ಪುತ್ತೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಯೋರ್ವರೂ ಮತದಾನ ದಿನದಂದು ಮೊದಲು ಮತದಾನ ಮಾಡಿ ಬಳಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಕ್ರೈಸ್ತ ಬಾಂಧವರಿಗೆ ಕಥೋಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷ ಆಲ್ವಿನ್ ಡಿ’ಸೋಜರವರು ಕರೆ ನೀಡಿದ್ದಾರೆ.
ಮುಂಚಿತವಾಗಿ ನಿಗದಿಪಡಿಸಿದ ಹಲವಾರು ಧಾರ್ಮಿಕ, ಸಾಮಾಜಿಕ, ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಕ್ಕೆ ಹಾಜರಾಗುವವರು ಮೊದಲು ಮತದಾನ ಮಾಡಿ ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ. ಅಂತೆಯೇ ಹೊರ ರಾಜ್ಯದಲ್ಲಿದ್ದ ತಮ್ಮ ಮಕ್ಕಳು ಹಾಗೂ ಸಂಬಂಧಿಕರನ್ನು ಕರೆಯಿಸಿ ಮತದಾನ ಮಾಡಿಸುವಂತಾಗಬೇಕು. ಈಗಾಗಲೇ ಚುನಾವಣಾ ಆಯೋಗವು ಹೆಚ್ಚಿನ ಮತದಾನ ನಡೆಸುವ ನಿಟ್ಟಿನಲ್ಲಿ ಹಲವಾರು ಕಾರ್ಯಗಳನ್ನು ನಡೆಸುತ್ತಿದೆ. ಅತ್ಯಧಿಕ ಮತದಾನ ಮಾಡಲು ನಾವೆಲ್ಲರೂ ಪ್ರಯತ್ನಿಸಬೇಕು. ಕೆಲಸಕ್ಕೆ ಹೋಗುವವರು ಮೊದಲು ಮತದಾನ ಮಾಡಿ ನಂತರ ಕೆಲಸಕ್ಕೆ ಹೋಗಬೇಕು. ರಜೆಯಲ್ಲಿದ್ದವರು, ಮನೆಯಲ್ಲಿದ್ದರೂ ಕಡ್ಡಾಯವಾಗಿ ಮತದಾನ ಮಾಡಿ ಶೇ. 100 ಮತದಾನ ಆಗುವಂತೆ ಶ್ರಮಿಸಬೇಕು. ಪ್ರತಿಯೋರ್ವರ ಅಮೂಲ್ಯ ಮತದಿಂದ ಉತ್ತಮ ಸರಕಾರ ರಚನೆ ಮಾಡಲು ಸಾಧ್ಯ. ಮತದಾನ ನಮ್ಮ ಹಕ್ಕು, ತಪ್ಪಿದ್ದಲ್ಲಿ ಮುಂದಿನ ಅನಾಹುತಗಳಿಗೆ ನಾವೇ ಕಾರಣಕರ್ತರಾಗುತ್ತೇವೆ ಎಂದು ಕಥೋಲಿಕ್ ಸಭಾ ಮಂಗಳೂರು ಪ್ರದೇಶದ ಇದರ ಅಧ್ಯಕ್ಷ ಆಲ್ವಿನ್ ಡಿ’ಸೋಜರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.