ಉಪ್ಪಿನಂಗಡಿ: ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಆರೋಪಿಯ ಅಪರಾಧ ಸಾಬೀತಾಗಿದ್ದು, ಆತನಿಗೆ ಪುತ್ತೂರು ಸಿವಿಲ್ ನ್ಯಾಯಾಲಯ 2,15,000ರೂ. ದಂಡ ಹಾಗೂ ತಪ್ಪಿದ್ದಲ್ಲಿ ಜೈಲು ಶಿಕ್ಷೆಯನ್ನು ಘೋಷಿಸಿ ತೀರ್ಪು ನೀಡಿದೆ.
ನಿಡ್ಡೋಡಿ ಕ್ರೆಡಿಟ್ ಕಾರ್ಪೋರೇಷನ್‌ನಲ್ಲಿ ಕೊಕ್ಕಡದ ಸುರೇಶ್ ಶಬರಾಯ ಎಂಬವರು 1.65 ಲಕ್ಷ ರೂ. ವನ್ನು ಸಾಲವಾಗಿ ಪಡೆದಿದ್ದರು. ಆದರೆ ಅವರು ಅದನ್ನು ಕಟ್ಟದಿದ್ದಾಗ ನಿಡ್ಡೋಡಿ ಕ್ರೆಡಿಟ್ ಕಾರ್ಪೋರೇಷನ್‌ನ ಮಾಲಕ ರವೀಂದ್ರ ಪ್ರಭು ಎಂಬವರು ಸುರೇಶ್ ಶಬರಾಯರ ಮೇಲೆ ಪುತ್ತೂರು ಸಿವಿಲ್ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಧೀಶರು ಎ.23ರಂದು ತೀರ್ಪು ನೀಡಿದ್ದು, ಅಪರಾಧಿಗೆ 2,15,000ರೂ. ದಂಡ ಹಾಗೂ ದಂಡವನ್ನು ಪಾವತಿಸಲು ತಪ್ಪಿದ್ದಲ್ಲಿ ಆರು ತಿಂಗಳ ಕಾಲ ಜೈಲು ಶಿಕ್ಷೆಯನ್ನು ಘೋಷಿಸಿದ್ದಾರೆ. ಇದರಲ್ಲಿ 2,10,000ರೂ.ವನ್ನು ದೂರುದಾರರಾದ ರವೀಂದ್ರ ಪ್ರಭು ಅವರಿಗೆ ಹಾಗೂ 5 ಸಾವಿರ ರೂ.ವನ್ನು ನ್ಯಾಯಾಲಯಕ್ಕೆ ಪಾವತಿಸಲು ಆದೇಶಿಸಿದ್ದಾರೆ. ದೂರುದಾರರ ಪರ ಪುತ್ತೂರಿನ ಖ್ಯಾತ ವಕೀಲ ಬಿ. ನರಸಿಂಹ ಪ್ರಸಾದ್ ವಾದಿಸಿದರು.