುವೆ ಸಭಾ ಕಾರ್ಯಕ್ರಮ ನಡೆಯಿತು. ಆಸ್ಪತ್ರೆಯ ಆಡಳಿತ ಪಾಲುದಾರ ಡಾ. ಎಮ್.ಎನ್ ಭಟ್ ಅಧ್ಯಕ್ಷತೆ ವಹಿಸಿದ್ದರು.
ಸಿಸ್ಟರ್ಸ್, ಸಿಬ್ಬಂದಿಗಳ ಸೇವೆಯಿಂದ ಮಾದರಿ ಆಸ್ಪತ್ರೆ:
ಆಸ್ಪತ್ರೆಯ ಆಡಳಿತ ಪಾಲುದಾರರಲ್ಲಿ ಒಬ್ಬರಾದ ಡಾ. ಎಂ.ಕೆ.ಪ್ರಸಾದ್ ಅವರು ಮಾತನಾಡಿ, ನಾವು ಆಸ್ಪತ್ರೆಯನ್ನು ರೋಗಿಗಳಿಗೆ ಉತ್ತಮ ಸೇವೆ ಸಿಗಬೇಕೆಂದು ಆರಂಭಿಸಿದ್ದೆವು. ಅದೇ ರೀತಿ ಪ್ರತಿ ತಿಂಗಳು ರೋಗಿಗಳ ಆರೋಗ್ಯಕ್ಕಾಗಿ ಗಣಪತಿ ಹೋಮ ಮಾಡುತ್ತಾ ಬಂದಿದ್ದೇವೆ. ಇವತ್ತು ನಮ್ಮ ಅಸ್ಪತ್ರೆಯ ಸಿಸ್ಟರ್ಸ್ಗಳಿಂದಾಗಿ ನಾವು ಬೆಳೆದಿದ್ದೇವೆ. ಈಗ ಆದರ್ಶ ಅಸ್ಪತ್ರೆ ಪುತ್ತೂರಿನ ಸೆಕೆಂಡರಿ ಸರಕಾರಿ ಆಸ್ಪತ್ರೆಯಾಗಿದೆ. ಇದಕ್ಕೆ ಕಾರಣ ನಮ್ಮ ಸಿಬ್ಬಂದಿಗಳ ಸೇವೆ. ಹಾಗಾಗಿ ಅವರ ಮಕ್ಕಳು ಉತ್ತಮವಾಗಿ ಕಲಿತು ದೊಡ್ಡ ಕೆಲಸ ಪಡೆಯಬೇಕು. ದೊಡ್ಡ ಕೆಲಸ ಎಂದಾಕ್ಷಣ ಅದು ಟೀಚರ್, ಮಾಸ್ಟರ್ ಅಲ್ಲ. ವಿಜ್ಞಾನಿಯಾಗಿ ಇಸ್ರೋದಲ್ಲಿ ಸಂಸ್ಥೆಯಲ್ಲಿರಬೇಕು. ಯಾಕೆಂದರೆ ನನ್ನ ಬಾಗಿಲಲ್ಲಿ ರೋಗಿಯನ್ನು ಬಿಡುವವರ ಮಗಳು ಇವತ್ತು ಇಸ್ರೋದಲ್ಲಿ ಇದ್ದಾಳೆ. ಇದು ನನಗೆ ಹೆಮ್ಮೆ ಸಂತೋಷವನ್ನು ತಂದಿದೆ. ನಾನು ದೇವರಲ್ಲಿ ಬೇಡಿಕೊಳ್ಳುವುದು ನಮ್ಮ ಆಸ್ಪತ್ರೆಯ ಸಿಸ್ಟರ್ಸ್ ಮತ್ತು ಸಿಬ್ಬಂದಿಗಳ ಮಕ್ಕಳು ಕೂಡಾ ದೊಡ್ಡ ಹುದ್ದೆ ಅಲಂಕರಿಸಬೇಕು. ಮೋದಿಯವರು ಇಡೀ ಭಾರತ ನನ್ನ ಕುಟುಂಬ ಎಂದಿದ್ದಾರೆ. ನನಗೆ ನನ್ನ ಆಸ್ಪತ್ರೆಯ ಸಿಬ್ಬಂದಿಗಳೇ ಕುಟುಂಬ ಎಂದ ಅವರು ಮುಂದಿನ ಪ್ರತಿ ಎರಡು ವರ್ಷಗಳಿಗೊಮ್ಮೆ ಸಂಭ್ರಮದ ವಾರ್ಷಿಕೋತ್ಸವ ಆಚರಣೆ ಮಾಡಬೇಕೆಂದು ಹೇಳಿದರು.
ನಮ್ಮ ಉದ್ದೇಶವೊಂದೇ ’ಸರ್ವೇ ಜನಾಃ ಸುಖಿನಾ ಭವಂತು’:
ಇನ್ನೋರ್ವ ಪಾಲುದಾರ ಡಾ. ಬಿ.ಶ್ಯಾಮ್ ಅವರು ಮಾತನಾಡಿ,25 ವರ್ಷದ ಹಿಂದೆ ಈ ಭಾಗದಲ್ಲಿ ರಸ್ತೆ ಇರಲಿಲ್ಲ. ಆಸ್ಪತ್ರೆ ಆದ ಮೇಲೆ ರಸ್ತೆಯೂ ಆಯಿತು. ಅದಾದ ಬಳಿಕ ಈ ಪರಿಸರ ತುಂಬಾ ಬೆಳೆಯಿತು. ನಮ್ಮ ವೃತ್ತಿ ಬಾಂಧವರ ಉದ್ದೇಶ ಒಂದೇ ’ಸರ್ವೇ ಜನಾಃ ಸುಖಿನಾ ಭವಂತು’. ಹಿಂದೆ ಖಾಯಿಲೆ ತಿಳಿಯಲು ಕಷ್ಟ ಇತ್ತು. ಇವತ್ತು ತಜ್ಞ ವೈದ್ಯರ ಬಳಿಕ ಬದಲಾವಣೆ ಆಗಿದೆ. ಆಸ್ಪತ್ರೆಯ ಸಿಬ್ಬಂದಿಗಳ ಸೇವೆ ಆಸ್ಪತ್ರೆಯ ಬೆಳವಣಿಗೆಯಲ್ಲಿ ಮಾದರಿಯಾಗಿದೆ ಎಂದರು.
ರೋಗಿಗಳ ಆರೋಗ್ಯ ಕಾಪಾಡುವ, ಸಿಬ್ಬಂದಿಗಳ ಆಶ್ರಯತಾಣ:
ಇನ್ನೋರ್ವ ಪಾಲುದಾರ ಡಾ. ಎಸ್.ಎಸ್. ಜೋಶಿ ಅವರು ಮಾತನಾಡಿ, ಮಾಜಿ ರಾಷ್ಟ್ರಪತಿ ದಿ.ಅಬ್ದುಲ್ ಕಲಾಂ ಅವರು ಕನಸು ಕಾಣಬೇಕು. ಒಳ್ಳೆಯ ಕನಸು ಕಾಣಬೇಕೆಂದಂತೆ 25 ವರ್ಷಗಳ ಹಿಂದೆ ಪುತ್ತೂರಿನ ಯುವ ವೈದ್ಯರು ಕನಸು ಕಂಡಂತೆ ಇವತ್ತು ಆಸ್ಪತ್ರೆ ಬಡವರಿಗೆ,ಶ್ರೀಮಂತರಿಗೆ ಬೇದ ಭಾವ ಇಲ್ಲದೆ ಬಂದ ಎಲ್ಲಾ ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿದೆ. ಬೀಜ ಬಿತ್ತಿದ ಬಳಿಕ ಅಲ್ಲಿ ಮರ ಆಗಿ ಹಣ್ಣು ಹಂಪಲು ಮಾತ್ರವಲ್ಲ ಮರದಲ್ಲಿ ಅನೇಕ ಜೀವಿಗಳಿಗೆ ಆಶ್ರಯವಾದಂತೆ ನಮ್ಮ ಅಸ್ಪತ್ರೆಯು ರೋಗಿಗಳ ಆರೋಗ್ಯ ಕಾಪಾಡುವುದು ಮಾತ್ರವಲ್ಲ ನಮ್ಮ ಸಿಬ್ಬಂದಿಗಳಿಗೂ ಆಶ್ರಯವಾಗಿದೆ. ನಮ್ಮ ಸಿಬ್ಬಂದಿಗಳು ರೋಗಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅದೇ ರೀತಿ ನಾವು ಕೂಡಾ ಸಿಬ್ಬಂದಿಗಳನ್ನು ಕಂಡಿದ್ದೇವೆ. ಕೋವಿಡ್ ಸಂದರ್ಭದಲ್ಲಿ ಮಂಗಳೂರಿನ ಅನೇಕ ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳಿಗೆ ವೇತನ ಕೊರತೆ ಉಂಟಾಗಿದೆ. ಅಂತಹ ತೊಂದರೆ ನಮಗೆ ಆದರೂ ಸಿಬ್ಬಂದಿಗಳಿಗೆ ವೇತನದಲ್ಲಿ ಕಡಿಮೆ ಮಾಡಿಲ್ಲ. ಇವತ್ತು ಆಸ್ಪತ್ರೆಯ 25 ವರ್ಷದ ಸಂಭ್ರಮವನ್ನು ಸುವರ್ಣಾಕ್ಷರದಲ್ಲಿ ಬರೆದಿಡುವ ಸಂದರ್ಭವಾಗಿದೆ. ಮುಂದೆ 50ನೇ ವರ್ಷವೂ ಯಶಸ್ವಿಯಾಗಿ ನೆರವೇರಲಿ ಎಂದರು.
ವೇದಿಕೆಯಲ್ಲಿ ಡಾ.ವೈ ಸುಬ್ರಾಯ ಭಟ್ ಉಪಸ್ಥಿತರಿದ್ದರು. ಹಿರಿಯ ಸುಶ್ರೂಶಕಿಯರಾದ ತಾರಾವತಿ, ಲಕ್ಷ್ಮೀ, ಶೀಲಾ, ವೀಣಾ, ನಿತಿನ್ ಅತಿಥಿಗಳನ್ನು ಗೌರವಿಸಿದರು. ಗೀತಾ, ವೀಣಾ, ಜಯಮಾಲ, ವಿನೋದಾ ಪ್ರಾರ್ಥಿಸಿದರು. ಡಾ.ಕೀರ್ತನ್ ಶೆಟ್ಟಿ ಸ್ವಾಗತಿಸಿದರು. ರೂಪಾವಾಣಿ ಕಾರ್ಯಕ್ರಮ ನಿರೂಪಿಸಿದರು. ಕವನ ಮತ್ತು ಸೃಜನ್ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ, ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಿತು. ಮಾಜಿ ಶಾಸಕಿ ಮಲ್ಲಿಕಾಪ್ರಸಾದ್, ಡಾ ಸುರೇಶ್ ಪುತ್ತೂರಾಯ, ಪ್ರಾಂಶಪಾಲ ವರದರಾಜ್ ಚಂದ್ರಗಿರಿ, ಡಾ.ಭಾಸ್ಕರ್, ಡಾ. ಅನಿಲ್, ಡಾ. ಈಶ್ವರಪ್ರಕಾಶ್, ಡಾ. ಚೇತನ್, ಡಾ.ಅಭೀಷ್, ಡಾ.ಸಚಿನ್ ಶಂಕರ್, ಡಾ.ಸುರೇಖಾ, ಡಾ.ಪ್ರಶಾಂತ್, ಡಾ.ಮಹೇಶ್, ಡಾ.ಗಣೇಶ್ ಚಿಂತನ್, ಡಾ.ಕಿಶೋರ್ ಮಯ್ಯ, ಡಾ. ಅಜೇಯ್, ಡಾ. ಅರವಿಂದ, ಡಾ. ಶ್ರೀದೇವಿ, ಡಾ. ಮಧುರಾ ಭಟ್, ಡಾ. ರಶ್ಮಿ, ಡಾ. ವಿಹಾರ್ಜೋಶಿ, ಡಾ. ಮಾಲಮಹೇಶ್, ಡಾ. ಪ್ರೀತ್ರಾಜ್ ಬಲ್ಲಾಳ್, ಡಾ. ವಿಶ್ವನಾಥ ಭಟ್ ಕಾನಾವು, ಡಾ. ಅನೀಶ್, ಡಾ. ಜಯಂತ್, ಡಾ.ಪ್ರಶಾಂತ್, ಡಾ. ರಾಽಕಾ, ಡಾ. ಯಶವಂತ್, ಡಾ. ಬದರಿನಾಥ್, ಡಾ ಜಯದೀಪ್, ಡಾ. ಅರ್ಚನಕಾವೇರಿ, ಅರವಿಂದ ಕೃಷ್ಣ, ಅನಂತನಾರಾಯಣ, ಐಡಿಯಲ್ ಲ್ಯಾಬ್ನ ಮಾಲಕ ಸುಜೀಂದ್ರ ಪ್ರಭು ಸಹಿತ ಹಲವಾರು ಮಂದಿ ಸಭೆಯಲ್ಲಿ ಉಪಸ್ಥಿತರಿದ್ದರು.
ದಯವಿಟ್ಟು ಗೂಗಲ್ ಡಾಕ್ಟರ್ ಆಗಬೇಡಿ
ದಯವಿಟ್ಟು ಯಾರೂ ಕೂಡಾ ಗೂಗಲ್ ಡಾಕ್ಟರ್ ಆಗಬೇಡಿ. ಗೂಗಲ್ ನೋಡಿ ಪ್ರಶ್ನೆ ಕೇಳಬೇಡಿ. ನಂಬಿಕೆಯ ವೈದ್ಯರಲ್ಕಿ ಚಿಕಿತ್ಸೆ ಪಡೆದುಕೊಳ್ಳಿ. ರೋಗಿ ಮತ್ತು ವೈದ್ಯರ ನಡುವಿನ ವಿಶ್ವಾಸ ಉಳಿಸಿಕೊಳ್ಳಿ. ಸರಿಯಾದ ಮಾಹಿತಿ ಪಡೆದುಕೊಳ್ಳಿ. ಸರಿಯಾದ ಮಾಹಿತಿ ಕೊಡುವಲ್ಲಿ ವೈದ್ಯರು ಕೂಡಾ ರೋಗಿಗೆ ಸಮಯ ಕೊಡಿ. ರೋಗಿಯೊಂದಿಗೆ ಹೆಚ್ಚಿನ ಸಮಯ ಕೊಡದಾಗ ರೋಗಿಗೆ ಮಾಹಿತಿ ಕೊರತೆಯಿಂದ ವೈದ್ಯರ ಮೇಲೆ ಕೇಸು ಹಾಕುವ ಪರಿಪಾಟ ಉಂಟಾಗುತ್ತದೆ. ನಮ್ಮಲ್ಲಿ ರೋಗಿಯೊಂದಿಗೆ ಸಮಯ ಹೆಚ್ಚುಕೊಡುತ್ತೇವೆ. ಡಾ.ಬಿ.ಶ್ಯಾಮ್