ಪುತ್ತೂರು:ಮಾನಸಿಕ ಅಸ್ವಸ್ಥತೆಗೆ ಒಳಗಾದ ಮಹಿಳೆಯೊಬ್ಬರು ಸಾರ್ವಜನಿಕವಾಗಿ ಉಪಟಳ ನೀಡಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎನ್ನುವ ಸಾರ್ವಜನಿಕರ ದೂರಿನನ್ವಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಪೊಲೀಸರು ಮತ್ತು ಸಮಾಜಸೇವಕ ಕಾರ್ಯಕರ್ತರ ಜೊತೆಗೂಡಿ ಮಹಿಳೆಯನ್ನು ರಕ್ಷಿಸಿ, ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ ಪ್ರಕರಣ ನಗರದ ಬೊಳುವಾರು ಬಳಿ ಮಾ.13ರಂದು ನಡೆದಿದೆ.
ಬೊಳುವಾರಿನ ಆಂಜನೇಯ ಮಂತ್ರಾಲಯದ ಸಮೀಪ ಇರುವ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ, ಸುಮಾರು 60 ವರ್ಷ ಮೇಲ್ಪಟ್ಟ ಮಹಿಳೆ ಇತ್ತೀಚಿನ ಕೆಲ ಸಮಯದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು.ಕೈಯಲ್ಲಿ ಕೋಲು ಹಿಡಿದುಕೊಂಡು ಬೊಳುವಾರು ಬಳಿ ರಸ್ತೆಯಲ್ಲಿ ಅಡ್ಡಾಡುವುದು, ಬಸ್ಗಾಗಿ ಕಾಯುತ್ತಿದ್ದ ಸಾರ್ವಜನಿಕರಿಗೆ ಅವಾಚ್ಯವಾಗಿ ನಿಂದಿಸುವುದು, ಕಲ್ಲಿನಿಂದ ಹೊಡೆಯಲು ಮುಂದಾಗುವುದು ಇತ್ಯಾದಿಗಳನ್ನು ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಸಾರ್ವಜನಿಕರಿಗೆ ಉಟಪಳ ನೀಡುತ್ತಿದ್ದಾರೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಲವಾರು ಬಾರಿ ದೂರುಗಳನ್ನು ನೀಡಲಾಗಿತ್ತು ಎಂದು ತಿಳಿದುಬಂದಿದೆ.
ಸಾರ್ವಜನಿಕರಿಂದ ಬಂದ ನಿರಂತರ ದೂರಿನ ಹಿನ್ನೆಲೆಯಲ್ಲಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪೊಲೀಸ್ ಸಿಬ್ಬಂದಿಯ ಜೊತೆಗೆ ಮಹಿಳೆಯ ಮನೆಗೆ ಭೇಟಿ ನೀಡಿದಾಗ ಆಕೆಯು ಮಾನಸಿಕ ಅಸ್ವಸ್ಥಳಂತೆ ವರ್ತಿಸುತ್ತಿರುವುದು ಕಂಡುಬಂದಿತ್ತು. ಈ ವೇಳೆ ಆಕೆಗೆ ಸಾರ್ವಜನಿಕರಿಗೆ ಉಪಟಳ ನೀಡದಂತೆ ಒಂದು ಬಾರಿ ಎಚ್ಚರಿಕೆ ನೀಡಿ ಬರಲಾಗಿತ್ತು. ಅದಾದ ಬಳಿಕವೂ ಈ ಮಹಿಳೆಯು ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಕಲ್ಲಿನಿಂದ ಹೊಡೆಯುವುದು ಇತ್ಯಾದಿ ಉಪಟಳ ನೀಡುವುದು ಮುಂದುವರೆದಿತ್ತು ಎನ್ನಲಾಗಿದೆ.ಈ ಬಗ್ಗೆ ಮಾ.13ರಂದು ಮತ್ತೆ ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯ ಜೊತೆಗೆ ಮಹಿಳೆಯ ಮನೆಗೆ ಭೇಟಿ ನೀಡಿ ಸಾರ್ವಜನಿಕರು, ಸಮಾಜಸೇವಕರ ನೆರವಿನೊಂದಿಗೆ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಆಕೆಯನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮಹಿಳೆಯು ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದು,ಹಲವು ಗಂಟೆಗಳ ಪ್ರಯತ್ನದ ಬಳಿಕ ಆಕೆಯ ಮನವೊಲಿಕೆ ಮಾಡಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳಿಸಿಕೊಡುವ ಕೆಲಸ ಮಾಡಲಾಯಿತು.
ಕಾರ್ಯಾಚರಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಳಾ, ಕಚೇರಿ ಮೇಲ್ವಿಚಾರಕಿ ಜಲಜಾಕ್ಷಿ, ಸಮಾಜಸೇವಕ, ರೋಟರಿ ಯುವದ ಮಾಜಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಇಸ್ಮಾಯಿಲ್ ಬೊಳುವಾರು, ರೋಟರಿ ಕ್ಲಬ್ನ ಸದಸ್ಯ ವಿಶಾಲ್ ಮೊಂತೇರೋ, ಮೌರಿಸ್ ಕುಟಿನ್ಹಾ, ಜೋಯಲ್ ಕುಟಿನ್ಹಾ, ಶಾಂತಿ ಕುಟಿನ್ಹಾ, ರೋಷನ್ ಡಯಾಸ್ ಸೇರಿದಂತೆ ಪುತ್ತೂರು ನಗರಠಾಣೆ, ಮಹಿಳಾ ಠಾಣೆ ಮತ್ತು ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಸಹಕರಿಸಿದರು. ಕ್ರಿಸ್ಟೋ-ರ್ ಅಸೋಸಿಯೇಷನ್ನ ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು.ಈ ಮೂಲಕ ಪುತ್ತೂರು ಉಮೇಶ್ ನಾಯಕ್ ಅವರು 25ಕ್ಕೂ ಹೆಚ್ಚು ನಿರ್ಗತಿಕ ಹಾಗೂ ಅನಾಥರನ್ನು, ಮೂವರು ಹೆಚ್ಐವಿ ಪೀಡಿತರನ್ನು ಅಽಕಾರಿಗಳ ಸಹಕಾರದೊಂದಿಗೆ ರಕ್ಷಿಸಿ ನಿರ್ಗತಿಕ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪೊಲೀಸರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮಹಿಳೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದು ಕಂಡುಬಂದಿದೆ.ಈ ಹಿನ್ನೆಲೆಯಲ್ಲಿ ಸಮಾಜಸೇವಕರು, ಸಾರ್ವಜನಿಕರ ಸಹಕಾರದಿಂದ ಮಹಿಳೆಯನ್ನು ರಕ್ಷಿಸಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದೇವೆ. ಅಲ್ಲಿ ಆಕೆ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಅವರ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಅವರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ. ನಮಗೆ ಸಹಕಾರ ನೀಡಿದ ಸಾರ್ವಜನಿಕರು, ಸಂಘಸಂಸ್ಥೆಗಳು, ಸಮಾಜಸೇವಕರಿಗೆ ಧನ್ಯವಾದಗಳು-
ಮಂಗಳಾ, ಪ್ರಭಾರ ಸಿಡಿಪಿಒ, ಪುತ್ತೂರು
ಮಹಿಳೆ ಉಪಟಳ ನೀಡುತ್ತಿರುವ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಬಂದು ಸಂಜೆ ವೇಳೆಗೆ ಅವರ ಜೊತೆಗೆ ಮಾತುಕತೆ ನಡೆಸಿದ್ದೆವು. ಅವರು ಹಲವಾರು ವರ್ಷಗಳಿಂದ ಒಬ್ಬಂಟಿಯಾಗಿ ಇದ್ದ ಪರಿಣಾಮ ಈ ರೀತಿ ಸಮಸ್ಯೆ ಎದುರಾಗಿದೆ ಎನ್ನುವುದನ್ನು ಗಮನಿಸಿ ಬೇಸರವೂ ಆಯಿತು.ಇಂದು ಮತ್ತೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಈಕೆಯನ್ನು ಆಸ್ಪತ್ರೆಗೆ ದಾಖಲಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೆವು. ನಮಗೆ ತಾಳ್ಮೆಯಿಂದ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇವೆ
-ಜಲಜಾಕ್ಷಿ, ಮೇಲ್ವಿಚಾರಕರು, ಸಿಡಿಪಿಒ ಕಚೇರಿ,
ಬೊಳುವಾರು ಬಳಿ ಮಾನಸಿಕ ಅಸ್ವಸ್ಥ ಮಹಿಳೆಯೋರ್ವರು ರಂಪಾಟ ಮಾಡುತ್ತಿದ್ದು, ಆಕೆಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಬೆಳಗ್ಗೆ 10.30ರ ವೇಳೆಗೆ ಶಿಶು ಅಭಿವೃದ್ಧಿ ಯೋಜನಾಽಕಾರಿಯವರಿಂದ ಕರೆಬಂತು.ಈ ಹಿನ್ನೆಲೆಯಲ್ಲಿ ಸ್ಥಳೀಯ ಸಮಾಜಸೇವಕ ಕಾರ್ಯಕರ್ತರ ಸಹಾಯವನ್ನು ಪಡೆದುಕೊಂಡು, ಮಹಿಳೆಯ ಸಮುದಾಯದ ಧರ್ಮಗುರುಗಳನ್ನು ಸಂಪರ್ಕ ಮಾಡಿ, ಬೊಳುವಾರು ಪರಿಸರದ ಗುರಿಕಾರ ಜಾಯೆಲ್ ಕುಟಿನ್ಹಾರನ್ನು ಸಂಪರ್ಕ ಮಾಡಿ, ಮಹಿಳಾ ಪೊಲೀಸ್ ಠಾಣೆ, ಟ್ರಾಫಿಕ್ ಠಾಣೆ ಮತ್ತು ನಗರ ಠಾಣೆಯ ಸಹಕಾರದೊಂದಿಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಮಾನಸಿಕ ರೋಗಿಗಳ ಚಿಕಿತ್ಸಾ ವಿಭಾಗಕ್ಕೆ ಕಳಿಸಿಕೊಡಲಾಗಿದೆ. ಬೆಳಗ್ಗಿನಿಂದ ಊಟ-ಉಪಹಾರವನ್ನು ಬಿಟ್ಟು ಅಽಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಅವರಿಗೆ ಕೃತಜ್ಞತೆಗಳು-
ಪುತ್ತೂರು ಉಮೇಶ್ ನಾಯಕ್, ಮಾಜಿ ಅಧ್ಯಕ್ಷರು, ರೋಟರಿ ಯುವ
ಈ ಮಹಿಳೆಯು ಬೊಳುವಾರು ಪರಿಸರದಲ್ಲಿ ಅತಿರೇಕತನದ ವರ್ತನೆ ತೋರುತ್ತಿದ್ದು, ಸಾರ್ವಜನಿಕರಿಗೆ ಬಹಳ ತೊಂದರೆ ಆಗಿತ್ತು. ಈ ಬಗ್ಗೆ ಮಹಿಳೆಯ ಕುಟುಂಬಸ್ಥರಿಗೆ ಮಾಹಿತಿ ನೀಡುವ ಕೆಲಸ ಮಾಡಿದ್ದೆವು. ಆದರೆ ಕುಟುಂಬಸ್ಥರಿಂದ ಯಾವುದೇ ರೀತಿಯ ಸ್ಪಂದನೆ ದೊರೆತಿರಲಿಲ್ಲ. ಹೀಗಾಗಿ ಸಾರ್ವಜನಿಕರೊಂದಿಗೆ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಽಕಾರಿಗಳಿಗೆ ದೂರು ನೀಡಿದ್ದೆವು. ಅಽಕಾರಿಗಳು ಸ್ಪಂದನೆ ನೀಡಿ ಸ್ಥಳಕ್ಕೆ ಬಂದಿದ್ದು, ಪೊಲೀಸರು, ಸಾರ್ವಜನಿಕರ ಸಹಕಾರದೊಂದಿಗೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ಶೀಘ್ರ ಗುಣಮುಖರಾಗಿ ಬರಲಿ ಎಂದು ಆಶಿಸುತ್ತೇವೆ
ಇಸ್ಮಾಯಿಲ್ ಬೊಳುವಾರು, ಅಧ್ಯಕ್ಷರು, ಸ್ನೇಹ ಸಂಗಮ ಆಟೋರಿಕ್ಷಾ ಚಾಲಕ ಮಾಲಕರ ಸಂಘ