ಕೂವೆಮಠ: ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ಲೆಕ್ಕಪತ್ರ ಮಂಡನೆ, ಅಭಿನಂದನಾ ಸಭೆ

0

ನೆಲ್ಯಾಡಿ: ಬಜತ್ತೂರು ಗ್ರಾಮದ ಒಡ್ಯಮೆ ಕೂವೆಮಠ(ಶಿವತ್ತಮಠ) ಶ್ರೀ ನರಸಿಂಹ ಮಠದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವದ ಲೆಕ್ಕಪತ್ರ ಮಂಡನೆ ಹಾಗೂ ಅಭಿನಂದನಾ ಸಭೆ ಮಾ.24ರಂದು ಕೂವೆಮಠದಲ್ಲಿ ನಡೆಯಿತು.


ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷೆ ವಿಜಯ ಎಂ.ಶೆಟ್ಟಿ ಒಡ್ಯಮೆ ಎಸ್ಟೇಟ್ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ರಾಧಾಕೃಷ್ಣ ಕೆ.ಎಸ್.ಕುವೆಚ್ಚಾರು ಮಾತನಾಡಿ, ಕಾರ್ಯಕರ್ತರ ಶ್ರಮದಿಂದ ಮಠದ ಜೀರ್ಣೋದ್ದಾರ ಕೆಲಸ ನಡೆದು ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಯಾವುದೇ ದುಂದುವೆಚ್ಚ ಮಾಡಿಲ್ಲ. ಶಿವತ್ತಮಠ ಮನೆಯವರಾದ ರುಕ್ಮಣಿ ಮತ್ತು ಅವರ ಮನೆಯವರು ಈ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಊರವರು ತಮಗೆ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವುದರಿಂದ ಯಾವುದೇ ವಿಘ್ನವಿಲ್ಲದೇ ಬ್ರಹ್ಮಕಲಶೋತ್ಸವ ಕಾರ್ಯ ನಡೆದಿದೆ. ಮುಂದೆ ಈ ದೇವಸ್ಥಾನಕ್ಕೆ ಸಂಬಂಧಪಟ್ಟ ಮನೆಯವರು ಪ್ರತಿಯೊಂದು ಆಚರಣೆಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರಬೇಕು. ಇದರಿಂದ ತಮ್ಮ ಅಭಿವೃದ್ಧಿಯೂ ಆಗಲಿದೆ ಎಂದು ಹೇಳಿದರು. ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಸಂಗ್ರಹವಾದ ದೇಣಿಗೆಯಲ್ಲಿ ಸುಮಾರು 5 ಲಕ್ಷ ರೂ.ಉಳಿಕೆಯಾಗಿದ್ದು ಅದನ್ನು ಈ ಮೊದಲೇ ನಿರ್ಣಯಿಸಿದಂತೆ ಗೋಪುರ ನಿರ್ಮಾಣ ಹಾಗೂ ದೇವಸ್ಥಾನಕ್ಕೆ ಬೇಕಾದ ಇತರೇ ವ್ಯವಸ್ಥೆಗೆ ಬಳಕೆ ಮಾಡಲಾಗುವುದು ಎಂದು ಹೇಳಿದರು.


ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ ಅವರು ಅಭಿನಂದನಾ ನುಡಿಗಳನ್ನಾಡಿ, ದೇವಸ್ಥಾನ ನಿರ್ಮಾಣಗೊಂಡಿರುವುದರಿಂದ ಭಕ್ತರಲ್ಲಿ ಸಾರ್ಥಕ್ಯದ ಭಾವನೆ ಮೂಡಿದೆ. ದೇವರಿಗೆ ಸಲ್ಲುವ ಪೂಜೆ, ಮಹಿಮೆಯ ಜೊತೆಗೆ ಭಕ್ತರ ನಡವಳಿಕೆಯಿಂದ ದೇವರ ಸಾನಿಧ್ಯ ವೃದ್ಧಿಯಾಗಲಿದೆ. ಇಲ್ಲಿ ಆಡಂಬರಕ್ಕೆ ಹೆಚ್ಚು ಖರ್ಚು ಮಾಡದೇ ಬ್ರಹ್ಮಕಲಶೋತ್ಸವ ನಡೆದಿದೆ. ಮುಂದೆ ಕ್ಷೇತ್ರದ ಅಭಿವೃದ್ಧಿ, ಸೇವಾ ಕಾರ್ಯಗಳು ನಿರಂತರವಾಗಿ ನಡೆದುಕೊಂಡು ಬರಲಿ ಎಂದರು.


ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷ ಗುರುಪ್ರಸಾದ ರಾಮಕುಂಜ ಅವರು ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಉಪಾಧ್ಯಕ್ಷ ಮಹೇಂದ್ರ ವರ್ಮ ಮೇಲೂರುಪಟ್ಟೆ, ಪ್ರಧಾನ ಕಾರ್ಯದರ್ಶಿ ರಂಜಿತ್ ಜೈನ್ ಮೇಲೂರುಪಟ್ಟೆ, ಕಾರ್ಯದರ್ಶಿ ಚಂದ್ರಶೇಖರ ಶಿವತ್ತಮಠ, ಜೊತೆ ಕಾರ್ಯದರ್ಶಿ ಆನಂದ ಮೇಲೂರು, ಸದಸ್ಯರಾದ ಅಣ್ಣು ಗೌಡ ಶಿವತ್ತಮಠ, ಜನಾರ್ದನ ಕದ್ರ, ಪ್ರಶಾಂತ್ ಆರ್.ಕೆ., ಶಿವಣ್ಣ ಗೌಡ ಬಿದಿರಾಡಿ, ಪದ್ಮಯ್ಯ ಗೌಡ ಡೆಂಬಲೆ, ಸುರೇಶ್ ಬಿದಿರಾಡಿ, ಇಂಜಿನಿಯರ್ ಸುಧಾಕರ ಮತ್ತಿತರರು ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಮಹೇಶ್ ಪಾತೃಮಾಡಿ ಸ್ವಾಗತಿಸಿ, ನಿರೂಪಿಸಿದರು.

5.12 ಲಕ್ಷ ರೂ.ಉಳಿಕೆ:
ಕೋಶಾಧಿಕಾರಿ ಶಾಂತಿಪ್ರಕಾಶ್ ಬರ್ನಜಾಲು ಅವರು ಮಾತನಾಡಿ, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಸುಮಾರು 790 ಮಂದಿ ಶ್ರಮದಾನ ಮಾಡಿದ್ದಾರೆ. ಹಲವು ಮಂದಿ ವಸ್ತುರೂಪದಲ್ಲಿ ದೇಣಿಗೆ ನೀಡಿದ್ದಾರೆ. ಮರ ದಾನ ಮಾಡಿದ್ದಾರೆ. ಬ್ರಹ್ಮಕಲಶೋತ್ಸವಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ, ಸೌತಡ್ಕ, ಕುಕ್ಕೆ ಸುಬ್ರಹ್ಮಣ್ಯದಿಂದ ತರಕಾರಿ ಹಾಗೂ ಇತರೇ ಸಾಮಾಗ್ರಿಗಳು ದೊರೆತಿವೆ. ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಸಂಗ್ರಹವಾದ ದೇಣಿಗೆಯಲ್ಲಿ 5,12,404 ರೂ.ಉಳಿಕೆಯಾಗಿದೆ ಎಂದು ಹೇಳಿದರು. ಅಭಿನಂದನಾ ಸಭೆಯ ಬಳಿಕ ಶ್ರೀ ನರಸಿಂಹ ದೇವರಿಗೆ ಪೂಜೆ ಹಾಗೂ ಶ್ರೀ ರಕ್ತೇಶ್ವರಿಗೆ ತಂಬಿಲ ಸೇವೆ ನಡೆಯಿತು. ನಾರಾಯಣ ಬಡೆಕ್ಕಿಲ್ಲಾಯ ಅವರು ಪೂಜಾ ವಿಧಿವಿಧಾನ ನೆರವೇರಿಸಿದರು.

ಸಮಿತಿಯವರಿಗೆ ಗೌರವಾರ್ಪಣೆ:
ಶಿವತ್ತಮಠ ರುಕ್ಮಿಣಿ ಮತ್ತು ಮನೆಯವರು ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳಿಗೆ ಶಾಲು,ಸ್ಮರಣಿಕೆ ನೀಡಿ ಗೌರವಾರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here