ಆಗರ್ಭ ಶ್ರೀಮಂತರು- ಬಡವರ ಮಧ್ಯದ ಚುನಾವಣೆ- ಸೊರಕೆ

0

ಉಪ್ಪಿನಂಗಡಿಯಲ್ಲಿ ಪದ್ಮರಾಜ್‌ರವರಿಂದ ರೋಡ್ ಶೋ

ಉಪ್ಪಿನಂಗಡಿ: ಕಾಂಗ್ರೆಸ್ ಈ ದೇಶದ ಬಡ ಜನರ, ಕೂಲಿ ಕಾರ್ಮಿಕರ, ರೈತಾಪಿ ವರ್ಗದವರ ಮೇಲೆ ಕಾಳಜಿಯುಳ್ಳ ಪಕ್ಷವಾಗಿದೆ. ಆದರೆ ಬಿಜೆಪಿಗೆ ಆಗರ್ಭ ಶ್ರೀಮಂತರ ಮೇಲೆ ಮಾತ್ರ ಕಾಳಜಿಯಿದ್ದು, ಅವರನ್ನು ಇನ್ನಷ್ಟು ಶ್ರೀಮಂತರನ್ನಾಗಿಸುವುದೇ ಅದರ ಗುರಿಯಾಗಿದೆ. ಅದಕ್ಕೆ ದೇಶದ ಅಭಿವೃದ್ಧಿ ಬೇಡವಾಗಿದೆ. ಆದ್ದರಿಂದ ಈ ಬಾರಿ ಆಗರ್ಭ ಶ್ರೀಮಂತರು ಮತ್ತು ಬಡ ಜನರ ಮಧ್ಯೆ ನಡೆಯುವ ಚುನಾವಣೆಯಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಪ್ರಚಾರ ರಾಜ್ಯ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು.
ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ಪರ ಉಪ್ಪಿನಂಗಡಿಯಲ್ಲಿ ಎ. 16ರಂದು ನಡೆದ ರೋಡ್ ಷೋ ಮತ್ತು ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಈ ಚುನಾವಣೆಯಲ್ಲಿ ಬಹಳಷ್ಟು ಬದಲಾವಣೆಗಳು ಆಗಲಿದ್ದು, ಅದರಲ್ಲೂ ದ.ಕ. ಮತ್ತು ಉಡುಪಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು, ಕರ್ನಾಟಕದಲ್ಲಿ ಒಟ್ಟು ೨೦ಕ್ಕೂ ಅಧಿಕಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಮತದಾರರು ಕಾಂಗ್ರೆಸ್ ಪಕ್ಷದ ಯೋಜನೆಗಳನ್ನು ಇಷ್ಟಪಟ್ಟು ಕಾಂಗ್ರೆಸ್‌ಗೆ ಮತ ಚಲಾಯಿಸಲಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ಮತ್ತಷ್ಟು ಶಕ್ತಿ ತುಂಬಿದೆ ಎಂದರಲ್ಲದೆ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರು ಅದೆಲ್ಲ ಸುಳ್ಳು ಭರವಸೆ ಎಂದಿದ್ದರು. ಬಳಿಕ ಬಿಟ್ಟಿ ಭಾಗ್ಯ ಎಂದು ಅಪಪ್ರಚಾರ ಮಾಡಿದರು. ಆದರೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡವರ ಆರ್ಥಿಕತೆಯನ್ನು ವೃದ್ಧಿಸುವ ಕೆಲಸ ಮಾಡಿದರು. ಇದೆಲ್ಲವೂ ನಮಗೆ ಮತವಾಗಿ ಪರಿವರ್ತನೆ ಆಗಲಿದ್ದು, ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 20ಕ್ಕೂ ಅಧಿಕ ಸ್ಥಾನಗಳನ್ನು ಪಡೆಯುವುದರಲ್ಲಿ ಯಾವುದೇ ಸಂಶಯ ಇಲ್ಲ. ಕಾರ್ಯಕರ್ತರು ಈ ಯೋಜನೆಯನ್ನು ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 1 ಲಕ್ಷ ರೂಪಾಯಿ ನೀಡುವ ಯೋಜನೆ ಬಗ್ಗೆ ತಿಳಿಸಿ ಪದ್ಮರಾಜ್ ಆರ್. ಪೂಜಾರಿ ಅವರನ್ನು ಗೆಲ್ಲಿಸಬೇಕು. ಆ ಮೂಲಕ ಸಂವಿಧಾನವನ್ನು, ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸ ಮಾಡಬೇಕಾಗಿದೆ ಎಂದರು.


ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಬಿಜೆಪಿಯು ಆರ್ಥಿಕವಾಗಿ ಹಿಂದುಳಿದವರು, ಬಡವರನ್ನು ಸಂಪೂರ್ಣವಾಗಿ ಕಡೆಗಣಿಸಿದೆ, ಅದರಲ್ಲೂ ಹಿಂದುಳಿದ ವರ್ಗದ ಯುವಕರನ್ನು ಕೋಮು ದ್ವೇಷದ ಬಲೆಗೆ ಸಿಲುಕಿಸಿ ಜೈಲಿಗೆ ಕಳುಹಿಸಿದ್ದು ಬಿಟ್ಟರೆ ಬೇರೇನೂ ಸಾಧನೆ, ಕೊಡುಗೆ ಇಲ್ಲ. ಇದೀಗ ಹತಾಶರಾಗಿ ಸೋಲಿನ ಭೀತಿಯಿಂದ ಇಲ್ಲ ಸಲ್ಲದ ಆರೋಪಗಳನ್ನು ಹೇಳಿಕೊಂಡು ಅಪಪ್ರಚಾರ ಮಾಡಿಕೊಂಡು ಮತ ಯಾಚಿಸುತ್ತಿದ್ದಾರೆ. ಬಿಜೆಪಿ ಆಡಳಿತಾವಧಿಯಲ್ಲಿ ನಮ್ಮ ಜಿಲ್ಲೆಯು ಕೋಮು ಸೂಕ್ಷ್ಮ ಜಿಲ್ಲೆಯಾಗಿ ಗುರುತಿಸಿಕೊಂಡಿದ್ದು, ಇದರಿಂದ ಯಾವುದೇ ಉದ್ದಿಮೆಗಳು ಇಲ್ಲಿ ಬರುತ್ತಿಲ್ಲ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಇಲ್ಲಿರುವ ಉದ್ಯಮ, ಸಾರಿಗೆ, ರೈಲ್ವೇ, ವಿಮಾನ ನಿಲ್ದಾಣ, ಉದ್ದಿಮೆಗಳೆಲ್ಲವೂ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಆಗಿರುವಂತದ್ದು. ಬಿಜೆಪಿ ಅಧಿಕಾರಕ್ಕೆ ಬಂದು ಮೇಲೆ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಪರಸ್ಪರ ಎತ್ತಿ ಕಟ್ಟುವುದು ಬಿಟ್ಟರೆ ಅಭಿವೃದ್ಧಿ ಶೂನ್ಯ. ಆದ್ದರಿಂದ ಮತದಾರರು ಜಾಗೃತರಾಗಬೇಕಾಗಿದ್ದು, ಜಿಲ್ಲೆಯ ಕೋಮ ಸಾಮರಸ್ಯವನ್ನು ಮತ್ತೆ ಪ್ರತಿಪಾದಿಸಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ. ಅದನ್ನು ಇಲ್ಲಿಂದಲೇ ಪ್ರಾರಂಭಿಸಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.


ಶಾಸಕ ಆಶೋಕ್ ಕುಮಾರ್ ರೈ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಓರ್ವ ನ್ಯಾಯವಾದಿ. ಜನಪರ ಕಾಳಜಿ ಉಳ್ಳ ವ್ಯಕ್ತಿಯಾಗಿದ್ದು, ಅವರನ್ನು ನಾವುಗಳು ಗೆಲ್ಲಿಸಬೇಕಾಗಿದೆ, ಈ ನಿಟ್ಟಿನಲ್ಲಿ ಕಾರ‍್ಯಕರ್ತರು ಶ್ರಮ ವಹಿಸಬೇಕಾಗಿದೆ ಎಂದರು.


ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಆರಂಭಗೊಂಡ ರೋಡ್ ಶೋ ರಥ ಬೀದಿಯಾಗಿ ಸಾಗಿ ಹಳೆ ಬಸ್ ನಿಲ್ದಾಣ, ಗಾಂಧಿಪಾರ್ಕ್ ತನಕ ಹೋಗಿ ಬಳಿಕ ಹೆದ್ದಾರಿಯಾಗಿ ಸಾಗಿ ಬಸ್ ನಿಲ್ದಾಣದಲ್ಲಿ ಜಮಾಯಿಸಿ, ಅಲ್ಲಿ ಬಹಿರಂಗ ಪ್ರಚಾರ ಸಭೆ ನಡೆಯಿತು.
ಮೆರವಣಿಗೆಯಲ್ಲಿ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಬಿ. ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಸದಸ್ಯ ಎಂ.ಎಸ್. ಮಹಮ್ಮದ್, ಜಿ. ಕೃಷ್ಣಪ್ಪ ರಾಮಕುಂಜ, ಡಾ. ರಘು ಬೆಳ್ಳಿಪ್ಪಾಡಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ರೈ, ಚುನಾವಣಾ ಉಸ್ತುವಾರಿಗಳಾದ ಕಾವು ಹೇಮನಾಥ ಶೆಟ್ಟಿ, ಡಿಸಿಸಿ ಉಪಾಧ್ಯಕ್ಷರಾದ ಮುರಳೀಧರ ರೈ ಮಠಂತಬೆಟ್ಟು, ಉಮಾನಾಥ ಶೆಟ್ಟಿ ಪೆರ್ನೆ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್, ಯುವ ಕಾಂಗ್ರೆಸ್‌ನ ಫಾರೂಕ್ ಪೆರ್ನೆ, ವಲಯಾಧ್ಯಕ್ಷರಾದ ಅನಿ ಮಿನೇಜಸ್, ಆದಂ ಕೊಪ್ಪಳ, ಮೋನಪ್ಪ ಪಮ್ಮನಮಜಲು, ರವೀಂದ್ರ ಪಟಾರ್ತಿ, ಅನಿತಾ ಕೇಶವ ಗೌಡ, , ಸಂಘ ಸಂಸ್ಥೆ ಪದಾಧಿಕಾರಿಗಳಾದ ಚಂದ್ರಹಾಸ ಶೆಟ್ಟಿ, ರಾಧಾಕೃಷ್ಣ ನಾಯ್ಕ್, ಕೃಷ್ಣ ರಾವ್ ಅರ್ತಿಲ, ಮುಖಂಡರಾದ ಪ್ರಸಾದ್ ಕೌಶಲ್ ಶೆಟ್ಟಿ, ತೌಸೀಫ್ ಯು.ಟಿ., ಶಬೀರ್ ಕೆಂಪಿ, ಸಿದ್ದೀಕ್ ಕೆಂಪಿ, ಇಬ್ರಾಹೀಂ ಆಚಿ, ವಿಕ್ರಂ ಶೆಟ್ಟಿ ಅಂತರ, ಈಶ್ವರ ಭಟ್ ಪಂಜಿಗುಡ್ಡೆ, ವಿಜಯಕುಮಾರ್ ಸೊರಕೆ, ವೇದನಾಥ ಸುವರ್ಣ, ನಿಹಾಲ್ ಶೆಟ್ಟಿ, ಯು.ಕೆ. ಇಬ್ರಾಹೀಂ, ನಝೀರ್ ಮಠ, ಪ್ರವೀಣ್ ಚಂದ್ರ ಆಳ್ವ, ಯೋಗೀಶ್ ಸಾಮಾನಿ, ಸತೀಶ್ ಶೆಟ್ಟಿ ಹೆನ್ನಾಳ, ಜೋಕಿಂ ಡಿಸೋಜಾ, ಅಶ್ರಫ್ ಬಸ್ತಿಕ್ಕಾರ್, ಜಯಪ್ರಕಾಶ್ ಬದಿನಾರು, ಅಬ್ದುಲ್ ರಹಿಮಾನ್ ಕೆ., ಗೀತಾ ದಾಸರಮೂಲೆ, ಇಸ್ಮಾಯಿಲ್ ಇಕ್ಬಾಲ್, ಸೋಮನಾಥ, ಸವಿತಾ ಹರೀಶ್, ಜಗನ್ನಾಥ್ ಶೆಟ್ಟಿ ನಡುಮನೆ, ರೂಪೇಶ್ ರೈ ಅಲಿಮಾರ್, ವಿನಾಯಕ ಪೈ, ನಝೀರ್ ಬೆದ್ರೋಡಿ, ಲೋಕೇಶ್ ಪೆಲತ್ತಡಿ, ಫಾರೂಕ್ ಜಿಂದಗಿ, , ನವಾಝ್ ಕರ್ವೇಲು, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಸ್ವಾಗತಿಸಿ, ನೂರುದ್ದೀನ್ ಸಾಲ್ಮರ ವಂದಿಸಿದರು.

ಮಧ್ಯಾಹ್ನ ಎರಡು ಗಂಟೆಗೆ ರ‍್ಯಾಲಿ ಆರಂಭವಾಗಿದ್ದು, ನಾಯಕರು ತೆರೆದ ವಾಹನದಲ್ಲಿ ಸಾಗಿದರೆ, ನೆತ್ತಿ ಸುಡುವ ಬಿಸಿಲನ್ನೂ ಲೆಕ್ಕಿಸದೇ ನೂರಕ್ಕೂ ಅಧಿಕ ಕಾರ್ಯಕರ್ತರು ಕಾಲ್ನಡಿಗೆಯಲ್ಲಿ ಸಾಗಿದರು. ಸುಮಾರು 25ರಷ್ಟು ಕಾರುಗಳು ರ‍್ಯಾಲಿಯ ಜೊತೆಗಿದ್ದವು.

LEAVE A REPLY

Please enter your comment!
Please enter your name here