





ನೆಲ್ಯಾಡಿ: ಸ್ವಿಫ್ಟ್ ಡಿಸೈರ್ ಕಾರೊಂದು ರಸ್ತೆ ಬದಿ ನಿಂತಿದ್ದ ಎರಡು ವಾಹನಗಳಿಗೆ ಡಿಕ್ಕಿಯಾದ ಪರಿಣಾಮ ಸ್ವಿಫ್ಟ್ ಡಿಸೈರ್ ಕಾರು ಚಾಲಕ ಸಹಿತ ಇಬ್ಬರು ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾ.ಹೆ.75ರ ಕಡಬ ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಎ.15ರಂದು ರಾತ್ರಿ ನಡೆದಿದೆ.


ರಾಮನಗರ ನಿವಾಸಿ ಜಗದೀಶ್ ಎಂಬವರು ಅಶೋಕ್ ಲೈಲ್ಯಾಂಡ್ ಬಾಸ್ ವಾಹನ(ಕೆಎ 01, ಎಎನ್ 5370)ದಲ್ಲಿ ಬೆಂಗಳೂರಿನಿಂದ ಐಸ್ಕ್ರೀಂ ಹಾಗೂ ಹಾಲು ತುಂಬಿಸಿಕೊಂಡು ಉಡುಪಿ, ಕುಂದಾಪುರಕ್ಕೆ ಬರುತ್ತಿದ್ದವರು ಮೂತ್ರ ಶಂಕೆಗೆಂದು ಅಡ್ಡಹೊಳೆ ಸೇತುವೆ ಬಳಿ ವಾಹನ ನಿಲ್ಲಿಸಿದ್ದರು. ಇದರ ಹಿಂದೆ ಹೆಚ್.ಎಸ್.ಮೋಹನ್ರಾಜ್ ಎಂಬವರು ಅಶೋಕ್ ಲೈಲ್ಯಾಂಡ್ ದೋಸ್ತ್(ಕೆಎ 45,8800) ವಾಹನ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಇಳಯರಾಜ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು(ಕೆಎ 51, ಎಜೆ2494) ನಿಯಂತ್ರಣ ತಪ್ಪಿ ದೋಸ್ತ್ ವಾಹನಕ್ಕೆ ಡಿಕ್ಕಿಯಾಗಿದೆ. ಈ ವೇಳೆ ದೋಸ್ತ್ ವಾಹನ ಹತ್ತಲು ಮುಂದಾಗುತ್ತಿದ್ದ ಹೆಚ್.ಎಸ್.ಮೋಹನ್ರಾಜ್ ಅವರಿಗೂ ಸ್ವಿಫ್ಟ್ ಡಿಸೈರ್ ಕಾರು ಡಿಕ್ಕಿಯಾಗಿದೆ. ಅಲ್ಲದೇ ಜಗದೀಶ್ರವರು ನಿಲ್ಲಿಸಿದ್ದ ಅಶೋಕ್ ಲೈಲ್ಯಾಂಡ್ ಬಾಸ್ ವಾಹನದ ಹಿಂಬದಿಗೂ ಸ್ವಿಫ್ಟ್ ಡಿಸೈರ್ ಕಾರು ಡಿಕ್ಕಿಯಾಗಿದೆ. ಘಟನೆಯಲ್ಲಿ ಹೆಚ್.ಎಸ್.ಮೋಹನ್ರಾಜ್ ಅವರಿಗೆ ಗಂಭೀರ ಗಾಯವಾಗಿದ್ದು ಸ್ವಿಫ್ಟ್ ಡಿಸೈರ್ ಕಾರು ಚಾಲಕ ಇಳಯರಾಜ್ರವರಿಗೂ ಸಣ್ಣಪುಟ್ಟ ಗಾಯವಾಗಿದೆ. ಈ ಅಪಘಾತದಿಂದ ಮೂರು ವಾಹನಗಳು ಜಖಂಗೊಂಡಿದೆ ಎಂದು ವರದಿಯಾಗಿದೆ. ಅಶೋಕ್ ಲೈಲ್ಯಾಂಡ್ ಬಾಸ್ ವಾಹನದ ಚಾಲಕ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.










