‘ವೃತ್ತಿ ನೈಪುಣ್ಯತೆ ಗಳಿಸಲು ನಿರಂತರ ಹೋರಾಟ ಅಗತ್ಯ’-ನ್ಯಾ|ವಿಶ್ವಜಿತ್ ಶೆಟ್ಟಿ
ಪುತ್ತೂರು:ವಕೀಲ ವೃತ್ತಿಯಲ್ಲಿ ಹಿರಿಯರ ಸೇವೆಗೆ ಅವಲಂಬಿತರಾಗದೆ ವೃತ್ತಿಯಲ್ಲಿ ಮುನ್ನಡೆಯಬೇಕು.ವಕೀಲರಲ್ಲಿ ವೃತ್ತಿಪರತೆಯಿರಬೇಕು.ವಕೀಲ ವೃತ್ತಿಯಲ್ಲಿ ಯಾವುದೇ ಶಾರ್ಟ್‌ಕಟ್ ಇಲ್ಲ. ನೈಪುಣ್ಯತೆ ಗಳಿಸಲು ನಿರಂತರ ಹೋರಾಟ ಅಗತ್ಯ.ಪ್ರತಿದಿನ ಓದು, ಶ್ರಮ ವಕೀಲ ವೃತ್ತಿಯಲ್ಲಿ ಅವಶ್ಯಕ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಹೇಳಿದರು.
ಪುತ್ತೂರು ವಕೀಲರ ಸಂಘದ ಪರಾಶರ ಸಭಾಂಗಣದಲ್ಲಿ ಮೇ.2ರಂದು ಸಂಜೆ ನಡೆದ ಪುತ್ತೂರು ಬಾರ್ ಅಸೋಸಿಯೇಷನ್‌ನ ವಾರ್ಷಿಕ ದಿನಾಚರಣೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಕೀಲರು ಕೋರ್ಟ್‌ನಲ್ಲಿ ವಾದ ಮಾಡುವಾಗ ಕಕ್ಷಿಗಾರರ ಮೂಲಭೂತ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಾರೆ.ಹಕ್ಕುಗಳು ಇದ್ದಂತೆ ಕರ್ತವ್ಯಗಳೂ ಇದೆ.ವಕೀಲರ ಸೇವೆ ಕೋರ್ಟ್ ಆವರಣದೊಳಗೆ ಸೀಮಿತವಾಗಿರದೇ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಳ್ಳಬೇಕು.ಪರಿಸರ ಉಳಿಸುವುದು ಪ್ರಜೆಗಳ ಮೂಲಭೂತ ಕರ್ತವ್ಯ.ಅದು ಬಹಳ ಅವಶ್ಯವೂ ಆಗಿದೆ ಎಂದು ಹೇಳಿದ ನ್ಯಾಯಮೂರ್ತಿಗಳು, ಪ್ರಸ್ತುತ ಜಗತ್ತಿನ ತಾಪಮಾನ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಸಂಘದ ನೂತನ ಪದಾಧಿಕಾರಿಗಳು ಹಮ್ಮಿಕೊಂಡಿರುವ ಪರಿಸರ ಜಾಗೃತಿ ಶ್ಲಾಘನೀಯ ಎಂದರು.ಸಂಘದ ಮೂಲಕ ಯುವ ವಕೀಲರಿಗೆ ನೀಡುವ ತರಬೇತಿಯಲ್ಲಿ ಕಾನೂನು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಕಾರ್ಯಾಗಾರ ನಡೆಸುವುದು ಅರ್ಥಪೂರ್ಣ.ನ್ಯಾಯವಾದಿಗಳು ಸಮಾಜದಲ್ಲಿ ಶಾಂತಿ ನೆಲಸುವಲ್ಲಿ ಕಾನೂನು ಪಾಲನೆ ಮಾಡುವುದು ಮುಖ್ಯ.ಇದಕ್ಕಾಗಿ ವಕೀಲರ ಸೇವೆ ಮುಖ್ಯವಾಗಿದ್ದು ವಕೀಲ ವೃತ್ತಿಯನ್ನು ಇದಕ್ಕಾಗಿಯೇ ನೋಬೆಲ್ ಪ್ರೊಫೆಷನ್ ಎಂದು ಕರೆಯಲಾಗುತ್ತಿದೆ ಎಂದರು.
ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ನಿರ್ಮಲ್ ಕುಮಾರ್ ಜೈನ್ ಮಾತನಾಡಿ, ಪುತ್ತೂರಿನ ನ್ಯಾಯವಾದಿಗಳು ಸಾಧನೆ ಮಾಡುವ ಪ್ರವೃತ್ತಿ ಉಳ್ಳವರು.ಹೀಗಾಗಿ ವಕೀಲ ವೃತ್ತಿಗೆ ಮಾತ್ರ ಅಂಟಿಕೊಳ್ಳದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕು.ಕಾನೂನು ಕಲಿತವರಿಗೆ ಎಲ್ಲಿಯೂ ಅವಕಾಶಗಳಿವೆ.ಗ್ರಾಹಕರ ವೇದಿಕೆಯಲ್ಲಿ ಉತ್ತಮ ಅವಕಾಶಗಳಿವೆ.ವಕಾಲತ್ತಿನ ಜೊತೆ ಸಮಾಜ ಸೇವೆ ಮಾಡುವಂತೆ ತಿಳಿಸಿದರು.
ಹಿರಿಯ ನ್ಯಾಯಾವಾದಿ ರಾಮ ಮೋಹನ್ ರಾವ್ ಮಾತನಾಡಿ, ಪ್ರಾರಂಭದಲ್ಲಿ ಕೇವಲ 36 ಮಂದಿ ಸದಸ್ಯರನ್ನು ಒಳಗೊಂಡಿದ್ದ ಸಂಘ ಈಗ ಸಾಕಷ್ಟು ಮಂದಿ ಸದಸ್ಯರನ್ನು ಒಳಗೊಂಡಿದೆ. ಹಿಂದೆ ಮಹಿಳಾ ಸದಸ್ಯರೇ ಇರಲಿಲ್ಲವಾದರೂ ಪ್ರಸ್ತುತ ಬಹಳಷ್ಟು ಮಂದಿ ಮಹಿಳಾ ಸದಸ್ಯರು, ಯುವ ನ್ಯಾಯವಾದಿಗಳಿದ್ದಾರೆ ಎಂದರು.
ಸಂಘದ ನಿರ್ಗಮಿತ ಅಧ್ಯಕ್ಷ ಮನೋಹರ್ ಕೆ.ವಿ.ಮಾತನಾಡಿ, ಸಂಘದ ಸದಸ್ಯರ ಪ್ರೀತಿ, ನಂಬಿಕೆ ವಿಶ್ವಾಸದಿಂದ ಐದು ವರ್ಷಗಳನ್ನು ಮುನ್ನಡೆಸಲು ಸಾಧ್ಯವಾಗಿದೆ.ಎಲ್ಲಾ ಪದಾಧಿಕಾರಿಗಳ ಉತ್ತಮ ಸಹಕಾರ, ಪ್ರೋತ್ಸಾಹ ದೊರೆತಿದೆ.ನೂತನ ಅಧ್ಯಕ್ಷರಲ್ಲಿ ಬಹಳಷ್ಟು ಕನಸು, ಯೋಜನೆಗಳಿರಬಹುದು.ಅದೆಲ್ಲವೂ ಸಾಕಾರವಾಗಲಿ.ನೂತನ ಪದಾಧಿಕಾರಿಗಳ ಮೂಲಕ ಪುತ್ತೂರಿನ ಹಿರಿಮೆ ವೃದ್ಧಿಯಾಗಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ನೂತನ ಅಧ್ಯಕ್ಷ ಜಗನ್ನಾಥ ರೈ ಜಿ ಮಾತನಾಡಿ, ಪುತ್ತೂರಿನ ವಕೀಲರ ಸಂಘವು ನೂರೈವತ್ತು ವರ್ಷಗಳ ಇತಿಹಾಸವಿರುವ ಸಂಘವಾಗಿದೆ.ಶ್ರೇಷ್ಠ ನ್ಯಾಯವಾದಿ, ನ್ಯಾಯಾಧಿಶರನ್ನು ನೀಡಿದ ಸಂಘ.ಇಂತಹ ಸಂಘದಲ್ಲಿ ಅಧ್ಯಕ್ಷನಾಗಿರುವುದು ಅವಿಸ್ಮರಣೀಯ ದಿನ.ಅಧ್ಯಕ್ಷ ಹುದ್ದೆಯನ್ನು ಅಽಕಾರ ಎಂದು ತಿಳಿಯದೆ ಹೊಣೆಗಾರಿಕೆಯಾಗಿ ನಿಭಾಯಿಸುತ್ತೇನೆ. ಅನುಭವೀ ತಂಡದ ಮೂಲಕ ಎಲ್ಲರ ಸಹಕಾರದಿಂದ ಸಂಘವನ್ನು ಯಾವುದೇ ಚ್ಯುತಿ ಬಾರದಂತೆ ಮುನ್ನಡೆಸಲಾಗವುದು.ಸಂಘದ ಮೂಲಕ ಯುವ ನ್ಯಾಯವಾದಿಗಳಿಗೆ ತರಬೇತಿ, ಸಹಕಾರಿ ಸಂಘ ರಚನೆ, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಪರಿಸರ ನಿರ್ಮಾಣ ಮೊದಲಾದ, ಸಂಘದ ಮುಂದಿನ ಯೋಜನೆಗಳನ್ನು ತಿಳಿಸಿ ಎಲ್ಲರ ಸಹಕಾರ ಯಾಚಿಸಿದರು.
ಪದಗ್ರಹಣ: ಸಂಘದ ನಿರ್ಗಮಿತ ಪದಾಧಿಕಾರಿಗಳು ನೂತನ ಪದಾಧಿಕಾರಿಗಳಿಗೆ ಹೂಗುಚ್ಚ ನೀಡಿ ಶಾಲು ಹಾಕುವ ಮೂಲಕ ಪದಗ್ರಹಣ ನಡೆಸಲಾಯಿತು.
ಸನ್ಮಾನ: ಮುಖ್ಯ ಅತಿಥಿಯಾಗಿದ್ದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ, ನಗರ ಯೋಜನಾ ಪ್ರಾಽಕಾರದ ಅಧ್ಯಕ್ಷರಾಗಿ ನೇಮಕಗೊಂಡ ವಕೀಲರ ಸಂಘದ ಮಾಜಿ ಅಧ್ಯಕ್ಷ ಭಾಸ್ಕರ ಕೋಡಿಂಬಾಳ, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ಸಂಘದ ಮಾಜಿ ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ, ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾಗಿ ಆಯ್ಕೆಯಾದ ಅರುಣಾದಿನಕರ ರೈಯವರನ್ನು ಸನ್ಮಾನಿಸಲಾಯಿತು.ಸಂಘದ ಚುನಾವಣೆಯಲ್ಲಿ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ಭಾಸ್ಕರ ಕೋಡಿಂಬಾಳ, ಕಿಶೋರ್ ಕೊಳತ್ತಾಯ, ದೀಪಕ್ ಬೊಳುವಾರು, ನಿಕಟಪೂರ್ವ ಪದಾಧಿಕಾರಿಗಳಾದ ಅಧ್ಯಕ್ಷ ಮನೋಹರ್ ಕೆ.ವಿ., ಉಪಾಧ್ಯಕ್ಷ ಕಕ್ವೆ ಕೃಷ್ಣಪ್ಪ ಗೌಡ, ಕಾರ್ಯದರ್ಶಿ ಚಿನ್ಮಯ್ ರೈ,ಕೋಶಾಧಿಕಾರಿ ಶ್ಯಾಮ್ ಪ್ರಸಾದ್ ಕೈಲಾರ್, ಜತೆ ಕಾರ್ಯದರ್ಶಿ ಸೀಮಾ ನಾಗರಾಜ್ ಅವರನ್ನೂ ಗೌರವಿಸಲಾಯಿತು.
ನೂತನ ಜತೆ ಕಾರ್ಯದರ್ಶಿ ಮಮತಾ ಸುವರ್ಣ ಪ್ರಾರ್ಥಿಸಿದರು.ಅಶ್ವಿತ್ ಎ.ಜೆ.ತಂಡದವರು ಸಂವಿಧಾನದ ಪೀಠಿಕೆಯ ಹಾಡು ಹಾಡಿದರು.ಸಂಘದ ನೂತನ ಕಾರ್ಯದರ್ಶಿ ಚಿನ್ಮಯ್ ರೈ ಎನ್ ಸ್ವಾಗತಿಸಿದರು.ನ್ಯಾಯವಾದಿಗಳಾದ ಎನ್.ಗೋಪಾಲಕೃಷ್ಣ, ಚಿದಾನಂದ ಬೈಲಾಡಿ, ಉದಯಶಂಕರ್ ಶೆಟ್ಟಿ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು.ಮಾಜಿ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ನೂತನ ಪದಾಽಕಾರಿಗಳ ಪರಿಚಯ ಮಾಡಿದರು.ನೂತನ ಕೋಶಾಽಕಾರಿ ಮಹೇಶ್ ಕೆ.ಸವಣೂರು ಅತಿಥಿಗಳ ಪರಿಚಯ ಮಾಡಿದರು.ಸಿಲ್ವಿಯಾ ಡಿ’ಸೋಜ ಹಾಗೂ ಶ್ಯಾಮ್‌ಪ್ರಸಾದ್ ಕೈಲಾರ್ ಕಾರ್ಯಕ್ರಮ ನಿರೂಪಿಸಿ, ಸಂಘದ ನೂತನ ಉಪಾಧ್ಯಕ್ಷ ಮೋನಪ್ಪ ಎಂ ಅಳಿಕೆ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಘದ ವಾರ್ಷಿಕ ಸಂಭ್ರಮ ಸಂಗೀತ, ಮನರಂಜನೆ ಸಹಿತ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.