ಮಹಿಳಾ ಪ್ರಯಾಣಿಕರ ರಕ್ಷಣೆಗೆ ಮುಂದಾದ ಪತ್ರಕರ್ತ – ಬಸ್ ನಿರ್ವಾಹಕನಿಂದ ನಿಂದನೆ: ಪೊಲೀಸ್ ದೂರು

0

ಉಪ್ಪಿನಂಗಡಿ: ಮಹಿಳಾ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದ ಖಾಸಗಿ ಬಸ್ ನಿರ್ವಾಹಕನ ವರ್ತನೆಯನ್ನು ಆಕ್ಷೇಪಿಸಿದ್ದಕ್ಕಾಗಿ ಬಸ್ ನಿರ್ವಾಹಕ ನನ್ನನ್ನು ಅವ್ಯಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಲ್ಲದೆ, ಅರ್ಧದಲ್ಲೇ ಇಳಿಯಲು ಹೇಳಿದ್ದಾನೆ. ಆದ್ದರಿಂದ ಈತನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಎನ್. ಮಹಮ್ಮದ್ ನಝೀರ್ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳೂರಿಗೆ ಹೋಗಿದ್ದ ನಾನು ಜ.15ರಂದು ಸಂಜೆ ಸುಮಾರು 6:30ಕ್ಕೆ ಉಪ್ಪಿನಂಗಡಿಗೆ ಬರುವ ಅರಫಾ ಟೂರ‍್ಸ್ ಆಂಡ್ ಟ್ರಾವೆಲ್ಸ್‌ನ ಬಸ್ಸಿಗೆ ಹತ್ತಿದ್ದು, ಇದರ ನಿರ್ವಾಹಕ ಬಸ್ಸಿನಲ್ಲಿ ತುಂಬಿ ತುಳುಕುಷ್ಟು ಜನರನ್ನು ಹತ್ತಿಸಿದ್ದ. ನಾನು ಕೂಡಾ ಇದರಲ್ಲಿ ನಿಂತುಕೊಂಡು ಪ್ರಯಾಣಿಸುತ್ತಿದ್ದೆ. ಆಗ ನಿಂತಿದ್ದ ಪ್ರಯಾಣಿಕರನ್ನು ಆತ ಹಿಂದಕ್ಕೆ, ಮುಂದಕ್ಕೆ ತಳ್ಳುತ್ತಾ, ಬಸ್ಸಿನಲ್ಲಿದ್ದ ಮಹಿಳಾ ಪ್ರಯಾಣಿಕರಿಗೆ ತೊಂದರೆ ನೀಡುತ್ತಿದ್ದಾಗ ಅದಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸಿದ್ದೆ. ಆಗ ಆತ ನನ್ನನ್ನು ಅವ್ಯಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ್ದಲ್ಲದೆ, ಬಸ್ಸಿನಿಂದ ಇಳಿದು ಹೋಗುವಂತೆ ತಾಕೀತು ಮಾಡಿದ್ದ. ಇದರಿಂದ ಉಪ್ಪಿನಂಗಡಿಗೆ ಬರಬೇಕಾಗಿದ್ದ ನಾನು ಸುಮಾರು ರಾತ್ರಿ 7ರ ಸಮಯದಲ್ಲಿ ಬಿ.ಸಿ.ರೋಡ್‌ನಲ್ಲಿ ಇಳಿಯುವಂತಾಯಿತು. ಆದ್ದರಿಂದ ಪ್ರಯಾಣಿಕನಾದ ನನ್ನ ಮೇಲೆ ಈ ರೀತಿ ದೌರ್ಜನ್ಯ ನಡೆಸಿದ ಬಸ್ ನಿರ್ವಾಹಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎನ್. ಮಹಮ್ಮದ್ ನಝೀರ್ ಅವರು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here