ಕೋವಿ ಠೇವಣಿ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ದತೆ – ನಾಳೆ ಕಡಬದಲ್ಲಿ ಸಮಾಲೋಚನಾ ಸಭೆ

0

ಕಡಬ: ಚುನಾವಣಾ ಸಮಯದಲ್ಲಿ ರೈತರ ಪರವಾನಿಗೆ ಇರುವ ಕೋವಿಗಳನ್ನು ಠಾಣೆಗಳಲ್ಲಿ ಠೇವಣಿ ಇಡುವುದರಿಂದ ವಿನಾಯಿತಿ ನೀಡಬೇಕೆಂದು ಸಂಬoಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ, ಇನ್ನು ಕಾನೂನು ಹೋರಾಟವೊಂದೇ ದಾರಿ ಈ ಹಿನ್ನೆಲೆಯಲ್ಲಿ ಕೋವಿ ಹೊಂದಿರುವ ರೈತರ ಸಮಾಲೋಚನಾ ಸಭೆಯನ್ನು ಎಪ್ರಿಲ್ 3ರಂದು ಕಡಬ ಒಕ್ಕಲಿಗ ಗೌಡ ಸಮುದಾಯಭವನದಲ್ಲಿ ಕರೆಯಲಾಗಿದೆ ಎಂದು ರೈತ ಮುಖಂಡ ವಿಕ್ಟರ್ ಮಾರ್ಟಿಸ್ ಹೇಳಿದರು.


ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೋವಿ ಠೇವಣಿ ಇಡುವ ವಿಚಾರದಲ್ಲಿ ರೈತರಿಗೆ ಇನ್ನಿಲ್ಲದ ಕಿರಿಕಿರಿ ನೀಡಲಾಗುತ್ತದೆ, ಕೃಷಿ ಹಾಗೂ ನಮ್ಮ ರಕ್ಷಣೆಗೆ ಇರುವ ಕೋವಿಯನ್ನು ಠೇವಣಿ ಇಡುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೆ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳಾಗಲಿ, ಸರಕಾರವಾಗಲಿ ನಮ್ಮ ಬೇಡಿಕೆಗೆ ಮನ್ನಣೆ ನೀಡುತ್ತಿಲ್ಲ. ಹಾಗಾಗಿ ಜಿಲ್ಲೆಯ ಎಲ್ಲಾ ಕೋವಿ ಬಳಕೆದಾರರನ್ನು ಒಗ್ಗೂಡಿಸಿ, ಸಮಿತಿ ರಚಿಸಿಕೊಂಡು ಉಚ್ಛ ನ್ಯಾಯಾಲಯದಲ್ಲಿ ಕಾನೂನು ಸಮರಕ್ಕೆ ಸಿದ್ದತೆ ನಡೆಸಲು ಸಭೆ ಕರೆಯಲಾಗಿದೆ ಎಂದು ಹೇಳಿದರು.

ಕೇಂದ್ರ ಚುನಾವಣಾ ಆಯೋಗವೇನೋ ಕೋವಿಗಳನ್ನು ಠೇವಣಿ ಇಡಲು ಸೂಚನೆ ನೀಡಿದೆ. ಆದರೆ ರಾಜ್ಯ ಸರಕಾರ ಯಾಕೆ ಸುಮ್ಮನಿದೆ, ಕನಿಷ್ಟ ಈ ಕಾನೂನಿನ ವಿರುದ್ಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿ ರಾಜ್ಯದ ರೈತ ಹಿತ ಕಾಯಬಹುದಿತ್ತು. ಆದರೆ ಅದರ ಬದಲು ರೈತರನ್ನು ದ್ವೇಷಿಗಳಂತೆ, ಉಗ್ರಗಾಮಿಗಳಂತೆ ನೋಡುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರಕಾರ ರೈತರ ಪರವಾಗಿ ಭಾಷಣ ಮಾಡಿದರೆ ಸಾಲದು, ಈ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕು, ಈ ವಿಚಾರದಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ, ಕೋವಿ ಠೇವಣಿಯಿಂದ ವಿನಾಯಿತಿ ನೀಡಬೆಕೆಂದು ಜಿಲ್ಲಾಡಳಿತಕ್ಕೆ ನೀಡಿದ 307 ಅರ್ಜಿಯ ಪೈಕಿ ಕೇವಳ ಏಳು ಅರ್ಜಿಗಳನ್ನು ಮಾತ್ರ ಮಾನ್ಯ ಮಾಡಲಾಗಿದೆ.ನಮ್ಮ ಸಮಯ ವ್ಯರ್ಥವಾಗಿರುವುದು ಬಿಟ್ಟರೆ ಯಾವುದೇ ಪ್ರಯೋಜನವಾಗಿಲ್ಲ. ಚುನಾವಣೆ ವೇಳೆ ಅಷ್ಟೊಂದು ಪೊಲೀಸ್ ಪೋರ್ಸ್ ಇರುವಾಗ ನಮ್ಮ ಕೋವಿಯನ್ನು ಯಾಕೆ ಇಡಬೇಕು, ಠೇವಣಿ ಇಡುವುದರಿಂದ ಪೊಲೀಸ್ ಇಲಾಖೆಯಲ್ಲಿ ವೈಫಲ್ಯ ಇದೆ ಎಂದು ಅನುಮಾನ ಮೂಡುತ್ತದೆ. ಹಿಂದೆ ಕೋವಿ ಪರವಾನಿಗೆ ಅಥವಾ ಅದರ ನವೀಕರಣಕ್ಕೆ ಯಾವುದೇ ಶುಲ್ಕವಿರಲಿಲ್ಲ. ಆದರೆ ಈಗ 2500 ರೂ ಪಾವತಿ ಮಾಡಬೇಕು ತಪ್ಪಿದರೆ ಮತ್ತಷ್ಟು ದಂಡ ವಿಧಿಸಲಾಗುತ್ತದೆ, ನಿಮ್ಮ ಖಜಾನೆ ತುಂಬಲು ರೈತರ ಬಂದೂಕಿನ ದುಡ್ಡು ಬೇಕಾ ಎನ್ನುವ ಪ್ರಶ್ನೆ ಬರುತ್ತದೆ. ಕೋವಿ ಠೇವನಾತಿಯ ವಿನಾಯಿತಿ ವಿಚಾರದಲ್ಲಿ ಸ್ಕ್ರೀನಿಂಗ್ ಕಮಿಟಿ ಯಲ್ಲಿ ಪ್ರಗತಿಪರ ಕ್ರಷಿಕರನ್ನು , ಚಿಂತಕರನ್ನು, ಬುದ್ದಿಜೀವಿಗಳನ್ನು ಸೇರಿಸಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ ಎಂದು ಹೇಳಿದ ವಿಕ್ಟರ್ ಮಾರ್ಟಿಸ್ ಕಡಬದ ಅಂಬೇಡ್ಕರ್ ಭವನವನ್ನು ರೈತರ ಸಭೆ ನಡೆಸಲು ಉಚಿತವಾಗಿ ನೀಡಬೇಕು ಎಂದು ಅಗ್ರಹಿಸಿದರು.


ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ ಮಾತನಾಡಿ ಕೊಡುಗು ಹಾಗೂ ಕೇರಳದಲ್ಲಿ ಚುನಾವಣೆ ಸಂದರ್ಭದಲ್ಲಿ ಕೋವಿ ಠೇವಣಿ ಇಡುವ ಕಾನೂನು ಇಲ್ಲ, ನಮ್ಮಲ್ಲಿ ಅನಗತ್ಯ ತೊಂದರೆ ನೀಡಲಾಗುತ್ತಿದೆ. ಈ ವಿಚಾರದಲ್ಲಿ ರೈತರೆಲ್ಲಾ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಕುಂತೂರು ಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಜೇಮ್ಸ್ ತೋಮಸ್ ವಿ.ಎಂ., ನಾಟಿ ವೈದ್ಯ ವಾಸುದೇವ ಇಡ್ಯಾಡಿ, ರೈತ ಮುಖಂಡರಾದ. ಉಮ್ಮರಬ್ಬ ಮುಳಾರ್, ವರ್ಗೀಸ್ ತೋಮಸ್ ಎಂಜಿರ, ಸಂತೋಷ್ ಉಳಿಪ್ಪು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here