ಮಂಗಳೂರು:ಏ.26ರಂದು ನಡೆಯಲಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಮುಕ್ತ ಮತ್ತು ನ್ಯಾಯೋಚಿತ ಮತದಾನಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ಏ.26ರ ಸಂಜೆ 6 ಗಂಟೆಯಿಂದ ಏ.26ರ ರಾತ್ರಿ 10 ಗಂಟೆಯವರೆಗೆ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ.
5ಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ:
ಜಿಲ್ಲೆಯಾದ್ಯಂತ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ.ಚುನಾವಣಾ ಅಭ್ಯರ್ಥಿ ಯಾ ಬೆಂಬಲಿಗರು ಸೇರಿ 5 ಜನಕ್ಕಿಂತ ಹೆಚ್ಚಿನ ಸಂಖ್ಯೆಯ ಜನರು ಸೇರುವಂತಿಲ್ಲ.ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ದೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ಅವುಗಳೊಂದಿಗೆ ತಿರುಗಾಡುವುದನ್ನು ನಿರ್ಬಂಧಿಸಲಾಗಿದೆ.
ಮತಗಟ್ಟೆಗಳ 200 ಮೀ. ವ್ಯಾಪ್ತಿಯಲ್ಲಿ ಪ್ರಚಾರ ನಿಷೇಧ:
ಈ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿ, ಬುಕ್ಸ್ ಸ್ಟಾಲ್, ಸೈಬರ್ ಕೆಫೆಗಳನ್ನು ನಿರ್ಬಂಽಸಿದೆ.ಮತದಾನದ ದಿನದಂದು ಮತಗಟ್ಟೆಗಳ 200 ಮೀಟರ್ ಒಳಗೆ ಚುನಾವಣೆ ಪ್ರಚಾರ ನಿಷೇಧಿಸಲಾಗಿದೆ.
ಸ್ಪೋಟಕ ವಸ್ತು ಕೊಂಡೊಯ್ಯುವಂತಿಲ್ಲ:
ಕಲ್ಲುಗಳನ್ನು, ಕ್ಷಾರ ಪದಾರ್ಥ ಇಲ್ಲವೇ ಸ್ಪೋಟಕ ವಸ್ತುಗಳು, ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಸದರಿ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ.ಕಲ್ಲುಗಳನ್ನು ಮತ್ತು ಎಸೆಯುವಂತಹ ವಸ್ತುಗಳನ್ನು ಎಸೆಯುವ ಅಥವಾ ಬಿಡುವ ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಧ್ವನಿವರ್ಧಕ ಬಳಸುವಂತಿಲ್ಲ ಪ್ರತಿಕೃತಿ ದಹಿಸುವಂತಿಲ್ಲ:
ಮನುಷ್ಯ ಶವಗಳ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳ ಪ್ರದರ್ಶನ ಅಥವಾ ದಹನ ಮಾಡುವುದನ್ನು ಪ್ರತಿಬಂಽಸಲಾಗಿದೆ.ಈ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ.ಸದರಿ ಸ್ಥಳದಲ್ಲಿ ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಆಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.
ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿನ್ಹೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಅಥವಾ ಸಾರ್ವಜನಿಕ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.ಯಾವುದೇ ವ್ಯಕ್ತಿ ಬಹಿರಂಗವಾಗಿ ಮೇಲೆ ವಿವರಿಸಿದ ಮಾರಕಾಸ್ತ್ರಗಳು, ಸ್ಪೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರೆ ಆಕ್ಷೇಪಾರ್ಥ ವಸ್ತುಗಳನ್ನು ಹೊಂದಿದ್ದು ಕಂಡುಬಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ.ಅಂತಹ ಮಾರಕಾಸ್ತ್ರಗಳನ್ನು ಸರಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಲಾಗುವುದು,ಅಲ್ಲದೆ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು.ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಹಾಗೂ ಕೋವಿಡ್-19 ಕಾರ್ಯಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ.
ಮದುವೆ, ಧಾರ್ಮಿಕ ಮೆರವಣಿಗೆಯಲ್ಲೂ ನೀತಿ ಸಂಹಿತೆ ಉಲ್ಲಂಘನೆಯಾಗಬಾರದು:
ಮದುವೆ ಮತ್ತು ಇತರೆ ಧಾರ್ಮಿಕ ಮೆರವಣಿಗೆಗಳು ಯಾವತ್ತೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಯಮಗಳನ್ನು ಪಾಲಿಸುವುದು.ಮೇಲ್ಕಂಡ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಸಭೆಗಳನ್ನು ಕೈಗೊಳ್ಳುವಂತಿಲ್ಲ.ಮೇಲ್ಕಂಡ ಅವಧಿಯಲ್ಲಿ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ಮುಖಂಡರುಗಳು ಕಡ್ಡಾಯವಾಗಿ ಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ಹೋಗತಕ್ಕದ್ದು.
ಇದೂ ಗಮನದಲ್ಲಿರಲಿ:
ಮತದಾನದ ದಿನದಿಂದ ಮತಗಟ್ಟೆಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಫೋನ್,ಕೋಡ್ರ್ಲೆಸ್ ಫೋನ್ ಅಥವಾ ಇನ್ನಿತರ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ(ಚುನಾವಣಾ ಕಾರ್ಯದಲ್ಲಿ ನಿರತರಾಗಿರುವ ಅಽಕಾರಿಗಳು ಸಿಬ್ಬಂದಿಗಳು ಹೊರತುಪಡಿಸಿ).ಮತದಾನ ದಿನದಂದು ಮತಗಟ್ಟೆಗಳ ಸುತ್ತ 200 ಮೀಟರ್ ಪರಿಮಿತಿಯಲ್ಲಿ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟರ್ ಬ್ಯಾನರ್ ಅಥವಾ ಇನ್ನೂ ಬಳಸುವಂತಿಲ್ಲ.
ಕಲ್ಯಾಣ ಮಂಟಪಗಳು/ಸಮುದಾಯ ಭವನಗಳು/ಹೋಟೆಲ್ಗಳು ಮತ್ತು ಅತಿಥಿ ಗೃಹಗಳಲ್ಲಿ ವಾಸ್ತವ್ಯ ಮಾಡಿರುವವರ ಪಟ್ಟಿಗಳ ಪರಿಶೀಲನೆ ಮಾಡಿ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ವ್ಯಕ್ತಿಗಳನ್ನು ಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ಕಳುಹಿಸಲು ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.