ಭಾವನಾತ್ಮಕ ಕಾರ್ಯಕ್ರಮ-ದೇವಸ್ಥಾನದ ವತಿಯಿಂದ ಆಯೋಜನೆ
ರಾಮಕುಂಜ: ಕೊಯಿಲ-ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವದ ಸಂದರ್ಭ ಮಾ.31ರಂದು ನಡೆಯುವ ದರ್ಶನ ಬಲಿಯಂದು ತವರು ಲಕ್ಷ್ಮೀಯವರಿಗೆ ಗೌರವಾರ್ಪಣೆ ಎಂಬ ಭಾವನಾತ್ಮಕವಾದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷರೂ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರೂ ಆಗಿರುವ ಯದುಶ್ರೀ ಆನೆಗುಂಡಿ ಅವರ ಕಲ್ಪನೆಯಲ್ಲಿ ಈ ಕಾರ್ಯಕ್ರಮ ಮೂಡಿಬರಲಿದೆ. ಕಳೆದ ಮೂರು ವರ್ಷ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಯದುಶ್ರೀ ಆನೆಗುಂಡಿ ಅವರು ದೇವಸ್ಥಾನದ ಅಭಿವೃದ್ಧಿಯಲ್ಲಿ ಹಗಲಿರುಳು ತೊಡಗಿಕೊಂಡಿದ್ದಾರೆ. ’ನಮ್ಮ ದೇವಸ್ಥಾನ-ನಮ್ಮ ಗ್ರಾಮ’ ಯೋಜನೆಯಡಿ ಸ್ವಾಭಿಮಾನದ ಸಭಾಭವನ, ಕೊಯಿಲ ಗ್ರಾಮದಿಂದ ಹೊರಗಿನ ಗ್ರಾಮಕ್ಕೆ ಮದುವೆ ಮಾಡಿಕೊಟ್ಟವರನ್ನು ಸ್ವಾಗತಿಸುವ ’ನಮ್ಮ ಧರ್ಮ-ನಮ್ಮ ದೇಶ’, ಮನೆ ಮನೆಗೆ ಸಂಸ್ಕಾರ-ಸಂಸ್ಕೃತಿ ಎಂಬ ಕಲ್ಪನೆಯಡಿ ಪ್ರತಿ ಮನೆಗೆ ಏಕಾರತಿ, ತಟ್ಟೆ, ಘಂಟಾಮಣಿ, ಉತ್ತರಣೆ, ಕೌಳಿಗೆ, ಚಮಕ ನೀಡುವ ಮೂಲಕ ಮನೆ ಮನೆಗಳಲ್ಲಿ ತುಳಸಿಪೂಜೆ, ಮಕ್ಕಳಿಂದ ಪುಸ್ತಕ ಪೂಜೆ, ನಮ್ಮ ದೇವಸ್ಥಾನ-ನಮ್ಮ ವಿದ್ಯಾರ್ಥಿಗಳು ಯೋಜನೆಯಡಿ ಮಕ್ಕಳು ಧಾರ್ಮಿಕತೆಯಲ್ಲಿ ತೊಡಗಿಕೊಳ್ಳುವಂತೆ ಪ್ರೇರಣೆ, ಬೈಲುವಾರು ಸಮಿತಿ ಮಾಡಿ ಪ್ರತಿ ಬೈಲಲ್ಲಿ ಏಕ ಕಾಲದಲ್ಲಿ ಸಾಮೂಹಿಕ ಭಜನೆ ಮೂಲಕ ಸಾಮರಸ್ಯಕ್ಕಾಗಿ ಭಜನೆ ಸಹಿತ ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ಗ್ರಾಮದ ಜನರನ್ನು ಒಟ್ಟುಸೇರಿಸಿ ದೇವಸ್ಥಾನದೊಂದಿಗೆ ಬೆಸೆಯುವಂತೆ ಮಾಡಿದ್ದಾರೆ. ಇದೀಗ ಗ್ರಾಮದಿಂದ ಬೇರೆ ಊರಿಗೆ ಮದುವೆ ಮಾಡಿಕೊಟ್ಟಿರುವ ಹೆಣ್ಮಕ್ಕಳೆಲ್ಲರನ್ನೂ ಒಟ್ಟು ಸೇರಿಸಿ ಅವರಿಗೆ ದೇವರ ಪ್ರಸಾದ ನೀಡಿ ಗೌರವಾರ್ಪಣೆ ಕಾರ್ಯಕ್ರಮ ಆಯೋಜಿಸುವ ಮೂಲಕ ಬಾಲ್ಯ, ಯೌವನದಲ್ಲಿ ಜಾತ್ರೆಯ ಸಮಯದಲ್ಲಿ ನಕ್ಕು ನಲಿದಾಡಿ ಖುಷಿಪಟ್ಟ ಸಂಭ್ರಮವನ್ನು ಮತ್ತೆ ನೆನಪಿಸಿಲು ಮುಂದಾಗಿದ್ದಾರೆ. ಹೆಣ್ಮಕ್ಕಳು ಮದುವೆಯಾಗಿ ಬೇರೆ ಊರಿಗೆ ಹೋದರೂ ಅವರಿಗೆ ತಮ್ಮ ಮನೆ, ಕುಟುಂಬ, ಊರಿನ ಮೇಲೆ ಎಲ್ಲಿಲ್ಲದ ಪ್ರೀತಿ ಇರುತ್ತದೆ. ಮದುವೆಯಾಗಿ ಪರವೂರು ಸೇರಿದರೂ ಜಾತ್ರೆಗೆ ತಪ್ಪದೇ ಊರಿಗೆ ಬರುವ ಅದೆಷ್ಟೋ ಹೆಣ್ಮಕ್ಕಳಿದ್ದಾರೆ. ಅವರೆಲ್ಲರನ್ನೂ ಗುರುತಿಸಿ ಗೌರವಿಸುವುದರಿಂದ ಅವರಿಗೂ ತಮ್ಮೂರಿನ ಮೇಲಿನ ಪ್ರೀತಿ ಮತ್ತಷ್ಟೂ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಅಪರೂಪವೆಂಬಂತೆ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ಗೌರವಿಸಲು ಮುಂದಾಗಿರುವ ಉತ್ಸವ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ಹಾಗೂ ಪದಾಧಿಕಾರಿಗಳ ಹಾಗೂ ಊರವರ ಶ್ರಮವನ್ನೂ ಮೆಚ್ಚಲೇ ಬೇಕಾಗಿದೆ. ಇದೊಂದು ಮಾದರಿ ಕಾರ್ಯಕ್ರಮವೂ ಆಗಲಿದೆ ಎಂದ ಅಭಿಪ್ರಾಯ ಕೇಳಿಬಂದಿದೆ.
ಭಾವನಾತ್ಮಕ ಕಾರ್ಯಕ್ರಮ:
ಊರಿನಿಂದ ಮದುವೆಯಾಗಿ ಹೋಗಿರುವ ಹೆಣ್ಮಕ್ಕಳು ಊರಿನ ದೇವಸ್ಥಾನದ ಮೇಲೆ ಅಭಿಮಾನ, ಭಾವನಾತ್ಮಕ ಸಂಬಂಧ ಇಟ್ಟುಕೊಂಡಿರುತ್ತಾರೆ. ತನ್ನ ಪತಿ ಹಾಗೂ ಸಂಬಂಧಿಕರಿಗೆ ದೇವಸ್ಥಾನವನ್ನು ಅವರೇ ಪರಿಚಯಿಸಿರುತ್ತಾರೆ. ಮದುವೆಯಾಗಿ ಹೋಗಿರುವ ಹೆಣ್ಮಕ್ಕಳನ್ನು ಗುರುತಿಸುವ ನಿಟ್ಟಿನಲ್ಲಿ ತವರು ಲಕ್ಷ್ಮೀಯರಿಗೆ ಗೌರವಾರ್ಪಣೆ ಎಂಬ ಭಾವನಾತ್ಮಕ ಕಾರ್ಯಕ್ರಮ ಆಯೋಜಿಸಲಾಗಿದೆ.
-ಯದುಶ್ರೀ ಆನೆಗುಂಡಿ -ಅಧ್ಯಕ್ಷರು, ಉತ್ಸವ ಸಮಿತಿ