ಪರೀಕ್ಷೆಗಳೆಲ್ಲ ಮುಕ್ತಾಯವಾಗಿವೆ. ಇನ್ನೇನು ಮೈ ಮೇಲೆ ದೆವ್ವ ಬಂದಂತೆ ಮೊಬೈಲ್ ಹಿಡಿದುಕೊಂಡು ಹಾರಾಡೋದು ಕಡಿಮೆ ಮಾಡಿ.ಹುಬ್ಬಳ್ಳಿಯಲ್ಲಿ ನಡೆದ ಘಟನೆ ನಮಗೆ ಎಲ್ಲರಿಗೂ ಪಾಠವಾಗಬೇಕು.ಮನೆಯಲ್ಲಿರುವವರ ಜೊತೆ ಬೆರೆತು ಮಾತನಾಡುವುದನ್ನು ಬಿಟ್ಟು, ದಿನ ಪೂರ್ತಿ ಮೊಬೈಲ್ ಹಿಡಿದುಕೊಂಡು ಯಾರೋ ಪರಿಚಯವಿಲ್ಲದವರ ಜೊತೆ ಚಾಟಿಂಗ್, ವಿಡಿಯೋ ಗೇಮ್ಸ್ , ರೀಲ್ಸ್ , ಪ್ರೆಂಡ್ ಶಿಪ್ ರಿಕ್ವೆಸ್ಟ್ ಮಾಡುವುದನ್ನೆಲ್ಲ ಬಿಡಿ. ಅಪರಿಚಿತರ ಜೊತೆ ವ್ಯವಹಾರ ಸ್ನೇಹ ಬೆಳೆಸುವ ಮೊದಲು ನೂರು ಬಾರಿ ಯೋಚಿಸಿ.
ನೆನಪಿಡಿ, ನೀವು ಸೋತಾಗ ನಿಮ್ಮ ಸಹಾಯಕ್ಕೆ ಬರುವವರು ನಿಮ್ಮ ತಂದೆ ತಾಯಿ.ಹೆಚ್ಚೆಂದರೆ ನಿಮ್ಮ ಸಂಬಂಧಿಕರು ಬರಬಹುದು ಅಷ್ಟೇ.ಫೇಸ್ ಬುಕ್ , ಇನ್ಸ್ಟಾಗ್ರಾಮ್ ನ ನೀವೆಂದೂ ನೋಡಿರದ ನಿಮ್ಮ ನಕಲಿ ಸ್ನೇಹಿತರು ಯಾರೂ ಬರೋದಿಲ್ಲ.ನಿಮಗೆ ತೊಂದರೆಯಾದಾಗ ಹೆತ್ತವರು ಅತ್ಯಂತ ಹೆಚ್ಚು ಆತಂಕ ಪಡುತ್ತಾರೆ ಎಂಬುದು ನಿಮ್ಮ ಗಮನದಲ್ಲಿರಲಿಈ ವಯಸ್ಸಿನಲ್ಲಿ ತಂದೆ ತಾಯಿಯವರೊಡನೆ ಹೇಳಿಕೊಳ್ಳಲಾರದ ವಿಷಯಗಳು ನಿಮ್ಮಲ್ಲಿ ಇವೆಯೆಂದರೆ ನೀವೆಲ್ಲೋ ತಪ್ಪು ದಾರಿ ತುಳಿದಿದ್ದೀರಿ ಎಂದೇ ಅರ್ಥ. ಎಲ್ಲಾ ಸಂಗತಿಗಳನ್ನು ಅಪ್ಪ ಅಮ್ಮನೊಡನೆ ಮುಕ್ತವಾಗಿ ಹಂಚಿಕೊಳ್ಳಿ.
SSLC/PUC ನಂತರ ಮುಂದೆ ಏನು ?ನಿಮ್ಮ ಮುಂದಿನ ಶಿಕ್ಷಣದ ಬಗ್ಗೆ ಸ್ವಲ್ಪ ಚಿಂತಿಸಿ.ನಿಮ್ಮ Strength ಏನು? Weakness ಏನು? ಆ ಪ್ರಕಾರ ಯಾವ ಕೋರ್ಸು ನಿಮಗೆ ಹೊಂದಿಕೆಯಾಗಬಹುದು ಎಂಬುದನ್ನು ಯೋಚಿಸಿ ಒಂದು ದೃಢ ನಿರ್ಧಾರಕ್ಕೆ ಬರಲು ಇದು ಸೂಕ್ತ ಸಮಯ.ಆ ಬಗ್ಗೆ ಹೆತ್ತವರೊಡನೆ, ಅಧ್ಯಾಪಕರೊಡನೆ, ಸ್ನೇಹಿತರೊಡನೆ, ಈಗಾಗಲೇ ವಿವಿಧ ಕೋರ್ಸುಗಳನ್ನು ಮಾಡುತ್ತಿರುವ ಅಣ್ಣ , ಅಕ್ಕ , ಇತರರೊಡನೆ ಚರ್ಚಿಸಿ.ಮುಂದೆ ಹಲವು ದಿನಗಳಲ್ಲಿ ನಿಮಗೆ ತುಂಬಾ ಬಿಡುವಿರುತ್ತದೆ. ಅದನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿಕೊಳ್ಳಿ.
ಜೀವನಕ್ಕೆ ಉಪಯುಕ್ತವಾದ ವಿಷಯಗಳನ್ನು ಈ ದಿನಗಳಲ್ಲಿ ನೀವು ಕಲಿಯಬಹುದುಡ್ರೈವಿಂಗ್ ಸ್ಕೂಲ್ ಸೇರಬಹುದು,ಈಜು ಕಲಿಯಬಹುದು,ಚಿತ್ರಕಲೆ, ಸಂಗೀತ, ಕ್ರಾಫ್ಟ್ ಇತ್ಯಾದಿ ನಿಮ್ಮ ಹವ್ಯಾಸಗಳನ್ನು ಮುಂದುವರಿಸಬಹುದು,ಅಡುಗೆ, ಟೈಲರಿಂಗ್ ಕಲಿಯಬಹುದು,ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದರೆ ಸಣ್ಣ ಸಣ್ಣ ಕೆಲಸಕ್ಕೂ ಸೇರಬಹುದು.(ಗಮನಿಸಿ, ಇವು ಯಾವುವೂ ಕಳಪೆ ಕೆಲಸಗಳಲ್ಲ. ಹಾಗಂತ ನಿಮ್ಮ ಮನಸ್ಸಿನಲ್ಲಿದ್ದರೆ ನೀವು ಜೀವನದಲ್ಲಿ ಸೋಲುತ್ತೀರಿ)
ವಿಡಿಯೋ ಎಡಿಟಿಂಗ್, ಫೋಟೋಶಾಪ್ ಕಲಿಯಬಹುದುಸಿ++ , ಪೈಥಾನ್ ಇತ್ಯಾದಿ ಕಂಪ್ಯೂಟರ್ ಪ್ರೋಗ್ರಾಮಿಂಗ್ ವಿಷಯಗಳನ್ನು ಕಲಿತರೆ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವುದು.ಮುಂದಿನ ಕಾಲೇಜು ವಿದ್ಯಾಭ್ಯಾಸಕ್ಕೆ ಬೇಕಾದ ದಾಖಲೆ ಪತ್ರಗಳನ್ನು ಬೇರೆ ಬೇರೆ ಕಚೇರಿಗಳಿಗೆ ಭೇಟಿ ನೀಡಿ ತಯಾರು ಮಾಡಬಹುದು.ನಿಮ್ಮ ಮನೆಯಲ್ಲೇ ತೋಟ, ಗದ್ದೆಗಳಿದ್ದರೆ ಹೆತ್ತವರಿಗೆ ಕೆಲಸದಲ್ಲಿ ಸಹಾಯ ಮಾಡಬಹುದುವಿಡಿಯೋ ಗೇಮ್ಸ್ ಆಡುವ ಬದಲು, ಸಿಕ್ಕಾಪಟ್ಟೆ ಐ.ಪಿ.ಯಲ್. ನೋಡುವ ಬದಲು, ನೀವೇ ಹೊರಗೆ ಹೋಗಿ ಆಟ ಅಡಿ. ಆಗ ಕಪ್ ನಮ್ಮದಾಗದಿದ್ದರೂ ಒಳ್ಳೆಯ ಆರೋಗ್ಯವಂತೂ ನಮ್ಮದಾಗುತ್ತದೆ..!
ಕಳೆದ ವರ್ಷ ನಮ್ಮ ವಿದ್ಯಾರ್ಥಿಯೊಬ್ಬಳು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಟ್ಯೂಷನ್ ಕೊಟ್ಟು ಹಣ ಸಂಪಾದನೆ ಮಾಡಿದ್ದಾಳೆ.ಇನ್ನೊಬ್ಬ ವಿದ್ಯಾರ್ಥಿನಿ ಆನ್ ಲೈನ್ ಚೆಸ್ ತರಬೇತಿ ನೀಡಿ ಗಳಿಸಿದ 5,0000 ರೂಪಾಯಿಯನ್ನು ನಮ್ಮದೇ ಕಾಲೇಜಿನ ಬಡ ವಿದ್ಯಾರ್ಥಿಯ ಕಾಲೇಜು ಶುಲ್ಕವಾಗಿ ದಾನ ನೀಡಿದ್ದಾಳೆ.ಇವೆಲ್ಲವೂ ನಿಮ್ಮ ಮಾನಸಿಕ ಸ್ಥಿತಿಯನ್ನು ಇನ್ನಷ್ಟು ಉತ್ತಮಪಡಿಸುತ್ತದೆ.
ಯಾವುದೇ ಶಿಸ್ತಿಲ್ಲದೆ ಮೊಬೈಲ್ ಬಳಸುತ್ತಾ, ಅಲೆದಾಡುತ್ತ ಸಿಕ್ಕಿದ್ದನ್ನು ತಿನ್ನುತ್ತಾ, ಹೆತ್ತವರೊಡನೆ ಜಗಳವಾಡುತ್ತಾ ದಿನ ಕಳೆದಾಗ, ತಲೆಯಲ್ಲಿ ಕೆಟ್ಟ ವಿಷಯಗಳೇ ತುಂಬಿ ಮೊನ್ನೆ ಹುಬ್ಬಳ್ಳಿಯಲ್ಲಿ ನಡೆದಂತಹ ಘಟನೆಗಳಿಗೆ ಕಾರಣವಾಗುತ್ತವೆ.ಆದ್ದರಿಂದ ನಿಮ್ಮ ಭವಿಷ್ಯವನ್ನು ನೀವೇ ಚೆನ್ನಾಗಿ ರೂಪಿಸಿಕೊಳ್ಳಿ.ಅದಕ್ಕೆ ಮಾಡಬೇಕಾದ ಕೆಲಸಗಳನ್ನು ಈಗಲೇ ಆರಂಭಿಸಿ. ಮುಂದೆ ಬೇಕಾದಷ್ಟು ಸಮಯವಿದೆ.
ಬರಹ: ಹರೀಶ್ ಶಾಸ್ತ್ರಿ
ಅಧ್ಯಾಪಕರು
ವಿವೇಕಾನಂದ ಪದವಿ ಪೂರ್ವ ಕಾಲೇಜು, ಪುತ್ತೂರು.