ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ-ಐವರು ಆರೋಪಿಗಳೂ ದೋಷ ಮುಕ್ತ

0

ಪುತ್ತೂರು:9 ವರ್ಷಗಳ ಹಿಂದೆ ಕಡಬ ತಾಲೂಕು ಐತ್ತೂರು ಗ್ರಾಮದಲ್ಲಿ ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆ ಒಡ್ಡಿದ್ದ ಪ್ರಕರಣದ ಆರೋಪಿಗಳೆಲ್ಲರನ್ನು ಪುತ್ತೂರು  ನ್ಯಾಯಾಲಯ ದೋಷ ಮುಕ್ತಗೊಳಿಸಿದೆ.

2015ರ ಫೆ.14ರಂದು ಕಡಬ ಐತ್ತೂರು ಗ್ರಾಮದ ಗ್ರಾಮದ ಓಟಕಜೆ ರಬ್ಬರ್ ತೋಟದ ಬದಿಯಲ್ಲಿ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಸಿಬ್ಬಂದಿಗಳಾದ ಶಾಂತಪ್ಪ ಗೌಡ, ರಾಘವ, ಸೆಲ್ವೇಂದ್ರರವರು ಬೆಳಿಗ್ಗೆ ಕರ್ತವ್ಯ ನಿರ್ವಹಿಸುತ್ತಿದ್ದಾಗ ಆರೋಪಿಗಳಾದ ಹರೀಶ, ಬಾಲಸುಬ್ರಮಣ್ಯ, ಸುರೇಶ್, ಕರುಣಾಮೂರ್ತಿ, ಕುಮಾರವೇಲುರವರು ಸೇರಿಕೊಂಡು ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವರಿಗೆ ಬೆದರಿಕೆ ಒಡ್ಡಿ, ಅವರ ವಾಹನಗಳನ್ನು ಹಾನಿಗೊಳಿಸಿದ್ದರು ಎಂದು ಆರೋಪಿಸಲಾಗಿತ್ತು.ಆರೋಪಿಗಳೆಲ್ಲರೂ ಸೇರಿ ಕುಮಾರಧಾರ ರಬ್ಬರ್ ಘಟಕಕ್ಕೆ ಸೇರಿದ, ರಬ್ಬರ್ ಮರಗಳಿಂದ ರಬ್ಬರ್ ಹಾಳೆಗಳನ್ನು ಕದ್ದು ತಂದು, ಮನಮೋಹನ್ ಎಂಬವರ ತೋಟದ ತೆಂಗಿನ ಮರದಡಿಯಲ್ಲಿ ಬಚ್ಚಿಟ್ಟಿದ್ದನ್ನು ಪತ್ತೆ ಹಚ್ಚಿ ಸ್ವಾಧೀನಪಡಿಸುವ ಸಮಯ ಆರೋಪಿಗಳೆಲ್ಲರೂ ಸೇರಿ ಈ ಕೃತ್ಯವನ್ನು ನಡೆಸಿದ್ದಾರೆ ಎಂದು ರಬ್ಬರ್ ತೋಟದ ಅಧೀಕ್ಷಕ ಜಿ.ಎಸ್.ಕೊಡಿಯ ಎಂಬವರು ಕಡಬ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಪುತ್ತೂರಿನ ಎರಡನೇ ಹೆಚ್ಚುವರಿ ಕಿರಿಯ ವಿಭಾಗ ಸಿವಿಲ್ ನ್ಯಾಯಾಧೀಶ ಯೋಗೇಂದ್ರರವರು, ಆರೋಪಿಗಳನ್ನು ದೋಷಮುಕ್ತಗೊಳಿಸಿ,ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.ಆರೋಪಿಗಳ ಪರವಾಗಿ ಪುತ್ತೂರಿನ ಹಿರಿಯ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಮತ್ತು ಸಾತ್ವಿಕ್ ಆರಿಗ ಬಿ.ವಾದಿಸಿದ್ದರು.

LEAVE A REPLY

Please enter your comment!
Please enter your name here