ಉಪ್ಪಿನಂಗಡಿ: 34 ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಮಠದ ಜೀರ್ಣೋದ್ಧಾರ ಕಾಮಗಾರಿಗಳು ಭರದಿಂದ ನಡೆಯುತ್ತಿದ್ದು, ಈಗಾಗಲೇ 2.23 ಕೋ.ರೂ. ಮೊತ್ತಕ್ಕೂ ಅಧಿಕದ ಕಾಮಗಾರಿಗಳು ನಡೆದಿವೆ. ಇನ್ನು ಕೆಲ ಕಾಮಗಾರಿಗಳು ನಡೆಯಲಿಕ್ಕಿದ್ದು, ಅವೆಲ್ಲಾ ಪೂರ್ಣಗೊಂಡು ಮಾ.31ರಿಂದ ಎ.4ರವರೆಗೆ ಬೃಂದಾವನ ಪುನರ್ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ನಡೆಯಲಿದ್ದು, ಎ.4ರಂದು ಬೆಳಗ್ಗೆ 9.40ರಿಂದ 10.30ರ ಸಮಯದಲ್ಲಿ ನಡೆಯುವ ವೃಷಭ ಲಗ್ನ ಸುಮುಹೂರ್ತದಲ್ಲಿ ನವೀಕರಣಗೊಂಡಿರುವ ಶಿಲಾಮಯ ಗರ್ಭಗೃಹದಲ್ಲಿ ಲಕ್ಷ್ಮಣ ಸಹಿತ ಸೀತಾರಾಮ ದೇವರು, ಮುಖ್ಯಪ್ರಾಣ ದೇವರು ಮತ್ತು ಶ್ರೀ ಗುರುರಾಘವೇಂದ್ರ ಸಾರ್ವಭೌಮರ ಬೃಂದಾವನ ಪ್ರತಿಷ್ಠೆ ಮತ್ತು ಬ್ರಹ್ಮಕಲಾಷಾಭಿಷೇಕ ಮಹೋತ್ಸವ ನಡೆಯಲಿದೆ ಎಂದು ಬ್ರಹ್ಮಕಲಶಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಗೋಪಾಲ ಹೆಗ್ಡೆ ತಿಳಿಸಿದರು.
ಶ್ರೀ ಗುರು ರಾಘವೇಂದ್ರ ಮಠದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 95ಲಕ್ಷ ರೂ. ವೆಚ್ಚದಲ್ಲಿ ರಾಘವೇಂದ್ರ ಮಠ ಮತ್ತು ಮುಖಮಂಟಪದ ಕಾಮಗಾರಿಗಳು ನಡೆದಿದ್ದು, 55 ಲಕ್ಷ ರೂ. ವೆಚ್ಚದಲ್ಲಿ ಅನ್ನಛತ್ರ, 45 ಲಕ್ಷ ರೂ. ವೆಚ್ಚದಲ್ಲಿ ಸಭಾಭವನ, 12 ಲಕ್ಷ ರೂ. ವೆಚ್ಚದಲ್ಲಿ ರಾಜಗೋಪುರ, 16 ಲಕ್ಷ ರೂ. ವೆಚ್ಚದಲ್ಲಿ ಅಡುಗೆ ಕೋಣೆ ಸೇರಿದಂತೆ ಇತರ ಕಾಮಗಾರಿಗಳು ನಡೆದಿವೆ. ಇಲ್ಲಿನ ರಾಜಗೋಪುರವು ತಂಜಾವೂರು ಶೈಲಿಯಲ್ಲಿ ನಿರ್ಮಾಣವಾಗಿದ್ದು, ಸಭಾಭವನಕ್ಕೆ ಗ್ರಾನೈಟ್, ಪೈಟಿಂಗ್ ಸೇರಿದಂತೆ ಇನ್ನಿತರ ಕಾಮಗಾರಿಗಳಿಗಾಗಿ ಇನ್ನೂ 35 ಲಕ್ಷ ರೂ.ಗಳ ಅಗತ್ಯವಿದ್ದು, ಇದಕ್ಕಾಗಿ ಸೇವಾರ್ಥಿ ಭಕ್ತರನ್ನು ಎದುರು ನೋಡುತ್ತಿದ್ದೇವೆ ಎಂದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಅಮೃತ ಹಸ್ತದಲ್ಲಿ ಬ್ರಹ್ಮಕಲಶಾಭಿಷೇಕ ಮಹೋತ್ಸವಗಳು ನೆರವೇರಲಿದೆ. ವೇ.ಮೂ. ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅಲ್ಲದೇ, ಶ್ರೀ ಅಂಬಾಭವಾನಿ ದೇವಿಯ ಆರಾಧನೆಯು ಇಲ್ಲಿ ಸಂಪನ್ನಗೊಳ್ಳಲಿದೆ. ಮಾ.31ರಿಂದ ಬೃಂದಾವನ ಪುನಃ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕದ ಕಾರ್ಯಕ್ರಮಗಳು ನಡೆಯಲಿದ್ದು, ಪ್ರತಿದಿನ ಸುಮಾರು 3ರಿಂದ 5 ಸಾವಿರ ಜನರು ಸೇರುವ ನಿರೀಕ್ಷೆಯಿದ್ದು, ಬ್ರಹ್ಮಕಲಶೋತ್ಸವದ ದಿನ ಸುಮಾರು 10 ಸಾವಿರ ಜನ ಸೇರುವ ನಿರೀಕ್ಷೆಯಿದೆ. ಕಾರ್ಯಕ್ರಮದ ಎಲ್ಲಾ ದಿನಗಳಲ್ಲೂ ಇಲ್ಲಿ ಅನ್ನ ದಾಸೋಹ ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡಲು ಈಗಾಗಲೇ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಎ.1ರಂದು ಹೊರಕಾಣಿಕೆ ಸಮರ್ಪಣೆ ನಡೆಯಲಿದೆ. ಹೊರೆ ಕಾಣಿಕೆಯನ್ನು ಕ್ರೋಢೀಕರಿಸಿಕೊಂಡು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಸ್ಥಾನ ಮತ್ತು ಶಾಂತಿನಗರದ ಶ್ರೀ ವಿಷ್ಣುಮೂರ್ತಿ ದೇವಾಲಯದ ವಠಾರದಿಂದ ಶ್ರೀ ಮಠಕ್ಕೆ ಮೆರವಣಿಗೆಯ ಮೂಲಕ ತರಲಾಗುವುದು ಎಂದರು.
ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಮಿತಿಯ ಅಧ್ಯಕ್ಷ ಬಿ. ಧನ್ಯಕುಮಾರ್ ಮಾತನಾಡಿ, 5 ದಿನಗಳ ಕಾಲವೂ ವೈದಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಭಜನಾ ಸೇವೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿದ್ದು, ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರತಿ ದಿನವೂ ವಿವಿಧ ಮಠಗಳ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಲಿದ್ದಾರೆ. ಎ.4ರಂದು ಮಧ್ಯಾಹ್ನ 12.30ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ಮಂತ್ರಾಲಯ ಮಠದ ಸುಬುಧೇಂದ್ರ ತೀರ್ಥ ಶ್ರೀಪಾದರು ದಿವ್ಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಲಿದ್ದಾರೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಬ್ರಹ್ಮಕಲಶಾಭಿಷೇಕ ಮಹೋತ್ಸವ ಸಮಿತಿಯ ಅಧ್ಯಕ್ಷ ಕೆ. ಹರೀಶ ಉಪಾಧ್ಯಾಯ, ಕೋಶಾಧಿಕಾರಿ ಕೆ. ಉದಯಕುಮಾರ್, ಉಪಾಧ್ಯಕ್ಷರಾದ ಕೆ. ಸದಾನಂದ, ಪ್ರಶಾಂತ್ ಎನ್. ಶಿವಾಜಿನಗರ, ಕಾರ್ಯದರ್ಶಿ ಶ್ರೀನಿಧಿ ಉಪಾಧ್ಯಾಯ, ವಿವಿಧ ಸಮಿತಿಗಳ ವಿದ್ಯಾಧರ ಜೈನ್, ಸ್ವರ್ಣೇಶ್, ಬಿಪಿನ್ ಜಗದೀಶ್, ಶಶಿಧರ ನೆಕ್ಕಿಲಾಡಿ ಉಪಸ್ಥಿತರಿದ್ದರು.