24/7 ನೀರಿನ ಭರವಸೆ- ಬೋರ್‌ವೆಲ್ ಸಂಪರ್ಕ ಕಡಿತ – ಜಲಸಿರಿ ಯೋಜನೆಯಿಂದ ಜನರ ಜೀವನದಲ್ಲಿ ಚೆಲ್ಲಾಟ – ಇಬ್ರಾಹಿಂ ಗೋಳಿಕಟ್ಟೆ ಆರೋಪ

0

ಪುತ್ತೂರು: ಜಲಸಿರಿ ಯೋಜನೆಯ ಮೂಲಕ 24/7 ಕುಡಿಯುವ ನೀರು ಕೊಡುತ್ತೇವೆಂದು ಈಗಿರುವ ಕೊಳವೆ ಬಾವಿ ಸಂಪರ್ಕವನ್ನು ಕಡಿತಗೊಳಿಸಿ ಕೊನೆಗೆ ಜಲಸಿರಿಯ ನೀರು ಇಲ್ಲ, ಕೊಳವೆ ಬಾವಿಯ ನೀರು ಸರಬರಾಜು ಮಾಡದೆ ನಗರಸಭೆಯ ಜಲಸಿರಿ ಯೋಜನೆ ಜನರ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ನಾಗರಿಕ ಅಭಿವೃದ್ಧಿ ಸಮಿತಿ ಪುತ್ತೂರು ಇದರ ಅಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆಯವರು ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದ್ದಾರೆ.


ಜಲರಿಸಿ ಯೋಜನೆ ಮನೆ ಮನೆಗೆ 24 ಗಂಟೆ ನೀರನ್ನು ಪೂರೈಸುವ ಕುರಿತು ಆಶ್ವಾಸನೆ ನೀಡಿ ಈಗ ವಾರಕ್ಕೆ ಮೂರು ದಿನ ಕೇವಲ ಎರಡು ಗಂಟೆ ನೀರು ಬಿಡುವ ಹಂತಕ್ಕೆ ಬಂದು ತಲುಪಿದೆ. ಉಪ್ಪಿನಂಗಡಿ ಡ್ಯಾಮ್‌ನಲ್ಲಿ ಬೇಕಾದಷ್ಟು ನೀರು ಇದ್ದರೂ ಕೂಡಾ ಜನರಿಗೆ ನೀರು ತಲುಪುತ್ತಿಲ್ಲ. ಜಲರಿಸಿ ಯೋಜನೆ ವಿಫಲವಾಗಿದೆ ಎಂದ ಅವರು ನಗರಭೆಯಲ್ಲಿ 11ಸಾವಿರಕ್ಕಿಂತ ಮಿಕ್ಕಿ ಮನೆಗಳಿವೆ. ಕಳೆದ 2 ವರ್ಷದಲ್ಲಿ ಕೇವಲ 9 ಸಾವಿರ ಮನೆಗಳಿಗೆ ಮಾತ್ರ ನೀರಿನ ಸಂಪರ್ಕ ಆಗಿದೆ. ಹಲವು ಕಡೆ ಹಳೆಯ ಪಿವಿಸಿ ಪೈಪ್‌ಗೆ ಜಲಸಿರಿ ಪೈಪ್ ಜೋಡಣೆ ಮಾಡಿದ್ದು ಅಲ್ಲಲ್ಲಿ ನೀರು ಸೋರಿಕೆಯಾಗುತ್ತಿದೆ. ಕೊಳವೆ ಬಾವಿಗಳಿಂದ ಹಿಂದೆ ಸಮರ್ಪಕವಾಗಿ ನಮಗೆ ಕುಡಿಯುವ ನೀರು ಸರಬರಾಜು ಆಗುತ್ತಿತ್ತು. ಆದರೆ ಜಲಸಿರಿಯ ಯೋಜನೆಯಿಂದ ಸರಿಯಾಗಿ ನೀರು ಬರುವಲ್ಲಿ ಕಾಯದೆ ಕೊಳವೆ ಬಾವಿಯ ನೀರು ಸಂಪರ್ಕವನ್ನು ಕಡಿತಗೊಳಿಸಿ ನಾವು ನೀರಿಗಾಗಿ ಪರಿತಪಿಸುವಂತಾಗಿದೆ ಎಂದ ಅವರು ಇದರ ಜೊತೆಗೆ ನೀರು ಬಾರದಿದ್ದರೂ ನೀರಿನ ಬಿಲ್ ಮಾತ್ರ ಬರುತ್ತಿದೆ. ಅದು ಕೂಡಾ ಹಿಂದಿನ ಬಿಲ್‌ಗಿಂತ ಜಾಸ್ತಿ ಬರುತ್ತಿದೆ ಎಂದು ಆರೋಪಿಸಿದರು.


ಮೀಟರ್ ಹಗರಣ:
ಕುಡಿಯುವ ನೀರಿನ ಸಂಪರ್ಕಕ್ಕೆ ನಾವು ಖರೀದಿಸಿ ಹಾಕಿದ ಹಿತ್ತಾಳೆಯ ಮೀಟರ್ ಅನ್ನು ಯಾವುದೇ ಸೂಚನೆ ನೀಡದೆ ಜಲಸಿರಿ ಯೋಜನೆ ಸಂದರ್ಭ ಕೊಂಡೊಯ್ಯುತ್ತಾರೆ. ಅವರು ಪ್ಲಾಸ್ಟಿಕ್ ಮೀಟರ್ ಅಳವಡಿಸಿದ್ದಾರೆ. ಆದರೆ ನಮ್ಮ ಹಿತ್ತಾಳೆಯ ಮೀಟರ್ ಎಲ್ಲಿಗೆ ಹೋಗುತ್ತಿವೆ ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ. ಎಲ್ಲಾ ಮನೆಗಳಿಂದ ಹಿತ್ತಾಳೆಯ ಮೀಟರ್ ಹೀಗೆ ಕೊಂಡೊಯ್ಯುವುದು ದೊಡ್ಡ ಹಗರಣವಾಗಿದೆ. ಈ ಕುರಿತು ನಾನು ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ ಎಂದು ಇಬ್ರಾಹಿಂ ಗೋಳಿಕಟ್ಟೆ ಹೇಳಿದರು.

ಕೊಳವೆ ಬಾವಿ ಸಂಪರ್ಕ ಕಡಿತಗೊಳಿಸಿಲ್ಲ. ಹಳೆ ಮೀಟರ್ ನಗರಭೆಗೆ ಹ್ಯಾಂಡ್‌ಓವರ್ ಆಗಿದೆ:
ಜಲಸಿರಿ ಯೋಜನೆಯ ಮೂಲಕ ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಯೋಜನೆಯಲ್ಲಿ ಈಗಿರುವ ಕೊಳವೆ ಬಾವಿ ಸಂಪರ್ಕವನ್ನು ಕಡಿತಗೊಳಿಸಿಲ್ಲ. ಕೆಲವು ಕಡೆ ಜಲಸಿರಿಗೆ ಅದರ ಸಂಪರ್ಕ ಜೋಡಣೆ ಮಾಡಲಾಗಿದೆ. ಗೋಳಿಕಟ್ಟೆಯಲ್ಲಿ ನೀರಿನ ಸಮಸ್ಯೆ ಇಲ್ಲ. ಮೆಸ್ಕಾಂ ಸಮಸ್ಯೆ ಇದೆ. ಬೀರಮಲೆಯಲ್ಲಿ ಟ್ಯಾಂಕ್‌ನಿಂದ ಅಲ್ಲಿ ನೀರು ಸರಬರಾಜು ಆಗುತ್ತಿದೆ. ಒಮ್ಮೆ ವಿದ್ಯುತ್ ಸಂಪರ್ಕ ಕಡಿತವಾದರೆ ಮತ್ತೆ ಟ್ಯಾಂಕ್ ತುಂಬ ಬೇಕು ಮತ್ತು ಪೈಪ್‌ನಲ್ಲೂ ನೀರಿನ ಒತ್ತಡ ಹೆಚ್ಚಾಗಬೇಕು. ಹಾಗಾಗಿ ನೀರಿನ ಸಂಪರ್ಕದಲ್ಲಿ ವ್ಯತ್ಯಾಯ ಉಂಟಾಗುತ್ತದೆ. ಹಳೆ ಮೀಟರ್ ತೆರವು ಮಾಡಿ ಹೊಸ ಮೀಟರ್ ಅಳವಡಿಸಲಾಗಿದೆ. ಹಳೆಯ ಮೀಟರ್ ಅನ್ನು ನಗರಭೆಗೆ ಹ್ಯಾಂಡ್ ಓವರ್ ಮಾಡಲಾಗಿದೆ. ನಗರಭೆಯಿಂದ ನಿರ್ಣಯದಂತೆ ಈ ಹಿಂದಿನ ಬಿಲ್ ಮಾದರಿಯಲ್ಲೇ ಮೀಟರ್‌ನಲ್ಲಿ ಬಿಲ್ ನಮೂದು ಆಗುತ್ತದೆ.
ಮಾಂತೇಶ್, ಕಾರ್ಯಾಪಾಲಕ ಇಂಜಿನಿಯರ್ ಜಲಸಿರಿ ಯೋಜನೆ

LEAVE A REPLY

Please enter your comment!
Please enter your name here