ದ.ಕ.ಅಭ್ಯರ್ಥಿಯನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸೋಣ-ರಾಜೇಶ್ ನಾಯಕ್
ಧರ್ಮ-ಅಧರ್ಮದ ನಡುವಿನ ಚುನಾವಣೆ-ಪೂಜಾ ಪೈ
ವಿಟ್ಲ:ವಿಟ್ಲ ಪಡ್ನೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ದ.ಕ.ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ|ಬ್ರಿಜೇಶ್ ಚೌಟ ಅವರ ಅಧ್ಯಕ್ಷತೆಯಲ್ಲಿ ಕೆಲಿಂಜ ಶ್ರೀನಿಕೇತನ ಸಭಾಭವನದಲ್ಲಿ ನಡೆಯಿತು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತುರವರು ಮಾತನಾಡಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಅಧಿಕ ಸ್ಥಾನವನ್ನು ಪಡೆದು ಆಡಳಿತದ ಚುಕ್ಕಾಣಿ ಹಿಡಿಯಬೇಕು ಎಂಬ ಮೋದಿಯವರ ಕನಸಿಗೆ ಪೂರಕವಾಗಿ ದ.ಕ.ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿಕೊಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ದ.ಕ.ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ|ಬ್ರಿಜೇಶ್ ಚೌಟ ಮಾತನಾಡಿ, ಯುವ ನಾಯಕತ್ವಕ್ಕೆ ಅವಕಾಶ ನೀಡಿದ ಹಿರಿಯರ ಮನಸ್ಸಿಗೆ ಯಾವುದೇ ರೀತಿಯಲ್ಲಿ ನೋವಾಗದಂತೆ, ಕಾರ್ಯಕರ್ತರ ಭಾವನೆಗಳಿಗೆ ನೋವಾಗದಂತೆ ಜಿಲ್ಲೆಯ ಯಶಸ್ಸಿಗೆ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಾರ್ಯಕರ್ತನೇ ಆಧಾರವಾಗಿದ್ದು, ವಿಚಾರಧಾರೆಯ ಮೂಲಕ ಮತದಾರರ ಅಭಿಪ್ರಾಯದೊಂದಿಗೆ ಹಿಂದುತ್ವದ ಆಧಾರದಲ್ಲಿ ಅಭಿವೃದ್ಧಿ ಮಾಡಬಹುದು.ಆರ್ಥಿಕ ಶಿಸ್ತು ಕಾಪಾಡುವ ಮಹತ್ತರವಾದ ಸಾಧನೆಯನ್ನು ಮಾಡಿದ್ದಲ್ಲದೆ, ಭಾರತವನ್ನು ವಿಶ್ವದ ನಂಬರ್ ವನ್ ದೇಶವಾಗಿ ಮಾರ್ಪಾಡು ಮಾಡಿದ ಹೆಗ್ಗಳಿಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು.ರಾಷ್ಟ್ರದ ಭವಿಷ್ಯದ ನಿರ್ಮಾಣಕ್ಕಾಗಿ ಮತ್ತೊಮ್ಮೆ ಬಿಜೆಪಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದ ಅವರು,ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ಮತದಾನ ಮಾಡುವಂತೆ ಪ್ರೇರೇಪಿಸಿ, ಮತದಾರರನ್ನು ಬಿಜೆಪಿ ಕಾರ್ಯಕರ್ತರಾಗಿ ಪರಿವರ್ತನೆ ಮಾಡಿ ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ ಮಾತನಾಡಿ, ಧರ್ಮ ಮತ್ತು ಅಧರ್ಮದ ನಡುವೆ ನಡೆಯುವ ಚುನಾವಣೆ ಇದಾಗಿದ್ದು, ಮೋದಿಯವರ ಆಡಳಿತದ ಅವಧಿಯಲ್ಲಿ ಅನುಷ್ಠಾನವಾದ ಯೋಜನೆಗಳನ್ನು ಕಾರ್ಯಕರ್ತರು ಪ್ರತಿಮನೆಗೆ ತೆರಳಿ ನೆನಪು ಮಾಡುವ ಕಾರ್ಯ ಮಾಡಬೇಕಾಗಿದೆ ಎಂದು ತಿಳಿಸಿದರು.
ಕ್ಷೇತ್ರ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ವಿಧಾನ ಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ,ಬಿಜೆಪಿ ಪ್ರಮುಖರಾದ ಜಗದೀಶ್ ಶೇಣವ, ಹರಿಕೃಷ್ಣ ಬಂಟ್ವಾಳ, ಸಂದೇಶ್ ಶೆಟ್ಟಿ ಅರೆಬೆಟ್ಟು, ರಾಮ್‌ದಾಸ್ ಬಂಟ್ವಾಳ, ದಿನೇಶ್ ಅಮ್ಟೂರು, ದೇವಪ್ಪ ಪೂಜಾರಿ, ವಿಕಾಸ್ ಪುತ್ತೂರು, ಮೋನಪ್ಪ ದೇವಶ್ಯ ಜಯಂತ್, ಸುಜಾತಸುರೇಶ್,ಅರವಿಂದ ರೈ ಉಪಸ್ಥಿತರಿದ್ದರು.ಸನತ್ ಕುಮಾರ್ ರೈ ಸ್ವಾಗತಿಸಿ, ಡೊಂಬಯ್ಯ ಅರಳ ಕಾರ್ಯಕ್ರಮ ನಿರೂಪಿಸಿದರು.