ಅಂಕಣ : ನಿಶಾಕಿರಣ್ ಬಾಳೆಪುಣಿ
ವ್ಯಕ್ತಿ ಶಕ್ತಿಯಾಗಿ ಬೆಳೆದು ನಿಂತರೆ ದೇಶ ಉನ್ನತೋನ್ನತದ ಹೆಜ್ಜೆಯಿಟ್ಟು ಪ್ರಾಪಂಚಿಕವಾಗಿ ಮನುಕುಲದ ವಿಕಾಸ ಅತೀ ವೇಗವಾಗಿ ಸಾಗಬಲ್ಲುದು. ಅನುಭವವೇ ಮಹಾಗುರು ಎಂಬ ಸತ್ ಚಿಂತನೆಯಲ್ಲಿ ಪ್ರತಿಯೊಬ್ಬರೂ ಜ್ಞಾನಿಗಳಾಗಬೇಕು, ವಿಚಾರವಂತರಾಗಬೇಕು. ತಾಳ್ಮೆ, ಸಹನೆಗಳ ಮೂಲಕ ಅಧ್ಯಾತ್ಮದ ಒಳಹೊಕ್ಕು ಮಾನುಷ ಜೀವನಕ್ಕೆ ಒಂದು ಶ್ರೇಷ್ಠ ಅರ್ಥ ನೀಡುವಂತಾಗಬೇಕೆಂಬ ಸದಾಶಯದ ಪಾಠ ಅನಾದಿಕಾಲದಿಂದಲೇ ಗುರುವಚನವಾಗಿದೆ. ಈ ಆಶಯವನ್ನು ಪರಿಪಕ್ವತೆಯಿಂದ ಪರಿಣಾಮಾತ್ಮಕವಾಗಿ ನಡೆಸಿಕೊಂಡು ಬಂದ ಅವಧೂತ ಪರಂಪರೆಯ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗೌರವಾಧರದ ನಮನಗಳು.
ಅಧ್ಯಾತ್ಮದ ಜೊತೆಜೊತೆಗೆ ಜೀವನ ಕೌಶಲ್ಯದ ವೈಚಾರಿಕತೆಯೇ ಶ್ರೀಗಳ ಜನ್ಮದಿನೋತ್ಸವ ಗ್ರಾಮೋತ್ಸವವಾಗಿ ನಿಸ್ವಾರ್ಥತೆಯಿಂದ ಸಮಾಜಹಿತವಾಗಿ ನಡೆಯಲು ಕಾರಣವಾಗಿದೆ. ಇಲ್ಲಿ ಲೌಕಿಕ, ಅಲೌಕಿಕ ಬದುಕಿನ ಅಪೂರ್ವ ಸಂಗಮವಿದೆ. ಮಾನವ ಧರ್ಮದ ತಳಹದಿಯಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಮುನ್ನುಡಿಯ ಉತ್ಸವ. ಸಾಮಾಜಿಕ ಚಿಂತನೆಯ ಮನೋಭಾವ ಬೆಳೆಸಲು ಪ್ರೇರಣೆಯಾಗುವ ಹಬ್ಬ. 2021 ರಿಂದ 2024 ರ ಒಡಿಯೂರು ರಥೋತ್ಸವದವರೆಗೆ ವರ್ಷಪೂರ್ತಿ ಶ್ರೀಗಳ ಷಷ್ಠ್ಯಬ್ದದ ಅಂಗವಾಗಿ ಸಮಾಜದ ಹತ್ತಾರು ದೃಷ್ಟಿಕೋನಗಳಲ್ಲಿ ನೂರಾರು ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ನಡೆದು ತ್ರಿವಳಿ ಜಿಲ್ಲೆಯಾದ್ಯಂತ ಸಾತ್ವಿಕ ಸಂಚಲನ ಮೂಡಿಸಿತ್ತು.
ಗ್ರಾಮೋತ್ಸವ ಹೀಗೆ ನಡೆಯುತ್ತದೆ..:
ಈ ಬಾರಿ ಶ್ರೀಗಳ ಜನ್ಮದಿನೋತ್ಸವ ಆಗಸ್ಟ್ 8ರಂದು ಸಂಪನ್ನಗೊಳಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಶ್ರೀಗಳ ಸಂಕಲ್ಪದಂತೆ ಅವರ ಹುಟ್ಟುಹಬ್ಬ ಜನಹಿತ ಕಾರ್ಯಕ್ರಮಗಳೊಂದಿಗೆ ಶೋಷಿತ, ದುರ್ಬಲವರ್ಗದವರಲ್ಲಿ ಜೀವನೋತ್ಸಾಹ ಮೂಡಿಸುವ ಗ್ರಾಮೋತ್ಸವವಾಗಿ ಕಳೆದ ಹಲವಾರು ವರ್ಷಗಳಿಂದ ಜರಗುತ್ತಿರುವುದು ಸಂಸ್ಥಾನದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು-ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಶ್ರೀ ಗುರುದೇವ ಬಂಧುಗಳು, ಶ್ರೀಗಳವರ ಅಭಿಮಾನಿ ಭಕ್ತರು ಒಟ್ಟು ಸೇರಿ ರಚಿಸಿದ ಜನ್ಮದಿನೋತ್ಸವ-ಗ್ರಾಮೋತ್ಸವ ಸಮಿತಿಯ ಮೂಲಕ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಗ್ರಾಮೋತ್ಸವ ವಿಶಿಷ್ಟವಾಗಿ ಸಂಪನ್ನಗೊಳ್ಳುತ್ತಿದೆ.
ಗ್ರಾಮೋತ್ಸವದ ಪೂರ್ವಭಾವಿಯಾಗಿ ಒಡಿಯೂರು ಶ್ರೀ ಸಂಸ್ಥಾನದ ಪರಿಸರದಲ್ಲಿ ತುಳುನಾಡಿನ ಸಂಸ್ಕೃತಿಗೆ ಪೂರಕವಾದ ವೈಶಿಷ್ಠ್ಯಪೂರ್ಣವಾದ ಕ್ರೀಡಾಕೂಟಗಳು ಜರಗುತ್ತದೆ. ಗ್ರಾಮೋತ್ಸವದಂದು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಪೂರ್ವಾಹ್ನ ಶ್ರೀ ಗಣಪತಿ ಹವನ, ಆರಾಧ್ಯ ದೇವರಿಗೆ ವಿಶೇಷ ಪೂಜೆಯಾದ ಬಳಿಕ ರಾಜಾಂಗಣಕ್ಕೆ ಶ್ರೀಗಳನ್ನು ಭವ್ಯ ಶೋಭಾಯಾತ್ರೆಯಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತಿಸುವುದು. ಬಳಿಕ ರಾಜಾಂಗಣದಲ್ಲಿ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರಗುತ್ತವೆ. ಪೂಜನೀಯ ಸನ್ನಿವೇಶಗಳೊಂದಿಗೆ ಈ ಕಾರ್ಯಕ್ರಮ ಭಾವುಕರ ಕಣ್ಣಿಗೆ ಹಬ್ಬವಾಗಿರುತ್ತದೆ. ಶ್ರೀಗಳ ಪಾದಪೂಜೆ, ಶ್ರೀ ಗುರುಪಾದುಕಾರಾಧನೆಯ ಬಳಿಕ ತುಲಾಭಾರ ಸೇವೆ ಜರಗುವುದು, ಅನಂತರ ಉಯ್ಯಾಲೆಯಲ್ಲಿ ಕುಳ್ಳಿರಿಸಿ ಸುಮಂಗಲೆಯರು ಜೋಗುಳ ಹಾಡಿ ಸ್ತುತಿಸುತ್ತಾರೆ. ಸಮಾರಂಭದಲ್ಲಿ ಭಾಗಿಯಾಗಿರುವ ಎಲ್ಲರೂ ಶ್ರೀಗಳಿಗೆ ಗುರುವಂದನೆ, ಗುರುಕಾಣಿಕೆ ಸಮರ್ಪಿಸಿ ಆಶೀರ್ವಾದ ಪಡೆಯುತ್ತಾರೆ. ಶ್ರೀಗಳು ಜನ್ಮದಿನೋತ್ಸವದ ಸಂದೇಶ ನೀಡಿ ಭಕ್ತರನ್ನು ಹರಸುತ್ತಾರೆ.
ಪೂಜ್ಯರ ಆಪ್ತತೆ…:
ಪೂಜ್ಯರ ಆಪ್ತತೆಯೇ ಒಡಿಯೂರು ಶ್ರೀ ಸಂಸ್ಥಾನದ ಹೆಚ್ಚುಗಾರಿಕೆ. ಇಲ್ಲಿ ಪ್ರೀತಿ ಇದೆ. ಒಲುಮೆ ಇದೆ. ಶ್ರೀಗಳ ಹೃದಯ ವೈಶಾಲ್ಯತೆಯೇ ಧರ್ಮ ಮತ್ತು ಆಧ್ಯಾತ್ಮದ ಪಾಠವಾಗುತ್ತದೆ. ಇಲ್ಲಿಯ ಉತ್ಸವಗಳು ಸಂಸ್ಕೃತಿಯ ವಿಜ್ರಂಭಣೆಯಾದರೂ ಅದು ಧರ್ಮ-ಆಧ್ಯಾತ್ಮದ ಜೊತೆ ಸಮಾಜಮುಖಿ ಚಿಂತನೆಯಿಂದ ಹೊರತಾದುದಲ್ಲ ಎಂಬುದನ್ನು ಸಾಕ್ಷೀಕರಿಸುತ್ತದೆ. ಸಮಾಜದಿಂದ ಸಮಾಜಕ್ಕೆ ಎನ್ನುವ ಪರಿಕಲ್ಪನೆಯಲ್ಲಿ ಕ್ಷೇತ್ರ ಮುನ್ನಡೆಯುತ್ತಿರುವುದು ಇಲ್ಲಿನ ವಿಶೇಷವಾಗಿದೆ.
ಸಂಸ್ಥಾನದ ಕಿರು ನೋಟ..:
ಅವಧೂತ ಪರಂಪರೆಯ ಪಥದಲ್ಲಿ ಸಾಗಿದ ಶ್ರೀ ಗುರುದೇವಾನಂದ ಸ್ವಾಮೀಜಿಯವರು 1989ರಲ್ಲಿ ಒಡಿಯೂರುನಲ್ಲಿ ಶ್ರೀ ದತ್ತಾಂಜನೇಯ ಸ್ವಾಮಿ ಕ್ಷೇತ್ರ ಸ್ಥಾಪಿಸಿದರು. ಸಂಕಲ್ಪ ಶಕ್ತಿ ಮತ್ತು ಕರ್ತೃತ್ವ ಶಕ್ತಿಯಿಂದ ಯೌಗಿಕ ಸಾಧನೆಯ ಮೂಲಕ ಅತ್ಯಲ್ಪ ಅವಽಯಲ್ಲಿ ಅನೇಕ ಪವಾಡಗಳಿಂದ ಆಧ್ಯಾತ್ಮ ಎತ್ತರಕ್ಕೆ ಬೆಳೆದ ಶ್ರೀಗಳು ಭಕ್ತಿಗಾಗಿ ಮತ್ತು ಸಮಾಜದ ಶಕ್ತಿಗಾಗಿ ಧಾರ್ಮಿಕ ಭಾವ ಪಸರಿಸುವಿಕೆಗೆ ಸಾಂಸ್ಥಿಕ ವಿಸ್ತರಣೆಯನ್ನೂ ಮಾಡಿದರು. ಜಗದ್ವ್ಯಾಪಿಯಾದ ದತ್ತ ಮಹಾಪ್ರಭು, ಶಿವಾಂಶ ಸಂಭೂತನಾದ ಅಂಜನಾಪುತ್ರ ಮಾರುತಿ ಹೀಗೆ ವಿಷ್ಣು ಮತ್ತು ಶಿವನ ಅಂಶಗಳು ಒಂದೆಡೆ ವಿಲೀನಗೊಂಡು ಆರಾಧಿಸಲ್ಪಡುವ ವಿಶಿಷ್ಟ ಕ್ಷೇತ್ರವೇ ದಕ್ಷಿಣ ಗಾಣಗಾಪುರ ಎಂದು ಖ್ಯಾತಿ ಪಡೆದಿರುವ ಒಡಿಯೂರು. ಕ್ಷೇತ್ರದಲ್ಲಿ ಸಾಽ ಶ್ರೀ ಮಾತಾನಂದಮಯೀ ಭಕ್ತಿ ಪಂಥದ ರಾಗ ರಹಿತ ಜೀವನದ ಅವಧೂತ ಯೋಗಿನಿಯಾಗಿದ್ದಾರೆ.
ಏಕಾಂತದ ಧ್ಯಾನ, ತಪಸ್ಸಿಗಾಗಿ ನಿತ್ಯಾನಂದ ಗುಹೆ, ನಿತ್ಯ ಸುಪ್ರಭಾತ, ಭಜನೆ, ಸತ್ಸಂಗ, ಸ್ತೋತ್ರ ಪಠಣಕ್ಕೆ ಶ್ರೀ ಗುರುದೇವ ಧ್ಯಾನ ಮಂದಿರ, ನೈತಿಕ, ಯೋಗ ಶಿಕ್ಷಣ ನೀಡುವ ನಿಟ್ಟಿನಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಗುರುದೇವ ಆಧ್ಯಾತ್ಮ ಕೇಂದ್ರ, ಭಕ್ತರಿಗೆ ಅನ್ನದಾನಕ್ಕಾಗಿ ಶ್ರೀ ವಜ್ರಮಾತಾ ಅನ್ನಛತ್ರ, ಗರ್ಭಗುಡಿಯ ಹೊರಗೆ ಅಷ್ಟಪಟ್ಟಿ ಆಕಾರದಲ್ಲಿ ಸುಂದರವಾದ ಸುತ್ತುಗೋಪುರ, 40 ಅಡಿ ಎತ್ತರದ ರಮಣೀಯ ರಾಜಗೋಪುರ ಪ್ರತಿಯೊಂದು ಗೋಡೆಯಲ್ಲೂ ಪೌರಾಣಿಕ ಕಥಾನಕದ ಚಿತ್ರಣಗಳು, ವೇಸರ ಶಿಲ್ಪ ಶೈಲಿಯ ಅಷ್ಟಪಟ್ಟಿಯಾಕಾರದ 36.5 ಅಡಿ ಎತ್ತರದ ಶಿಲಾಮಯ ಗರ್ಭಗುಡಿ, ಸಂಸ್ಥಾನದ ನೈರುತ್ಯ ಭಾಗದಲ್ಲಿ ನಾಗ ಸಾನ್ನಿಧ್ಯ, ತುಸು ಪಕ್ಕದಲ್ಲಿ ವೃತ್ತಾಕಾರದ ಎರಡು ಅಂತಸ್ತಿನ ದತ್ತಪೀಠ. ಇಲ್ಲಿ ವಾರದಲ್ಲಿ ಮೂರು ದಿನ ಶ್ರೀಗಳು ಭಕ್ತರ ಸಮಸ್ಯೆ ಪರಿಹಾರಕ್ಕಾಗಿ ದಾರಿ ತೋರಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಕ್ಷೇತ್ರದ ಪಕ್ಕ ನೂತನವಾಗಿ ಉದ್ಘಾಟನೆಗೊಂಡ ಸುಸಜ್ಜಿತ ರಾಜಾಂಗಣ, ಸಂಸ್ಥಾನದಿಂದ 3 ಕಿ.ಮೀ. ದೂರದ ಕನ್ಯಾನದಲ್ಲಿ ಶ್ರೀ ಗುರುದೇವ ಕಲ್ಯಾಣ ಮಂಟಪ, ಇದರ ಸಮೀಪದಲ್ಲೇ ಸದ್ಗುರು ಶ್ರೀ ನಿತ್ಯಾನಂದ ಮಂದಿರ, ಯಾತ್ರಾರ್ಥಿಗಳ ತಂಗುವಿಕೆಗೆ ಶ್ರೀ ಗುರುದೇವ ಧರ್ಮಶಾಲೆ, ಕಲಾ ಕ್ಷೇತ್ರದ ಪೋಷಣೆಗಾಗಿ ಜೈ ಗುರುದೇವ ಕಲಾಕೇಂದ್ರ, ಶೈಕ್ಷಣಿಕ ಮತ್ತು ಸಂಸ್ಕಾರ ಕೇಂದ್ರಗಳಾಗಿರುವ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಅಽನದಲ್ಲಿ ಹತ್ತಾರು ಶಿಕ್ಷಣ ಸಂಸ್ಥೆಗಳು, ಶ್ರೀ ಗುರುದೇವ ಗುರುಕುಲ, ಶ್ರೀಗಳ ಗೋ ಪ್ರೀತಿಯ ಪ್ರತೀಕವಾಗಿ ಸುಸಜ್ಜಿತ ವಿಶಾಲ ಗೋಶಾಲೆ, ಶ್ರೀಗಳ ಇಚ್ಚೆಯಂತೆ ಸಂಸ್ಕಾರ-ಸಹಕಾರ, ಸಂಘಟನೆ – ಸಮೃದ್ಧಿ ಸೂತ್ರದಲ್ಲಿ ಆರಂಭವಾದ ಗ್ರಾಮ ವಿಕಾಸ ಯೋಜನೆ ಇಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ನೆರೆಯ ಕಾಸರಗೋಡು ಜಿಲ್ಲೆಗಳಲ್ಲಿ ವ್ಯಾಪಿಸಿ ಹಲವರ ಬಾಳಿಗೆ ಬೆಳಕಾಗಿದೆ. ಸಂಸ್ಥಾನದ ಸಹಸಂಸ್ಥೆಗಳ ಆರ್ಥಿಕ ನಿರ್ವಹಣೆಗಾಗಿ ರಚನೆಗೊಂಡು ಅತ್ಯಲ್ಪ ಅವಧಿಯಲ್ಲಿ ಪ್ರಗತಿ ಪಥದಲ್ಲಿ ಸಾಗಿ ಕರ್ನಾಟಕದಲ್ಲಿಯೇ ನಂ.1 ಸ್ಥಾನ ಪಡೆದ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆ ಹೀಗೆ ಹತ್ತಾರು ಸಾಂಸ್ಥಿಕ ಬೆಳವಣಿಗೆಗಳೊಂದಿಗೆ ಶ್ರೀ ಸಂಸ್ಥಾನ ಜಗತ್ತಿನಾದ್ಯಂತ ಶ್ರೇಷ್ಠವಾಗಿ ಗುರುತಿಸಲ್ಪಟ್ಟಿದೆ.
ಪಂಚ ಪರ್ವ ವಿಶೇಷತೆಗಳು..:
ಸಂಸ್ಥಾನದಲ್ಲಿ ಪ್ರತಿಷ್ಟಾ ಮುಹೂರ್ತ ಲಕ್ಷಿಸಿ ಪ್ರತೀ ವರ್ಷ ಪ್ರತಿಷ್ಠಾ ವರ್ಧಂತಿ, ಒಡಿಯೂರು ರಥೋತ್ಸವ – ತುಳುನಾಡ ಜಾತ್ರೆ ನಡೆಯುತ್ತದೆ. ಶ್ರೀರಾಮ ನವಮಿಯಿಂದ ಆರಂಭಗೊಂಡು ಹನುಮಜಯಂತಿಗೆ ಸಮಾಪನಗೊಳ್ಳುವ ಹನುಮಜಯಂತಿ, ನಾಗರಪಂಚಮಿಗೆ ವಿಶೇಷ ಸಾರ್ವಜನಿಕ ಆಶ್ಲೇಷ ಬಲಿ ಪೂಜೆ, ನವರಾತ್ರಿಯ ಪರ್ವಕಾಲದಲ್ಲಿ ಲಿಲಿತಾಂಬಿಕೆಯ ಆರಾಧನೆ ಲಲಿತಾ ಪಂಚಮಿ, 1 ವಾರಗಳ ದತ್ತ ಮಹಾಯಾಗದೊಂದಿಗೆ ದತ್ತಜಯಂತಿ, ಶ್ರೀಗುರುಗಳ ಜನ್ಮದಿನ – ಗ್ರಾಮೋತ್ಸವ ಬಹಳ ವಿಶೇಷವಾಗಿ ನಡೆಯುತ್ತವೆ.
ತುಳು ಭಾಷೆ ಒರಿಪುಗ – ಬಲೆ ತೇರ್ ಒಯಿಪುಗ..:
ಸಂಸ್ಕೃತಿ, ಸಂಸ್ಕಾರ ಮತ್ತು ಸಾಮರಸ್ಯಕ್ಕೆ ಪೂರಕವಾದ ತುಳುನಾಡಿನ ಭಾಷೆಯಾದ ತುಳುಭಾಷೆಯನ್ನು ಯಥಾವತ್ತಾಗಿ ಉಳಿಸಬೇಕೆಂಬ ಶ್ರೀಗಳ ಮನೋಹಂಬಲ ಸಂಸ್ಥಾನದಲ್ಲಿ ಅನೇಕಾನೇಕ ತುಳು ಭಾಷೆಗೆ ಪೂರಕವಾದ ಚಟುವಟಿಕೆಗಳನ್ನು ಆಯೋಜಿಸಿದೆ. ೨೦೦೧ ರಲ್ಲಿ ತುಳುನಾಡಿನ ಪ್ರಪ್ರಥಮ ‘ತುಳು ಸಾಹಿತ್ಯ ಸಮ್ಮೇಳನ’ ಒಡಿಯೂರಿನಲ್ಲಿ ನಡೆದಿರುವುದು ಚರಿತ್ರೆಯಾಗಿದೆ. ‘ಒಡಿಯೂರ‍್ದ ತುಳು ಕೂಟ’, ‘ವಿದ್ಯಾರ್ಥಿ ತುಳುಕೂಟ’ ಮುಖೇನ ತುಳು ಭಾಷೆಯ ಪೋಷಣೆಗಳು ಅಲ್ಲಲ್ಲಿ ಜರಗುತ್ತಿವೆ. ಒಡಿಯೂರು ರಥೋತ್ಸವದ ಸಂದರ್ಭ ‘ತುಳುನಾಡ್ದ ಜಾತ್ರೆ’ ಕಾರ್ಯಕ್ರಮದ ಮೂಲಕ ‘ತುಳುವರ ತುಲಿಪು, ತುಳು ಸಮ್ಮೇಳನ’, ಕೆಸರ್‌ಡ್ ಒಂಜಿ ದಿನ, ಆಟಿದ ಆಯನೋ ಹೀಗೆ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಲವಾರು ವರುಷಗಳಿಂದ ನಡೆಸಲಾಗುತ್ತಿದೆ.
ತುಳು ಭಾಷೆಯ ಉಳಿವಿಗೆ ಒತ್ತು ಕೊಟ್ಟ ಶ್ರೀಗಳು..:
ಕೊರೋನಾ ಸಂದರ್ಭದಲ್ಲಿ ಸಮಯವನ್ನು ವ್ಯರ್ಥಮಾಡದ ಶ್ರೀಗಳು ತುಳು ಲಿಪಿಯ ಬಗ್ಗೆ ಅಧ್ಯಯನ ಮಾಡಲಾರಂಭಿಸಿದರು. ತುಳು ಲಿಪಿಯನ್ನು ಕಲಿತ ಶ್ರೀಗಳು 186ಕ್ಕಿಂತಲೂ ಹೆಚ್ಚು ಶ್ಲೋಕಗಳನ್ನು ಹೊಂದಿರುವ ಗುರುಗೀತೆಯನ್ನು ಬರೆದುದಲ್ಲದೆ ಜೀವನ್ಮುಕ್ತ ಗೀತೆ, ಅವಧೂತ ಉಪನಿಷತ್, ಈಶಾವಾಸ್ಯ ಉಪನಿಷತ್, ಹನುಮಾನ್ ಚಾಲೀಸ್ , ಸುಂದರ ಕಾಂಡ ಇನ್ನಿತರ ಕೃತಿಗಳನ್ನು ರಚಿಸಿದ್ದಾರೆ. ಶ್ರೀಗಳು ಪ್ರಪ್ರಥಮವಾಗಿ ಏಳುನೂರು ಶ್ಲೋಕಗಳಿಂದ ತುಂಬಿದ 18 ಅಧ್ಯಾಯದ ಭಗವದ್ಗೀತೆಯನ್ನು ತುಳುಲಿಪಿಯ ಕೈಬರಹದಲ್ಲಿ ಬರೆದಿದ್ದಾರೆ. ಶ್ರೀ ಸಂಸ್ಥಾನ ಒಡಿಯೂರು ಅಧ್ಯಯನ ಕೇಂದ್ರವನ್ನು ಈಗಾಗಲೇ ಮಂಗಳೂರಿನ ವಿಶ್ವವಿದ್ಯಾಲಯ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ವಿಶ್ವವಿದ್ಯಾನಿಲಯದ ಸಂಧ್ಯಾ ಕಾಲೇಜಿನಲ್ಲಿ ಆರಂಭಿಸುವುದು ತುಳು ಕಲಿಕಾಸಕ್ತರಿಗೆ ಮತ್ತಷ್ಟು ಪೂರಕವಾಗಿದೆ.
ಗ್ರಾಮ ಸ್ವಚ್ಛತೆಯ ಪರಿಕಲ್ಪನೆ..:
ಗ್ರಾಮ ಸ್ವಚ್ಛತೆಯ ಪರಿಕಲ್ಪನೆಗೆ ಮೂರ್ತರೂಪ ನೀಡಿದವರು ಒಡಿಯೂರು ಶ್ರೀಗಳು, 2001ರಿಂದ ಸ್ವಚ್ಛತಾ ಅಭಿಯಾನ ನಿರಂತರವಾಗಿ ಗ್ರಾಮ ಪರಿಸರ ಸ್ವಚ್ಛಗೊಳಿಸುವುದರೊಂದಿಗೆ ಜನರಿಗೆ ಸ್ವಚ್ಛತೆಯ ಅರಿವು ಮೂಡಿಸುವುದು, ಜೊತೆಗೆ ದೇಶಾಭಿಮಾನ ಬೆಳೆಸುವ ಕಾರ್ಯ ಪ್ರಾಮಾಣಿಕವಾಗಿ ಜರಗುತ್ತಿದೆ. ಈ ಬಾರಿ ಗ್ರಾಮೋತ್ಸವದ ಆಂಗವಾಗಿ ಆ.3 ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಏಕಕಾಲದಲ್ಲಿ 365 ಕಡೆಗಳಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ ನಡೆಯಿತು. ಪರಿಸರ ಸಂರಕ್ಷಣೆಯ ವನಮಹೋತ್ಸವವನ್ನು ಎಲ್ಲಾ ಗ್ರಾಮಗಳಲ್ಲಿ ನಡೆಸಲಾಗುತ್ತಿದೆ. ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ನೂರಾರು ಗ್ರಾಮಗಳಲ್ಲಿ ಸಂಚರಿಸಿ ’ಸನಾತನ ಸಂಸ್ಕಾರದ ಸಂಕಲ್ಪ’ ಶಿರೋನಾಮೆಯ ಅಡಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶ್ರೀಗಳಿಂದ ನಡೆದಿದೆ.
ಸಮಾಜದಿಂದ ಸಮಾಜಕ್ಕೆ ಎನ್ನುವ ಪರಿಕಲ್ಪನೆ ಗ್ರಾಮೋತ್ಸವದಲ್ಲಿ ಅಡಗಿದೆ
ಗ್ರಾಮೋತ್ಸವದ ಪರಿಕಲ್ಪನೆ ಒಂದಷ್ಟು ಸಮಾಜಮುಖಿಯಾಗಿ, ಸಮಾಜದ ಉನ್ನತಿಗಾಗಿ ಬೇಕಾಗುವಂತಹ ಸೇವೆಗಳನ್ನು ಸಮಾಜಕ್ಕೆ ನೀಡಬೇಕೆನ್ನುವ ದೃಷ್ಟಿಯಲ್ಲಿ ಈ ಒಂದು ಕಾರ್ಯಕ್ರಮಕ್ಕೆ ಒಪ್ಪಿಗೆಯನ್ನು ಕೊಟ್ಟಿದ್ದೇವೆ. ಭಕ್ತಾದಿಗಳು ಹಾಗೂ ಗುರುದೇವ ಬಂಧುಗಳ ಸೇರುವಿಕೆಯಲ್ಲಿ ಬೇರೆಬೇರೆ ಸೇವಾ ರೂಪದಲ್ಲಿ ಕಾರ್ಯಕ್ರಮ ಸಾಕಾರಗೊಳ್ಳಲಿದೆ. ಸಮಾಜದಿಂದ ಸಮಾಜಕ್ಕೆ ಎನ್ನುವ ಮಹತ್ವಾಕಾಂಕ್ಷೆ ಗ್ರಾಮೋತ್ಸವದಲ್ಲಿ ಅಡಗಿದೆ. ಸಮಾಜದ ಕಟ್ಟಕಡೇಯ ವ್ಯಕ್ತಿಗೂ ಸೇವೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸೇವೆಗಳನ್ನು ವಿಭಾಗಿಸಲಾಗಿದೆ. ಸಾಧಕನಿಗೆ ಈ ಸಂಭ್ರಮದ ಅವಶ್ಯಕತೆ ಇಲ್ಲ. ಜನರ ಸೇವೆ, ಉತ್ತಮ ಕಾರ್ಯ ಮಾಡುವಲ್ಲಿ ನಾವು ಪ್ರೋತ್ಸಾಹಿಸಬೇಕೆನ್ನುವ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಆಯೋಜನೆಯಾಗಿದೆ ಎಲ್ಲರಿಗೂ ಶುಭವಾಗಲಿ.
ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಗುರುದೇವದತ್ತ ಸಂಸ್ಥಾನ ಒಡಿಯೂರು

ಶ್ರೀಕ್ಷೇತ್ರದ ಮುಂದಿನ ಯೋಜನೆಗಳು
ಒಡಿಯೂರಿನ ಗ್ರಾಮ ವಿಕಾಸ ಯೋಜನೆ, ಗುರುಕುಲ ಮಾದರಿಯ ಶಿಕ್ಷಣಾಭಿವೃದ್ಧಿ ಜತೆ ಶ್ರೀಕ್ಷೇತ್ರದ ಬೆಟ್ಟದಲ್ಲಿ 108 ಅಡಿ ಎತ್ತರದ ಹನುಮಂತನ ಮೂರ್ತಿಯನ್ನು ಸ್ಥಾಪಿಸುವ ಯೋಚನೆಯಿದೆ. ಪಂಚಮುಖಿ ಆಂಜನೇಯ ಸ್ವಾಮಿಯ ಪಾದಸ್ಪರ್ಶದ ಭಾಗ್ಯ ಭಕ್ತಾದಿಗಳಿಗೆ ಲಭಿಸಬೇಕು ಎನ್ನುವುದೇ ನಮ್ಮ ಇಚ್ಛೆ ಇದರೊಂದಿಗೆ ಆಯುರ್ವೇದ ಸಸಿಗಳ ಸಂರಕ್ಷಣೆಯೂ ನಮ್ಮ ಧೈಯ. ಹಣ್ಣು-ಹಂಪಲುಗಳ ಮರಗಳನ್ನು ಬೆಳೆಸಿ ಪ್ರಾಣಿ, ಪಕ್ಷಿಗಳಿಗೆ ಆಸರೆ ಯಾಗುವ ಯೋಜನೆ ಎನ್ನುತ್ತಾರೆ ಶ್ರೀಗಳು.