ಓದಿನೊಂದಿಗೆ ಕೌಶಲ ರೂಢಿಸಿಕೊಳ್ಳುವುದು ಅವಶ್ಯ: ಶಿವಬಸವ ಚೀನಿವಲರ್
ಪುತ್ತೂರು: ಪದವಿ ಜೀವನ ಮುಗಿದ ಬಳಿಕ ಉದ್ಯೋಗವನ್ನು ಅರಸುವುದು ಡಿಜಿಟಲ್ ಯುಗದಲ್ಲಿ ಸುಲಭದ ವಿಷಯವಾಗಿದೆ. ವಿದ್ಯಾರ್ಥಿಗಳು ಓದಿನ ಜೊತೆ ಜೊತೆಗೆ ಕೌಶಲ್ಯವನ್ನು ಬೆಳೆಸಬೇಕು. ಹೊಸ ಉದ್ಯೋಗವನ್ನು ಅರಸುತ್ತಾ, ಲಭ್ಯವಿರುವ ಹುದ್ದೆಗಳಿಗೆ ಕೂಡಲೇ ಅರ್ಜಿ ಸಲ್ಲಿಸಬೇಕು. ಕಂಪೆನಿಗಳಲ್ಲಿ ಉದ್ಯೋಗವ ಪಡೆದು, ಭವಿಷ್ಯ ಭದ್ರಗೊಳಿಸಬೇಕು ಎಂದು ನ್ಯೂಮೆರೋ ಯೂನೋ ಪಾರ್ಟ್ನರ್ಸ್ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶಿವಬಸವ ಚೀನಿವಲರ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಕಾಲೇಜಿನ ಐಕ್ಯೂಎಸಿ ಘಟಕದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಉತ್ತಮ ಉದ್ಯೋಗಿಯಾಗಲು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಸಂವಹನದ ವಿಧಾನವನ್ನು ಅರಿತುಕೊಳ್ಳುವ ಜೊತೆಗೆ ಸಂದರ್ಶನಗಳನ್ನು ಸಮರ್ಥವಾಗಿ ಎದುರಿಸುವ ಧೈರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನ್ಯೂಮೆರೋ ಯೂನೋ ಪಾರ್ಟ್ನರ್ಸ್ ಸಂಸ್ಥೆಯ ಕೀ ಆಪರೇಷನಲ್ ಮ್ಯಾನೇಜರ್ ಸಂತೋಷ್ ಬಂಗೇರ, ಅಂಬಿಕಾ ಮಹಾವಿದ್ಯಾಲಯ ಐಕ್ಯೂಎಸಿ ಘಟಕದ ಸಂಯೋಜನಾಧಿಕಾರಿ ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸ್ಫೂರ್ತಿ ಅತಿಥಿ ಪರಿಚಯ ಮಾಡಿದರು. ಕೀರ್ತಿ ಸ್ವಾಗತಿಸಿ, ದೀಕ್ಷಾ ನಿರೂಪಿಸಿ, ವಂದಿಸಿದರು.