ಪುತ್ತೂರು: ಮುಕ್ರಂಪಾಡಿ ಜೇನುಗೂಡು ನಿವಾಸಿ, ರೇವತಿ ರೈ ನಡುಬೈಲುರವರ 70ನೇ ಹುಟ್ಟು ಹಬ್ಬ (ಸಪ್ತತಿ) ಸಮಾರಂಭವು ಮಾ.30ರಂದು ಜೇನುಗೂಡು ನಿವಾಸದಲ್ಲಿ ಅದ್ದೂರಿಯಾಗಿ ನಡೆಯಿತು.
ಸಪ್ತತಿ ಹುಟ್ಟು ಹಬ್ಬ ಸಮಾರಂಭದ ಪ್ರಯುಕ್ತ ಜರಗಿದ ಸಮಾರಂಭದಲ್ಲಿ ರೇವತಿ ರೈಯವರ 70ನೇ ಹುಟ್ಟು ಹಬ್ಬವನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರೇವತಿ ರೈಯವರು ಕೇಕ್ ಕತ್ತರಿಸಿದರು. ಬಳಿಕ ಸರಳ ಸಭಾ ಕಾರ್ಯಕ್ರಮ ನಡೆಯಿತು.
ರೇವತಿ ರೈಯವರ ಸಾಮಾಜಿಕ ಕಾಳಜಿ ಮೆಚ್ಚುಗೆ ತಂದಿದೆ- ಅರುಣ್ ಕುಮಾರ್ಪುತ್ತಿಲ: ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಮಾತನಾಡಿ, ರೇವತಿ ರೈಯವರ ಸಾಮಾಜಿಕ ಬದ್ಧತೆ ಹಾಗೂ ಧಾರ್ಮಿಕ ಪ್ರಜ್ಞೆಯನ್ನು ಕಂಡು ಮನಸ್ಸು ಸಂತಸವನ್ನು ಪಟ್ಟಿದೆ. ರೇವತಿ ರೈಯವರು ನೂರು ವರ್ಷಗಳ ಕಾಲ ಆರೋಗ್ಯವಂತರಾಗಿ ಬಾಳಿ, ಸಮಾಜಕ್ಕೆ ಇವರಿಂದ ಮತ್ತಷ್ಟು ಸೇವೆ ದೊರೆಯಲಿ ಎಂದು ಶುಭಹಾರೈಸಿದರು.
ರೇವತಿ ರೈಯವರ ಬದುಕು ಸಮಾಜಕ್ಕೆ ಪ್ರೇರಣೆಯಾಗಲಿ- ಕಡಮಜಲು ಸುಭಾಷ್ ರೈ: ದೇಶ ಭಕ್ತ ಎನ್.ಎಸ್.ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಸ್ ರೈಯವರು ಮಾತನಾಡಿ, ರೇವತಿ ರೈಯವರ ಬದುಕು ಸಮಾಜಕ್ಕೆ ಪ್ರೇರಣೆಯಾಗಲಿ ಎಂದು ಶುಭಹಾರೈಸಿದರು.
ಕೂಡು ಕುಟುಂಬದಿಂದ ಬೆಳೆದು ಬಂದವರು- ಬೂಡಿಯಾರ್ ರಾಧಾಕೃಷ್ಣ ರೈ: ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ, ರೇವತಿ ರೈಯವರು ನಡುಬೈಲು ಕೂಡು ಕುಟುಂಬದಿಂದ ಬೆಳೆದು ಬಂದವರು, ಅವರು ಮಾಡುತ್ತಿರುವ ಧಾರ್ಮಿಕ ಸೇವಾ ಕಾರ್ಯ ಇನ್ನೂ ಹೆಚ್ಚಾಗಲಿ ಎಂದು ಶುಭಹಾರೈಸಿದರು.
ಶ್ರದ್ಧಾ ಕೇಂದ್ರದ ಮೇಲೆ ಪ್ರೀತಿ- ರವೀಂದ್ರ ಶೆಟ್ಟಿ ನುಳಿಯಾಲು: ಉದ್ಯಮಿ ರವೀಂದ್ರ ಶೆಟ್ಟಿ ನುಳಿಯಾಲುರವರು ಮಾತನಾಡಿ ರೇವತಿ ರೈಯವರು ಶ್ರದ್ಧಾ ಕೇಂದ್ರ ಅಭಿವೃದ್ಧಿಗೆ ನೀಡುತ್ತಿರುವ ಪ್ರೋತ್ಸಾಹವನ್ನು ಕಂಡು ಸಂತೋಷವಾಗಿದೆ ಎಂದು ಹೇಳಿದರು.
ಮುಂದಿನ ಜೀವನ ಸುಖಮಯವಾಗಿರಲಿ- ರವೀಂದ್ರನಾಥ ರೈ ಬಳ್ಳಮಜಲುಗುತ್ತು: ಪುತ್ತೂರು ಎಪಿಎಂಸಿ ಅಡಿಕೆ ವರ್ತಕ ಸಂಘದ ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲುಗುತ್ತುರವರು ಮಾತನಾಡಿ 70ನೇ ಹುಟ್ಟು ಹಬ್ಬವನ್ನು ಆಚರಿಸಿದ ರೇವತಿ ರೈಯವರ ಮುಂದಿನ ಬದುಕು ಸುಖಮಯವಾಗಿರಲಿ ಎಂದರು.
ರೇವತಿಯವರು ನೂರು ವರ್ಷ ಬಾಳಲಿ- ರವೀಂದ್ರ ರೈ ಪಟ್ಟೆ: ವಿಜಯ ಬ್ಯಾಂಕ್ ನಿವೃತ್ತ ಅಽಕಾರಿ ರವೀಂದ್ರ ರೈ ಪಟ್ಟೆರವರು ಮಾತನಾಡಿ ರೇವತಿ ರೈಯವರು ನೂರು ವರ್ಷ ಸುಖವಾಗಿ ಬಾಳಿ, ಸಮಾಜ ಸೇವೆಯನ್ನು ಮಾಡಲಿ ಎಂದರು.
-ರೇವತಿ ರೈಯವರು ತುಳುನಾಡಿನ ಹೆಮ್ಮೆಯ ಮಗಳು- ರಾಮಚಂದ್ರ ಭಟ್: ಅಭಿನಂದನಾ ಭಾಷಣ ಮಾಡಿದ ಉಪನ್ಯಾಸಕ ರಾಮಚಂದ್ರ ಭಟ್ರವರು, ರೇವತಿ ರೈಯವರು ತುಳುನಾಡಿನ ಹೆಮ್ಮೆಯ ಮಗಳು, ಅವರು ಕಲಾ ಕ್ಷೇತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಇಂದು ನಡೆದ ಮಕ್ಕಳ ಯಕ್ಷಗಾನವೇ ಕಾರಣವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ರೇವತಿ ರೈಯವರ ಸಹೋದರ, ರೈಲ್ವೇಯ ನಿವೃತ್ತ ಅಧಿಕಾರಿ ಚಂದ್ರಶೇಖರ್ ರೈ ನಡುಬೈಲು(ಬೆಂಗಳೂರು)ರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರೇವತಿ ರೈ ನಡುಬೈಲುರವರು ಅತಿಥಿಗಳನ್ನು ಸ್ವಾಗತಿಸಿ, ಗೌರವಿಸಿದರು. ವೇದಿಕೆಯಲ್ಲಿ ಸಬ್ಬಣ್ಣಕೋಡಿ ರಾಮ ಭಟ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಪುತ್ತೂರು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾದ ರಾಮಯ್ಯ ರೈ ತಿಂಗಳಾಡಿ, ಜೈರಾಜ್ ಭಂಡಾರಿ ಡಿಂಬ್ರಿ, ಸಿನಿಮಾ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ, ಸದಾಶಿವ ಶೆಟ್ಟಿ ಪಟ್ಟೆ ಸೇರಿದಂತೆ ನಡುಬೈಲು ಕುಟುಂಬಸ್ಥರ ಸಹಿತ 300ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.
ಯಕ್ಷಗಾನ ವೈಭವ
ರೇವತಿ ರೈ ನಡುಬೈಲುರವರ 70ನೇ ಹುಟ್ಟು ಹಬ್ಬದ ಪ್ರಯುಕ್ತ ಪಡ್ರೆ ಚಂದ್ರು ಸ್ಮಾರಕ ಯಕ್ಷಗಾನ ನಾಟ್ಯ ಕೇಂದ್ರ ಪೆರ್ಲ ಇವರಿಂದ ಸಬ್ಬಣ್ಣ ಕೋಡಿ ರಾಮ ಭಟ್ ನಿರ್ದೇಶನದಲ್ಲಿ ಸುದರ್ಶನ ವೈಭವ ಯಕ್ಷಗಾನ ಬಯಲಾಟ ಸುಮಾರು ಎರಡೂವರೇ ತಾಸು ಜರಗಿತು.