ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮ

0

ಪುತ್ತೂರು: ನೆಲ್ಯಾಡಿಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನೇರ್ಲ, ಇಚಲಂಪಾಡಿ ಇಲ್ಲಿ ಆಯೋಜಿಸಲಾಗಿದ್ದು ಈ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ನೆರವೇರಿತು.

ಇಚಲಂಪಾಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಶುಭಕರ ಹೆಗ್ಗಡೆ ಜ್ಯೋತಿ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ನಗರ ಜೀವನದ ಪರಿಣಾಮವಾಗಿ ಸಾಮಾಜಿಕ ಸಹಭಾಗಿತ್ವದ ಕೊರತೆಯಿಂದ ಸಹಬಾಳ್ವೆಯ ಬದುಕು ಎನ್ನುವುದು ಗ್ರಾಮೀಣ ಪ್ರದೇಶದಿಂದಲೂ ಕೂಡ ಮರೀಚಿಕೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಹಾಗಾಗಿ ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಸೇವೆಯ ಮನೋಭಾವ ಮತ್ತು ಸಹಬಾಳ್ವೆಯ ಜೀವನಶೈಲಿಯನ್ನು ಮರಳಿ ರೂಪಿಸಿಕೊಳ್ಳಲು ಈ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದ ಅನುಭವವು ಮಹತ್ವದ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಏಳು ದಿನಗಳು ಕೂಡ ಎಲ್ಲಾ ಶಿಬಿರಾರ್ಥಿಗಳು ಕ್ರಿಯಾಶೀಲವಾಗಿ ಪಾಲ್ಗೊಳ್ಳುವ ಮೂಲಕ ಉತ್ತಮ ಪರಿವರ್ತನೆ ಹೊಂದಲು ಇದೊಂದು ಅವಕಾಶವೆಂದು ಭಾವಿಸಿಕೊಳ್ಳುವುದರೊಂದಿಗೆ ಶಿಬಿರದ ಯಶಸ್ಸು ಸಾಧ್ಯ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಜಯಕುಮಾರ್ ಶೆಟ್ಟಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಅನುಭವವು ಸಾಮಾಜಿಕ ಜೀವನದ ತೊಡಗುವಿಕೆಯ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಧನಾತ್ಮಕ ಸಂಚಲನವನ್ನು ಉಂಟುಮಾಡುತ್ತದೆ. ಹಾರೆ, ಪಿಕಾಸು ಹಿಡಿದು ಕೆಲಸ ಮಾಡಿದ ಅನುಭವವೇ ಇಲ್ಲದ ಅನೇಕ ವಿದ್ಯಾರ್ಥಿಗಳು ಇಂತಹ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಶ್ರಮದಾನದ ಮಹತ್ವವನ್ನು ಅನುಭವದ ಮೂಲಕ ಅರಿತುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಗ್ರಾಮದಲ್ಲಿ ಶಾಲೆಯ ಭೌತಿಕ ವಾತಾವರಣದ ಬದಲಾವಣೆಯೊಂದಿಗೆ ಆ ಗ್ರಾಮದವರ ಶಾಲೆಯವರ ಹೃದಯವನ್ನು ಗೆಲ್ಲುತ್ತಾರೆ. ಹಾಗಾಗಿ ಇಲ್ಲಿ ನಡೆಯುವ ಪ್ರಕ್ರಿಯೆ ಎಂದರೆ “ಶಾಲೆಯ ಅಂಗಳವನ್ನು ವಿಸ್ತರಣೆ ಮಾಡುವುದರೊಂದಿಗೆ ಎಲ್ಲರ ಹೃದಯವನ್ನು ಗೆದ್ದು ಹೃದಯಂಗಣವನ್ನು ವಿಸ್ತರಣೆ ಮಾಡುತ್ತಾರೆ” ಇದು ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವದ ಪ್ರತಿಫಲ. ಕಾಲೇಜಿನ ನಾಲ್ಕು ಗೋಡೆಗಳ ಮಧ್ಯ ಅಷ್ಟೇ ಅಲ್ಲದೆ ಗ್ರಾಮಕ್ಕೆ ಬಂದು ಆ ಗ್ರಾಮದ ಶಾಲೆಯ ಅಭಿವೃದ್ಧಿಯಲ್ಲಿ ತಮ್ಮ ಶ್ರಮದಾನದ ಹಂಚಿಕೆಯಿಂದ ಗ್ರಾಮೀಣ ಪ್ರದೇಶದ ಸಾಮಾಜಿಕ ಸೇವೆಯ ಭಾಗವಾಗುವುದು ವಿದ್ಯಾರ್ಥಿ ಜೀವನದ ಶ್ರೇಷ್ಠ ಕ್ಷಣಗಳಾಗಿವೆ ಎಂದರು.

ಮತ್ತೊರ್ವ ಮುಖ್ಯ ಅತಿಥಿ ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ನ ಅಧ್ಯಕ್ಷ ಹಾಗೂ ಈ ಶಿಬಿರದ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷ ಭಾಸ್ಕರ ಎಸ್. ಗೌಡ ಈ ಶಾಲೆಯು ಅಭಿವೃದ್ಧಿ ಹೊಂದುತ್ತಿರುವ ಶಾಲೆ. ಈ ಅಭಿವೃದ್ಧಿಗೆ ಶಾಲೆಯ ಆಡಳಿತ ಮಂಡಳಿಯ ಜೊತೆ ಗ್ರಾಮದ ಎಲ್ಲರ ಸಹಕಾರ ಸದಾ ಜೊತೆಗಿರುತ್ತದೆ. ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಈ ಶಿಬಿರದ ಮೂಲಕ ಈ ಶಾಲೆಯ ಪರಿಸರದ ಉತ್ತಮ ಅಭಿವೃದ್ಧಿಗೆ ಅವಕಾಶ ದೊರೆತಂತಾಗಿದೆ, ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿ ಈ ಶಿಬಿರದ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷನಾಗಿ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ಏಳು ದಿನಗಳು ಕೂಡ ಎಲ್ಲರೊಂದಿಗೆ ಇದ್ದು ಸಹಕರಿಸಿ ಯಾವುದೇ ತೊಂದರೆಗಳಾಗದೆ ಶಿಬಿರದ ಯಶಸ್ವಿಗೆ ನಾವೆಲ್ಲರೂ ಜೊತೆಯಾಗಿರೋಣ ಎಂದರು.

ಮುಖ್ಯ ಅತಿಥಿ ವಿಶ್ವವಿದ್ಯಾನಿಲಯ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಉಷಾ ಅಂಚನ್ ಮಾತನಾಡಿ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ಅನೇಕ ಕಾರ್ಯಕ್ರಮಗಳಲ್ಲಿ ಜೊತೆಯಾಗುವುದರೊಂದಿಗೆ ನಿರಂತರ ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ಈ ವಾರ್ಷಿಕ ವಿಶೇಷ ಶಿಬಿರವು ತುಂಬಾ ಮಹತ್ವದ್ದಾಗಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಸರ್ವ ರೀತಿಯ ಸವಲತ್ತುಗಳೊಂದಿಗೆ ಎನ್ಎಸ್ಎಸ್ ನಂತಹ ಸಾಮಾಜಿಕ ಸೇವಾ ಮನೋಭಾವ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಶ್ರೇಷ್ಠ ಮನೋಧರ್ಮವನ್ನು ಹೊಂದುವುದು ಮಹತ್ವದ್ದಾಗಿದೆ. ಭಾರತೀಯ ಸಂಸ್ಕೃತಿಯ ಮಹತ್ವದ ಭಾಗಗಳಲ್ಲಿ ಆತಿಥ್ಯವು ಒಂದು ಶ್ರೇಷ್ಠವಾದ ಸಂಸ್ಕಾರ. ಇಂದಿನ ಯುವ ಸಮುದಾಯಗಳಲ್ಲಿ ಈ ರೀತಿಯ ನಡವಳಿಕೆಗಳನ್ನು ಜೀವಂತವಾಗಿಡಲು ಈ ಶಿಬಿರವು ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಸಂತ್ ಬಿಜೇರು ಎಲ್ಲಾ ವಿದ್ಯಾರ್ಥಿಗಳಲ್ಲಿ ಹಾಗೂ ನಮ್ಮೆಲ್ಲರಲ್ಲಿ ಈ ಸಾಮೂಹಿಕ ಕಾರ್ಯ ಚಟುವಟಿಕೆಗಳ ಮೂಲಕ ಧನಾತ್ಮಕವಾದ ಪರಿವರ್ತನೆ ವಿಸ್ತರಿಸಲಿ ಎಂದರು. ಶಾಲೆಯ ಮುಖ್ಯ ಶಿಕ್ಷಕಿ ಜಯಶ್ರೀ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ಸಂಯೋಜಕ ಡಾ. ಸುರೇಶ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ, ಕಳೆದ ಒಂದು ತಿಂಗಳಿನಿಂದ ಶಿಬಿರಕ್ಕೆ ಈ ಶಾಲೆಯ ಆಯ್ಕೆಯಿಂದ ಉದ್ಘಾಟನೆ ಪ್ರಕ್ರಿಯೆಯವರೆಗೆ ಈ ಶಾಲೆಯ ಆಡಳಿತ ಮಂಡಳಿ, ಶಿಬಿರದ ಸ್ವಾಗತ ಸಮಿತಿ, ಕಾಲೇಜಿನ ಉಪನ್ಯಾಸಕರು ಹಾಗೂ ಶಿಬಿರಾರ್ಥಿಗಳ ಪರಿಶ್ರಮ ಬಹಳ ಇದೆ‌. ಎಲ್ಲರ ಸಹಕಾರದಿಂದ ಮಾತ್ರ ಈ ಹಾದಿ ಸುಗಮಗೊಂಡಿದೆ. ಸಹಕಾರ ನೀಡಿದ ಶಾಲೆಯ ಆಡಳಿತ ಮಂಡಳಿ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರಿಗೂ ಹಾಗೂ ಸಮಸ್ತ ಗ್ರಾಮಸ್ಥರಿಗೆ ಕೃತಜ್ಞತೆಗಳನ್ನು ತಿಳಿಸುತ್ತಾ ವಿಶ್ವವಿದ್ಯಾನಿಲಯ ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಈ ಶಿಬಿರವು ಮಹತ್ವದ ಪಾತ್ರವಹಿಸುತ್ತದೆ. ಗ್ರಾಮೀಣ ಭಾಗದಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಈ ಭಾಗದ ಎಲ್ಲಾ ಗ್ರಾಮಗಳು, ಸಂಘ ಸಂಸ್ಥೆಗಳು, ವಿದ್ಯಾ ಸಂಸ್ಥೆಗಳು ಸಹಕಾರ ನೀಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದರು.

ರಾಷ್ಟ್ರೀಯ ಸೇವಾ ಯೋಜನಾ ಘಟಕದ ಶಿಬಿರಾಧಿಕಾ ಶ್ರುತಿ ಸ್ವಾಗತಿಸಿ,ಸಹ ಶಿಬಿರಾಧಿಕಾರಿ ಚಂದ್ರಕಲಾ ಬಿ ವಂದಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ದಿವ್ಯಶ್ರೀ ಜಿ. ಹಾಗೂ ಪಾವನ ರೈಕಾರ್ಯಕ್ರಮವನ್ನು ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ, ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಶಿಬಿರಾರ್ಥಿಗಳು ಹಾಗೂ ಪ್ರಾಥಮಿಕ ಶಾಲೆಯ ಎಲ್ಲಾ ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷೆ ನಂದಕುಮಾರಿ, ಸದಸ್ಯರಾದ ಮಮತಾ, ಅಕ್ಷತಾ, ವಾಣಿ ಹಾಗೂ ಶಾಲೆಯ ಅಭಿವೃದ್ಧಿ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here